ವಾಷಿಂಗ್ಟನ್: ವೈರಸ್ ಹೊಡೆತಕ್ಕೆ ತತ್ತರಿಸಿ ಹೋಗಿರುವ ಅಮೆರಿಕಾದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 1,433 ಜನರು ಬಲಿಯಾಗುವ ಮೂಲಕ ಮರಣಮೃದಂಗ ಮುಂದುವರೆಯುತ್ತಲೇ ಇದೆ. ಒಟ್ಟಾರೆಯಾಗಿ ಈ ದೇಶದಲ್ಲಿ 42 ಸಾವಿರಕ್ಕಿಂತ ಹೆಚ್ಚು ಜನರು ಕೋವಿಡ್ 19 ಮಹಾಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಜಾನ್ಸ್ ಹಾಫ್ ಕಿನ್ಸ್ ಯುನಿವರ್ಸಿಟಿ ತನ್ನ ವರದಿಯಲ್ಲಿ ತಿಳಿಸಿದೆ.
ಮತ್ತೊಂದು ಅಂಶವೆಂದರೆ ಲಾಕ್ ಡೌನ್ ಸಡಿಲಿಸುವಂತೆ ಅಮೆರಿಕಾದಲ್ಲಿ ಜನರಿಂದ ಒತ್ತಡಗಳು ಹೆಚ್ಚಾಗುತ್ತಿದ್ದು ಸರ್ಕಾರ ಅಡಕತ್ತರಿಗೆ ಸಿಲುಕಿದೆ. ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗಿದ್ದು ಈಗಾಗಲೇ 7,74,000 ಜನರು ವೈರಾಣುವಿಗೆ ತುತ್ತಾಗಿದ್ದಾರೆ.
ನ್ಯೂಯಾರ್ಕ್ ನಲ್ಲಿ ಅತೀ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದು ಮರಣ ಪ್ರಮಾಣ ಕೂಡ ಹೆಚ್ಚಾಗುತ್ತಲೇ ಇದೆ. 24 ಗಂಟೆಯ ಅವಧೀಯಲ್ಲಿ 478 ಮಂದಿ ಬಲಿಯಾಗಿದ್ದು ಕಳೆದೆರಡು ವಾರಗಳಿಗೆ ಹೋಲಿಸಿದರೆ ಮರಣ ಪ್ರಮಾಣ ಕಡಿತಗೊಂಡಿದೆ ಎಂದು ಅಲ್ಲಿನ ಗವರ್ನರ್ ಆ್ಯಂಡ್ರೂ ಕೋಮೊ ತಿಳಿಸಿದ್ದಾರೆ.
ಜಗತ್ತಿನಾದ್ಯಂತ 1,70, 436 ಜನರು ಕೋವಿಡ್ 19 ಮಹಾಮಾರಿಗೆ ಕೊನೆಯುಸಿರೆಳೆದಿದ್ದು 24,81, 287 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಮಾತ್ರವಲ್ಲದೆ 6,46,854 ಜನರು ವೈರಾಣುವಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.