Advertisement

ಬೆಲೆ ತೆರಬೇಕಾಗುತ್ತದೆ: ಪಾಕ್‌ಗೆ ಟ್ರಂಪ್‌ ಎಚ್ಚರಿಕೆ

07:15 AM Aug 23, 2017 | Team Udayavani |

ವಾಷಿಂಗ್ಟನ್‌: ಭಯೋತ್ಪಾದಕರಿಗೆ ನೆಲೆಯಾಗಿರುವ ಬಗ್ಗೆ ಪಾಕಿಸ್ತಾನದ ವಿರುದ್ಧ ಈ ಮೊದಲು ಸೌಮ್ಯ ಮಾತುಗಳನ್ನಾಡುತ್ತಿದ್ದ ಅಮೆರಿಕ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಟು ಎಚ್ಚರಿಕೆಯನ್ನು ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರಾ ನೇರ ಎಚ್ಚರಿಕೆ ನೀಡಿದ್ದು, ‘ಪರಿಣಾಮ ನೆಟ್ಟಗಿರಲ್ಲ’ ಎಂದು ಹೇಳಿದ್ದಾರೆ.

Advertisement

‘ಆಫ್ಘಾನಿಸ್ತಾನದಲ್ಲಿ ಅಮೆರಿಕನ್ನರ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಏಜೆಂಟರಿಗೆ ಪಾಕ್‌ ಪ್ರಮುಖ ತಾಣವಾಗಿದ್ದು, ಉಗ್ರರ ಸ್ವರ್ಗವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟೀಕಿಸಿದ್ದಾರೆ. ‘ಇದು ಮುಂದುವರಿದದ್ದೇ ಆದಲ್ಲಿ, ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಬಳಿಕ ಇದೇ ಮೊದಲ ಬಾರಿಗೆ ಟೀವಿ ಭಾಷಣವೊಂದನ್ನು, ಅಮೆರಿಕ ಪಡೆಗಳ ಪರಮೋಚ್ಛ ದಂಡ ನಾಯಕ ಟ್ರಂಪ್‌ ಅವರು ನಡೆಸಿಕೊಟ್ಟಿದ್ದು, ಪಾಕ್‌ ಭಯೋತ್ಪಾದಕ ಸಂಘಟನೆಗಳಿಗೆ ಬೆಂಗಾವಲಾಗಿರುವುದನ್ನು ವ್ಯಾಪಕವಾಗಿ ಟೀಕಿಸಿದ್ದಾರೆ. ಆ ದೇಶ ಅಮೆರಿಕದಿಂದ ಉಗ್ರ ನಿಗ್ರಹ ಹೋರಾಟಕ್ಕೆಂದು ಶತಕೋಟಿಗಳ ಲೆಕ್ಕದಲ್ಲಿ ನೆರವು ಪಡೆಯುತ್ತಿದ್ದರೂ, ಉಗ್ರರನ್ನು ಪೋಷಿಸುವ ತಾಣವಾಗಿದೆ’ ಎಂದು ಹೇಳಿದ್ದಾರೆ.

‘ಹಿಂಸೆ, ಭಯೋತ್ಪಾದನೆ, ಗಲಭೆಗಳ ಏಜೆಂಟ್‌ಗಳಿಗೆ ಪಾಕ್‌ ಆಶ್ರಯತಾಣವಾಗಿದೆ. ಇದರ ಪರಿಣಾಮ ನೆರೆ ರಾಷ್ಟ್ರಗಳ ಮೇಲಾಗುತ್ತಿದ್ದು ಪಾಕ್‌-ಭಾರತ ಎರಡೂ ಅಣ್ವಸ್ತ್ರ ಸಜ್ಜಿತ ರಾಷ್ಟ್ರಗಳಾಗಿರುವುದರಿಂದ ಅಪಾಯ ಹೆಚ್ಚಾಗಿದೆ ಎಂದಿದ್ದಾರೆ. ಜೊತೆಗೆ ಪರಾಮರ್ಶೆ ಬಳಿಕ ಪಾಕ್‌ ಜೊತೆಗಿನ ಕಾರ್ಯತಂತ್ರಗಳು ನಿಧಾನಕ್ಕೆ ಬದಲಾಗುತ್ತಿವೆ’ ಎಂದೂ ಅವರು ಹೇಳಿದ್ದಾರೆ.

ಸುಮ್ಮನೆ ಕೂರಲಾಗದು: ‘ಪಾಕ್‌ ಉಗ್ರರ ಸ್ವರ್ಗವಾಗುತ್ತಿರುವಾಗ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ತಾಲಿಬಾನ್‌ ಮತ್ತಿತರ ಗುಂಪುಗಳು ಆ ಪ್ರದೇಶ ಮತ್ತು ಅದಕ್ಕೂ ಹೆಚ್ಚಿಗೆ ಅಪಾಯಕಾರಿಯಾದದ್ದು. ಆಫ್ಘಾನ್‌ನಲ್ಲಿ ನಾವು ನಡೆಸುತ್ತಿರುವ ಚಟುವಟಿಕೆಗೆ ಕೈ ಜೋಡಿಸಿದರೆ, ಪಾಕ್‌ ಬೆಳೆಯುತ್ತದೆ. ಒಂದು ವೇಳೆ ಉಗ್ರರನ್ನು ಬೆಂಬಲಿಸಿದ್ದೇ ಆದಲ್ಲಿ ಅದು ಕಳೆದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ. ಇತ್ತೀಚೆಗೆ ಅಮೆರಿಕ ಪಾಕಿಸ್ತಾನ ಮೂಲದ, ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯನ್ನು ಜಾಗತಿಕ ಪಟ್ಟಿಗೆ ಸೇರಿಸಿದ ಬೆನ್ನಲ್ಲೇ ಭಯೋತ್ಪಾದನೆ ವಿಚಾರದಲ್ಲಿ ಪಾಕ್‌ಗೆ ನೇರ ಎಚ್ಚರಿಕೆ ನೀಡಿದೆ. ಟ್ರಂಪ್‌ ಅಧಿಕಾರಕ್ಕೆ ಬಂದ ಬಳಿಕ ಪಾಕ್‌ ವಿಚಾರದಲ್ಲಿ ಅಮೆರಿಕ ಕಠಿಣವಾಗಿದ್ದು, ಪದೇ ಪದೆ ಎಚ್ಚರಿಸುತ್ತಲೇ ಬಂದಿದೆ. 

Advertisement

ಆಫ್ಘಾನ್‌ನಿಂದ ಸೇನೆ ಹಿಂದಕ್ಕೆ ಇಲ್ಲ: ಇದೇ ವೇಳೆ ಆಫ್ಘಾನ್‌ನಿಂದ ಅಮೆರಿಕ ಸೇನೆ ಹಿಂದಕ್ಕೆ ಕರೆಸಿಕೊಳ್ಳಲಿದೆ ಎಂಬ ಮಾತುಗಳನ್ನು ಅಧ್ಯಕ್ಷ ಟ್ರಂಪ್‌ ತಳ್ಳಿಹಾಕಿದ್ದಾರೆ. ಜೊತೆಗೆ ಬದಲಾದ ಕಾರ್ಯತಂತ್ರವನ್ನೂ ಘೋಷಿಸಿದ್ದಾರೆ. ಈ ಹೊತ್ತಿನಿಂದ ನಮ್ಮ ಶತ್ರುಗಳ ಮೇಲೆ ದಾಳಿ ನಡೆಸುವುದು. ಐಸಿಸ್‌ ಮೂಲೋತ್ಪಾಟನೆ, ಅಲ್‌ಖೈದಾ, ತಾಲಿಬಾನ್‌ ಚಟುವಟಿಕೆಗಳನ್ನು ನಿಗ್ರಹಿಸುವುದು, ಅಮೆರಿಕನ್ನರ ವಿರುದ್ಧ ಸಾಮೂಹಿಕ ಉಗ್ರ ದಾಳಿಯನ್ನು ದಾಳಿ ನಡೆವ ಮೊದಲೇ ತಡೆಯುವುದು ಆಫ‌^ನ್‌ ವಿಚಾರದಲ್ಲಿ ಹೊಸ ಕಾರ್ಯತಂತ್ರವಾಗಿದೆ ಎಂದಿದ್ದಾರೆ. 

ಭಾರತಕ್ಕೆ ಶಹಬ್ಟಾಸ್‌
ಆಫ್ಘಾನಿಸ್ತಾನದ ಸ್ಥಿರತೆಗೆ ಭಾರತ ನಡೆಸುತ್ತಿರುವ ಯತ್ನಗಳನ್ನು ಟ್ರಂಪ್‌ ಶ್ಲಾಘಿಸಿದ್ದಾರೆ. ಜೊತೆಗೆ ಅಮೆರಿಕದೊಂದಿಗೆ ಭಾರತ ಇನ್ನಷ್ಟು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದೇ ಆದಲ್ಲಿ ನಾವೂ ಆಫ್ಘಾನಿಸ್ತಾನದ ಆರ್ಥಿಕ ನೆರವು ಮತ್ತು ಅಭಿವೃದ್ಧಿಗೆ ಭಾರತದೊಂದಿಗೆ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ದಕ್ಷಿಣ ಏಷ್ಯಾ, ಇಂಡೋ ಪೆಸಿಫಿಕ್‌ ಗಡಿ ವಲಯದ ಶಾಂತಿ ಮತ್ತು ಭದ್ರ ತೆಗೆ ಭಾರತ ಮತ್ತು ಅಮೆರಿಕ ಸಮಾನ ಉದ್ದೇಶಗಳನ್ನು ಹೊಂದಿದ್ದು, ಅದಕ್ಕೆ ಬದ್ಧವಾಗಿದ್ದೇವೆ. ಆಫ್ಘಾನ್‌ ವಿಚಾರದಲ್ಲಿ ಭಾರತ ಪ್ರಮುಖ ಪಾತ್ರ ಹೊಂದಿದೆ ಎಂದೂ ಟ್ರಂಪ್‌ ಹೇಳಿದ್ದಾರೆ.

ಪಾಕ್‌ ಬೆಂಬಲಕ್ಕೆ ನಿಂತ ಚೀನಾ 
ಪಾಕ್‌ ಉಗ್ರರ ಸ್ವರ್ಗವಾಗಿದೆ ಎಂಬ ಟ್ರಂಪ್‌ ಹೇಳಿಕೆ ಬೆನ್ನಲ್ಲೇ ಅತ್ಯಾಪ್ತ ರಾಷ್ಟ್ರ ಚೀನಾ ಪಾಕ್‌ ಬೆಂಬಲಕ್ಕೆ ನಿಂತಿದೆ. ಉಗ್ರರ ವಿರುದ್ಧ ಹೋರಾಟದಲ್ಲಿ ಪಾಕ್‌ ಮುಂಚೂಣಿಯಲ್ಲಿದೆ. ಈ ಹೋರಾಟದಲ್ಲಿ ಬಹಳಷ್ಟನ್ನು ಕಳೆದುಕೊಂಡಿದೆ. ಈ ಭಾಗದ ಶಾಂತಿ, ಸ್ಥಿರತೆಗೆ ಪಾಕ್‌ ಅಪಾರವಾಗಿ ಯತ್ನಿಸುತ್ತಿದೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನಯಿಂಗ್‌ ಹೇಳಿದ್ದಾರೆ.

ಪಾಕ್‌ ಉಗ್ರರ ಸ್ವರ್ಗವಾಗಿದೆ ಎನ್ನುವ ಮೂಲಕ ಇದೇ ಮೊದಲ ಬಾರಿಗೆ ಅಮೆರಿಕ ಈ ವಿಚಾರದಲ್ಲಿ ಮೌನ ಮುರಿದಿದೆ. ಆಫ್ಘಾನಿಸ್ತಾನದ ವಿಚಾರಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ನಿರ್ಧಾರಗಳನ್ನು ನಾವು ಸ್ವಾಗತಿಸುತ್ತೇವೆ.
– ಹಮ್ದುಲ್ಲಾ ಮೊಹೀಬ್‌, ಅಮೆರಿಕದಲ್ಲಿನ ಆಫ್ಘಾನ್‌ ರಾಯಭಾರಿ

ಟ್ರಂಪ್‌ ಭಾಷಣದಲ್ಲಿ ಹೇಳಿದ ಕಾರ್ಯತಂತ್ರದಲ್ಲಿ ಹೊಸತೇನೂ ಇಲ್ಲ. ಟ್ರಂಪ್‌ ಏನು ಹೇಳಿದ್ದಾರೆ ಎಂಬುದೇ ಸ್ಪಷ್ಟವಿಲ್ಲ.
– ಜೈಬುಲ್ಲಾ ಮುಜಾಹಿದ್‌, ತಾಲಿಬಾನ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next