ವಾಷಿಂಗ್ಟನ್: ಕೋವಿಡ್-19 ವೈರಸ್ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿರುವ ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ 1,536 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 93, 533ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.
ಸುಮಾರು 15 ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದು, 3 ಲಕ್ಷಮಂದಿ ಗುಣಮುಖರಾಗಿದ್ದಾರೆ. ನ್ಯೂಯಾರ್ಕ್ ನಗರವೊಂದರಲ್ಲೆ 3 ಲಕ್ಷ ವೈರಸ್ ಸೋಂಕಿತರಿದ್ದು 28 ಸಾವಿರಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಕೋವಿಡ್19 ವೈರಸ್ ತಡೆಗಟ್ಟಲು ಇರುವ ಮೊದಲ ಅಸ್ತ್ರವೆಂದರೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಎಂದು ಮತ್ತೆ ಒತ್ತಿ ಹೇಳಿದ್ದಾರೆ. ಮಲೇರಿಯಾ ರೋಗದ ವಿರುದ್ಧ ನೀಡಲಾಗುವ ಈ ಔಷಧಿಯನ್ನು ವ್ಯಾಪಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೇ ಈ ಔಷಧವನ್ನು ವಿಶ್ವವ್ಯಾಪಿಗೊಳಿಸಬೇಕು ಎಂದರು.
ಏತನ್ಮಧ್ಯೆ ಕೋವಿಡ್ 19 ವೈರಸ್ ನ ಉಗಮ ಹೇಗೆ ಆಯಿತು ಎಂಬ ತನಿಖೆಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಒಪ್ಪಿಗೆ ನೀಡಿದೆ. ಭಾರತದಲ್ಲಿ ಕೋವಿಡ್ 19 ಸೋಂಕಿತರ ಪ್ರಮಾಣ 1 ಲಕ್ಷದ ಗಡಿ ದಾಟಿದ್ದು 3,163 ಜನರು ಈ ವೈರಸ್ ನಿಂದಾಗಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲೇ ಅತೀ ಹೆಚ್ಚು ಸೋಂಕಿತರಿದ್ದು ನಂತರದ ಸ್ಥಾನದಲ್ಲಿ ಗುಜರಾತ್ ಮತ್ತು ತಮಿಳುನಾಡುಗಳಿವೆ.
ಜಾಗತಿಕವಾಗಿ 49ಲಕ್ಷಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು 3,24,890 ಜನರು ಈ ಮಹಾಮಾರಿಯಿಂದ ಪ್ರಾಣ ತ್ಯೆಜಿಸಿದ್ದಾರೆ. ಸೋಂಕಿನಿಂದ ಸುಮಾರು 19, 58, 450 ಜನರು ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.