ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಅಲ್ಲಿನ ಸಂಸತ್ತಿನ ಉಭಯ ಸದನಗಳ ಜಂಟಿ ಸಮಾವೇಶವನ್ನು ಉದ್ದೇಶಿಸಿ ಬುಧವಾರ ರಾತ್ರಿ ಭಾಷಣ ಮಾಡಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅನಂತರ ಸಂಸತ್ತಿನಲ್ಲಿ ಇದು ಅವರ ಚೊಚ್ಚಲ ಭಾಷಣ. ಈ ಸಂದರ್ಭದಲ್ಲಿ ಅಮೆರಿಕ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು, ತಮ್ಮ ವೈಚಾರಿಕತೆಗಳನ್ನು ಹಂಚಿಕೊಂಡಿದ್ದಾರೆ. ಅವರ ಭಾಷಣದ ಆಯ್ದ ಭಾಗ ಇಲ್ಲಿದೆ.
ಜ. 6ರಂದು ಅಮೆರಿಕ ಸಂಸತ್ತಿನ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿ ತಲೆತಗ್ಗಿಸುವಂಥದ್ದು. ನನ್ನ ಪ್ರಕಾರ, ವರ್ಣಭೇದ ನೀತಿಯೇ ನಮ್ಮ ಪಾಲಿನ ದೊಡ್ಡ ಭಯೋತ್ಪಾದಕ. ಅದನ್ನು ಮೆಟ್ಟಿ ನಾವು ಬೆಳೆಯಬೇಕು.
ನಾವಿಂದು ನಮ್ಮ ಆರ್ಥಿಕತೆಯನ್ನು ಬುಡದಿಂದ ಮೇಲಕ್ಕೆ, ಮಧ್ಯಮ ಹಂತದಿಂದ ಉನ್ನತ ಹಂತಕ್ಕೆ ಬೆಳೆಸಬೇಕಿದೆ. ನಮ್ಮ ಆರ್ಥಿಕತೆಯ ಪ್ರಮುಖ ಎದುರಾಳಿ ಚೀನ ಹಾಗೂ ಇನ್ನಿತರ ದೇಶಗಳನ್ನು ನಾವು ಹಿಂದಿಕ್ಕಬೇಕಿದೆ.
ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿರುವ ತನ್ನ ಸೇನೆಗಳ ಉಪಸ್ಥಿತಿಯನ್ನು ಅಮೆರಿಕ ಮತ್ತಷ್ಟು ಹೆಚ್ಚಿಸಲಿದೆ. ಇದು, ಯಾರ ಜತೆಗೋ ಯುದ್ಧ ಮಾಡಲು ಅಲ್ಲ, ಸಂಭಾವ್ಯ ಯುದ್ಧಗಳನ್ನು ತಪ್ಪಿಸಲು. ಚೀನಕ್ಕೆ ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದೇವೆ.
ಅಮೆರಿಕದಲ್ಲಿ ಶಸ್ತ್ರಾಸ್ತ್ರ ಆಧಾರಿತ ಮಾನವ ನರಮೇಧ ಪ್ರಕರಣ ಹೆಚ್ಚುತ್ತಿವೆ. ಹಾಗಾಗಿ ಅಮೆರಿಕದ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಎಲ್ಲ ಸಂಸದರೂ ಪಕ್ಷಾತೀತವಾಗಿ ಇದನ್ನು ಬೆಂಬಲಿಸಬೇಕು.
ಇತಿಹಾಸ ಬರೆದ ಹ್ಯಾರಿಸ್, ನ್ಯಾನ್ಸಿ :
ಅಧ್ಯಕ್ಷ ಬೈಡೆನ್ ಅವರ ಚೊಚ್ಚ ಸಂಸತ್ ಭಾಷಣದ ವೇಳೆ, ಅವರ ಜತೆಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಸ್ಪೀಕರ್ ನ್ಯಾನ್ಸಿ ಪೆಲೊಸಿ ಹೊಸ ಇತಿಹಾಸ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳೆಯರಿಬ್ಬರು ಅಧ್ಯಕ್ಷರ ಭಾಷಣದ ವೇಳೆ ವೇದಿಕೆ ಹಂಚಿಕೊಂಡಿದ್ದಾರೆ. ಇದಲ್ಲದೆ ಬೈಡೆನ್ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ “ಮೇಡಂ ವೈಸ್ ಪ್ರಸಿಡೆಂಟ್’ ಎಂದು ಕಮಲಾ ಹ್ಯಾರಿಸ್ ಅವರನ್ನು ಸಂಬೋಧಿಸಿದ್ದು ಕೂಡ ಅಮೆರಿಕ ಇತಿಹಾಸದಲ್ಲಿ ಇದೇ ಮೊದಲು.