Advertisement
ಟ್ರಂಪ್ ಕಾಶ್ಮೀರದ ವಿಷಯದಲ್ಲಿ ಅತಿಯಾದ ಉತ್ಸಾಹ ತೋರಿಸುತ್ತಿದ್ದಾರೆ ಮತ್ತು ಆ ವಿವಾದದ ಕುರಿತು ಅವರಿಗೆ ಅಗತ್ಯ ಜ್ಞಾನ ಮತ್ತು ಮಾಹಿತಿಯ ಕೊರತೆ ಇದೆ ಎಂಬುದು ಅವರ ಹೇಳಿಕೆಯಿಂದಲೇ ಸ್ಪಷ್ಟವಾಗುತ್ತಿದೆ. ಅವರು ಈ ವಿಷಯದಲ್ಲಿ ಆಗಾಗ ನಿಲುವುಗಳನ್ನು ಬದಲಾಯಿಸುತ್ತಲೇ ಬಂದಿದ್ದು, ಆದ್ದರಿಂದ ಮುಂದಿನ ದಿನಗಳಲ್ಲಿ ಕೂಡ ಇಂಥ ವರ್ತನೆ ಅವರಿಂದ ಕಂಡುಬರದು ಎಂದು ಹೇಳಲು ಸಾಧ್ಯವಿಲ್ಲ. ಮೋದಿಗೆ ನೀಡಿದ್ದ ಭರವಸೆಗೆ ಅವರು ಬದ್ಧವಾಗಿಯೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲದ ಕಾರಣ ಅವರ ಹೇಳಿಕೆ ನಮ್ಮ ನಿಲುವಿಗೆ ಸಂದ ಜಯ ಎಂದು ನಾವು ಭಾವಿಸಬೇಕಾಗಿಲ್ಲ.
Related Articles
Advertisement
ಟ್ರಂಪ್ ಅಧಿಕಾರಕ್ಕೇರಿದ ಬಳಿಕ ಅಮೆರಿಕದಿಂದ ಹಲವಾರು ರೀತಿಯ ಭಾರತ ವಿರೋಧಿ ನೀತಿಗಳಿಗೆ ನಾವು ಪ್ರತ್ಯಕ್ಷ ಸಾಕ್ಷಿಯಾಗಿದ್ದೇವೆ. ಉದ್ಯೋಗ ಸಂಬಂಧಿ ವೀಸಾ, ಹೊರಗುತ್ತಿಗೆ, ವ್ಯಾಪಾರ ಮುಂತಾದ ಎಲ್ಲ ರಂಗದಲ್ಲೂ ಟ್ರಂಪ್ ಕೈಗೊಂಡಿದ್ದ ನಿಲುವುಗಳು ಭಾರತ ವಿರೋಧಿಯೇ ಆಗಿತ್ತು. ಅವುಗಳಿಗೆಲ್ಲ ಕಾಲಕಾಲಕ್ಕೆ ಮೋದಿ ಸರಕಾರ ಸರಿಯಾದ ರೀತಿಯಲ್ಲೇ ಬಿಸಿ ಮುಟ್ಟಿಸುತ್ತಾ ಪ್ರತಿಕ್ರಿಯೆ ನೀಡಿದೆ. ಭಾರತದ ಜಾಣ ನಡೆಗೆ ಟ್ರಂಪ್ ಒಳಗೊಳಗೇ ಕುದಿಯುತ್ತಿರುವುದು ರಹಸ್ಯದ ಸಂಗತಿಯಲ್ಲ. ಬಹುಶಃ ಪಾಕಿಸ್ತಾನದ ಜತೆಗೆ ಸಂಧಾನಕಾರನಾಗುವ ಭರವಸೆ ನೀಡಿರುವುದರ ಹಿಂದೆಯೂ ಭಾರತದೊಂದಿಗಿರುವ ಟ್ರಂಪ್ ಒಳಗುದಿ ಕಾರಣವಿರಬಹುದು.
ಕಾಶ್ಮೀರ ವಿಷಯದಲ್ಲಿ ಭಾರತದ ಪ್ರಧಾನಿ ಕೂಡ ನಮ್ಮ ಸಹಾಯ ಯಾಚಿಸಿದ್ದಾರೆ ಎಂಬರ್ಥದಲ್ಲಿ ಟ್ರಂಪ್ ಈ ಹಿಂದೆ ಮಾತಾಡಿದ್ದಿದೆ. ಅದು ನಮ್ಮಲ್ಲಿ ಹಲವು ಪ್ರಶ್ನೆಗಳು ಹುಟ್ಟಲೂ ಕಾರಣವಾಗಿತ್ತು. ಆದರೆ ಈಗ ಅಲ್ಲಿನ ಅಧಿಕಾರಿಗಳೇ ಟ್ರಂಪ್ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡಿ, ಭಾರತದ ಕಡೆಯಿಂದ ಅಂಥ ಯಾವುದೇ ಮನವಿ ಬಂದಿಲ್ಲ ಎಂದಿದ್ದಾರೆ. ಇವೆಲ್ಲವನ್ನು ಹತ್ತಿರದಿಂದ ಮತ್ತು ಕೂಲಂಕಷವಾಗಿ ಗಮನಿಸುವಾಗ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷನ ಘನತೆಗೆ ತಕ್ಕಂತೆ ಮಾತನಾಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ವ್ಯಾಪಾರ ವೃದ್ಧಿ ತಂತ್ರ
ಪಾಕಿಸ್ತಾನದ ವಿಷಯದಲ್ಲಿ ಅಮೆರಿಕವು ಮೃದು ಧೋರಣೆಯನ್ನೇ ಅನುಸರಿಸಿಕೊಂಡು ಬಂದಿದೆ. ಒಂದೊಮ್ಮೆ ಅಮೆರಿಕ ಮನಸ್ಸು ಮಾಡಿದ್ದರೆ ಪಾಕಿಸ್ತಾನದ ಉಗ್ರ ಬೆಂಬಲ ಕ್ರಮವನ್ನು ಯಾವತ್ತೋ ನಿಲ್ಲಿಸಬಹುದಿತ್ತು. ಆದರೆ ಹಾಗೆ ಮಾಡದೆ ತೋರಿಕೆಗೊಂದು ಹೇಳಿಕೆ ನೀಡುತ್ತಾ ಪಾಕಿಸ್ತಾನದ ಜತೆಗೆ ಒಳಗಿಂದೊಳೆಗೆ ಉತ್ತಮ ಸಂಬಂಧವನ್ನೇ ಕಾಪಾಡಿಕೊಂಡು ಬಂದಿದೆ. 2019ರ ವಾಯುದಾಳಿ ಸಂದರ್ಭದಲ್ಲಿ ಪಾಕಿಸ್ತಾನವು ಅಮೆರಿಕದೊಂದಿಗಿನ ಒಪ್ಪಂದದ ಷರತ್ತನ್ನು ಉಲ್ಲಂಘಿಸಿ ಭಾರತದ ವಿರುದ್ಧ ಎಫ್ 16 ಯುದ್ಧ ವಿಮಾನವನ್ನು ಬಳಸಿದ್ದರೂ, ಅದಕ್ಕೆ ಅಗತ್ಯವಾದ ಪೂರಕ ಸಾಕ್ಷಿಗಳನ್ನು ಭಾರತ ನೀಡಿದ್ದರೂ ಅಮೆರಿಕವು ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಮೆರಿಕವು ತಾನು ಉಗ್ರರನ್ನು ನಿಗ್ರಹಿಸಲು ಅವರ ವಿರುದ್ಧ ಹೋರಾಟಕ್ಕೆಂದು ಪಾಕಿಸ್ತಾನಕ್ಕೆ ನೀಡಿದ್ದ ಎಫ್ 16 ಯುದ್ಧವಿಮಾನಗಳೆಲ್ಲವೂ ಪಾಕಿಸ್ತಾನದ ವಶದಲ್ಲಿ ಸುರಕ್ಷಿತವಾಗಿ ಹಾಗೂ ಸುಸ್ಥಿತಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಂಡಿದೆ ಎಂದು ಅಮೆರಿಕದ ನಿಯತಕಾಲಿಕೆಯೊಂದರಲ್ಲಿ ವರದಿ ಪ್ರಕಟವಾಗಿತ್ತು. ಆ ಮೂಲಕ ಪರೋಕ್ಷವಾಗಿ ಭಾರತದ ನಿಲುವನ್ನು, ವಾದವನ್ನು ಕಡೆಗಣಿಸಿ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು.
ಪಾಕಿಸ್ತಾನದ ವಿರುದ್ಧ ತಾನು ಗಟ್ಟಿಯಾಗಿ ದನಿ ಎತ್ತಿದರೆ ಎಲ್ಲಿ ತನ್ನ ವ್ಯಾಪಾರಕ್ಕೆ ಧಕ್ಕೆಯಾಗಿ ಲಾಭ ಕಡಿಮೆಯಾದೀತೋ ಎಂಬ ಆತಂಕ ಅಮೆರಿಕಕ್ಕಿದೆ. ತಾನು ಜಗತ್ತಿನಲ್ಲಿ ಶಾಂತಿ ನೆಲೆಸಲು ಮೊದಲ ಆದ್ಯತೆ ನೀಡುತ್ತಿದ್ದೇನೆ ಎಂದು ಹೇಳುತ್ತಿರುವ ಅಮೆರಿಕವು ಅತ್ಯಂತ ಹೆಚ್ಚು ಯುದ್ಧೋಪಕರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಲೇ ಇದೆ. ಇವುಗಳ ಮಾರಾಟ ಹುಲುಸಾಗಿ ಆಗಬೇಕಿದ್ದರೆ ಗ್ರಾಹಕ ರಾಷ್ಟ್ರಗಳ ನಡುವೆ ಅಶಾಂತಿ ಮತ್ತು ಭೀತಿಯ ವಾತಾವರಣವನ್ನು ಸದಾ ಜೀವಂತವಾಗಿರಿಸುವುದು ಅಮೆರಿಕಕ್ಕೆ ಅಗತ್ಯವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆಯೂ ಅದೇ ತಂತ್ರವನ್ನು ಅದು ಅನುಸರಿಸುತ್ತಿದೆ. ಈ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆಗೆ ಕಾಶ್ಮೀರವೇ ಕಾರಣ ಎಂಬುದು ಅಮೆರಿಕಕ್ಕೆ ಚೆನ್ನಾಗಿ ಗೊತ್ತಿದೆ.
ಚೀನಕ್ಕಾಗಿ ಪಾಕ್ ವಿರೋಧಿ ನಿಲುವು
ಪಾಕಿಸ್ತಾನವನ್ನು ಚೀನ ಬೆಂಬಲಿಸುವ ರೀತಿಯಲ್ಲಿ ಅಮೆರಿಕವು ಯಾವತ್ತೂ ಭಾರತವನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ನಾವು ಗಮನಿಸಬೇಕಾಗಿದೆ. ತನ್ನ ಕಡು ವಿರೋಧಿಯಾಗಿರುವ ಚೀನವು ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ ಎಂಬ ಕಾರಣಕ್ಕಾಗಿ ಅಮೆರಿಕವು ಭಾರತವನ್ನು ಬೆಂಬಲಿಸುವಂತೆ ನಟಿಸುತ್ತಿದೆಯಷ್ಟೆ. ನಿಜವಾಗಿ ನೋಡಿದರೆ ಅಮೆರಿಕಕ್ಕೆ ಭಾರತದ ಏಳಿಗೆಯನ್ನು ಸಹಿಸಲು ಆಗುವುದಿಲ್ಲ. ಭಾರತವನ್ನು ಮಣಿಸಲು ಟ್ರಂಪ್ ಕೆಲವು ಕ್ರಮಗಳನ್ನು ಕೈಗೊಂಡಿದ್ದರು. ಆದರೆ ಭಾರತಕ್ಕೆ ಅದರಿಂದ ದೊಡ್ಡ ಹಾನಿಯಾಗಿಲ್ಲ. ಆದರೆ ತಾನು ಭಾರತವನ್ನು ಮಣಿಸಲು ತೆಗೆದುಕೊಳ್ಳುವ ಕ್ರಮಗಳು ತನಗೇ ತಿರುಗುಬಾಣವಾದಾಗ ಅಮೆರಿಕ ಎಚ್ಚೆತ್ತುಕೊಂಡು ಅದನ್ನು ಮತ್ತೆ ಬದಲಾಯಿಸಿದ ಎಷ್ಟೋ ಉದಾಹರಣೆಗಳಿವೆ. ಹೀಗೆ ಈ ಎಲ್ಲ ಕಾರಣಗಳಿಂದ ಭಾರತವು ಅಮೆರಿಕದ ಮಾತು ಮತ್ತು ನಡೆಯ ಮೇಲೆ ಅತಿಯಾದ ವಿಶ್ವಾಸ ತೋರಿಸುವಂತಿಲ್ಲ.
ಸ್ವತಂತ್ರ ನಿಲುವು ಅಗತ್ಯ
ಕಾಶ್ಮೀರ ಸಹಿತ ನಮ್ಮ ಆಂತರಿಕ ವಿಷಯದಲ್ಲಿ ಸ್ವತಂತ್ರ ನಿಲುವು ತೆಗೆದುಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ನಾವು ನಮ್ಮ ಅತ್ಯಂತ ವಿಶ್ವಾಸಾರ್ಹ ಮತ್ತು ಮಿತ್ರರಾಷ್ಟ್ರಗಳ ಬೆಂಬಲ ಪಡೆದುಕೊಂಡು ಮತ್ತಷ್ಟು ಪ್ರಗತಿ ಕಾಣಬೇಕು. ಈಗ ನಮ್ಮ ರಾಜತಾಂತ್ರಿಕ ನಡೆಯಿಂದಾಗಿ ಪಾಕಿಸ್ತಾನವು ಏಕಾಂಗಿಯಾಗುತ್ತಿದೆ. ಕೊನೆಯ ಅಸ್ತ್ರವಾಗಿ ಅದು ಅಣುದಾಳಿಯ ಮಾತುಗಳನ್ನು ಪರೋಕ್ಷವಾಗಿ ಮಾಡುತ್ತಲೇ ಇದೆ. ಅಣು ದಾಳಿಯ ಕುರಿತು ಮಾತಾಡುವುದು, ಅದರ ಬಗ್ಗೆ ಚಿಂತಿಸುವುದು ಸದ್ಯಕ್ಕೆ ದುರ್ಬಲರು ಹಾಗೂ ಮೂರ್ಖರ ಸಂಕೇತ ಎಂಬುದನ್ನು ಪಾಕಿಸ್ತಾನಕ್ಕೆ ಅದರ ಪರಮಮಿತ್ರ ರಾಷ್ಟ್ರವಾಗಿರುವ ಚೀನ ತಿಳಿಸಿಕೊಟ್ಟರೆ ಉತ್ತಮವಾಗಿರುತ್ತಿತ್ತು.
ಏನಿದ್ದರೂ ನಮ್ಮ ಆಂತರಿಕ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವ ನಮ್ಮ ನಿಲುವಿಗೆ ಬದ್ಧರಾಗಿರಬೇಕು. ಭಾರತದ ಶಕ್ತಿಯನ್ನು ಕೀಳಂದಾಜಿಸುವ ಪ್ರಯತ್ನಕ್ಕೆ ಯಾವ ದೇಶವೂ ಮುಂದಾಗದಂತೆ ನಾವು ನೋಡಿಕೊಳ್ಳುವುದು ಕೂಡ ಅಗತ್ಯವಾಗಿದೆ.
ಟ್ರಂಪ್ ಅಧಿಕಾರಕ್ಕೇರಿದ ಬಳಿಕ ಅಮೆರಿಕದಿಂದ ಹಲವಾರು ರೀತಿಯ ಭಾರತ ವಿರೋಧಿ ನೀತಿಗಳಿಗೆ ನಾವು ಪ್ರತ್ಯಕ್ಷ ಸಾಕ್ಷಿಯಾಗಿದ್ದೇವೆ. ಅನೇಕ ರಂಗಗಳಲ್ಲಿ ಟ್ರಂಪ್ ಕೈಗೊಂಡ ನಿಲುವುಗಳು ಭಾರತ ವಿರೋಧಿಯೇ ಆಗಿವೆ. ಅವುಗಳಿಗೆಲ್ಲ ಕಾಲಕಾಲಕ್ಕೆ ಮೋದಿ ಸರಕಾರ ಸರಿಯಾದ ರೀತಿಯಲ್ಲೇ ಬಿಸಿ ಮುಟ್ಟಿಸುತ್ತಾ ಪ್ರತಿಕ್ರಿಯೆ ನೀಡಿದೆ. ಭಾರತದ ಜಾಣ ನಡೆಗೆ ಟ್ರಂಪ್ ಒಳಗೊಳಗೇ ಕುದಿಯುತ್ತಿರುವುದು ರಹಸ್ಯ ಸಂಗತಿಯಲ್ಲ.
-ಪುತ್ತಿಗೆ ಪದ್ಮನಾಭ ರೈ