ಸ್ಯಾನ್ ಫ್ರಾನ್ಸಿಸ್ಕೋ: ಕೋವಿಡ್ ವೈರಸ್‌ನ ಹೊಸ ರೂಪಾಂತರಿಯ ಒಮಿಕ್ರಾನ್ ಮೊದಲ ಪ್ರಕರಣ ಅಮೆರಿಕಾದಲ್ಲಿ ಬುಧವಾರ ದಾಖಲಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಕ್ಯಾಲಿಫೋರ್ನಿಯಾಗೆ ಹಿಂದಿರುಗಿದ ಲಸಿಕೆ ಹಾಕಿದ ಪ್ರಯಾಣಿಕನಲ್ಲಿ ಓಮಿಕ್ರಾನ್ ರೂಪಾಂತರದ ವೈರಸ್ ಪತ್ತೆಯಾಗಿದೆ.
ಅಮೆರಿಕಾದ ಅಗ್ರ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಶ್ವೇತಭವನದಲ್ಲಿ ಸಂಶೋಧನೆಯ ವರದಿಯನ್ನು ಘೋಷಿಸಿದ್ದಾರೆ.
ಸೋಂಕಿತ ವ್ಯಕ್ತಿಯನ್ನು ನವೆಂಬರ್ 22 ರಂದು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಪ್ರಯಾಣಿಕ ಎಂದು ಗುರುತಿಸಲಾಗಿದ್ದು, ರೋಗಲಕ್ಷಣಗಳು ಕಂಡು ಬಂದ ಬಳಿಕ ಸೋಮವಾರ ಕೋವಿಡ್ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದ್ದು, ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮಂಗಳವಾರ ಸಂಜೆ ರೋಗಿಯಿಂದ ಮಾದರಿಯನ್ನು ಪಡೆದು ರಾತ್ರಿಯಿಡಿ ಸಂಶೋಧನೆ ಮಾಡಿ ಓಮಿಕ್ರಾನ್ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸೋಂಕಿತ ವ್ಯಕ್ತಿ ಈಗಾಗಲೇ ಮಾಡರ್ನಾ ಲಸಿಕೆಯ ಪೂರ್ಣ ಎರಡು ಡೋಸ್‌ಗಳನ್ನು ಪಡೆದಿದ್ದು, ಬೂಸ್ಟರ್ ಶಾಟ್ ಒಅಡೆಯಬೇಕಾಗಿತ್ತು. ವ್ಯಕ್ತಿ ಸುಧಾರಿಸುತ್ತಿದ್ದಾರೆ ಎಂದು ಕ್ಯಾಲಿಫೋರ್ನಿಯಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.