Advertisement

ಚೀನದ ಮೇಲೆ ಡೊನಾಲ್ಡ್‌ ಟ್ರಂಪ್‌ಗೆ ಸಂಶಯ ; ಗುಪ್ತಚರ ವರದಿ ಉಲ್ಲೇಖ

09:26 AM Apr 04, 2020 | Hari Prasad |

ಕೋವಿಡ್ 19 ವೈರಸ್ ನಿಂದ ಸಾವಿಗೀಡಾದವರ ನೈಜ ಸಂಖ್ಯೆಯನ್ನು ಚೀನ ಹೊರಜಗತ್ತಿಗೆ ಮುಚ್ಚಿಡುತ್ತಿದೆಯೇ? ಹೀಗೊಂದು ಸಂಶಯವನ್ನು ವ್ಯಕ್ತಪಡಿಸಿರುವುದು ಅಮೆರಿಕ ಅಧ್ಯಕ್ಷ  ಟ್ರಂಪ್‌. ಕೋವಿಡ್ 19  ಎಂಬ ಸೋಂಕು ಹುಟ್ಟಿಕೊಂಡಿದ್ದೇ ಚೀನದ ವುಹಾನ್‌ ನಗರದಲ್ಲಿ. ಅಲ್ಲಿ ಈವರೆಗೆ ಸಾವಿಗೀಡಾಗಿದ್ದು 3,300 ಮಂದಿ ಎಂದು ಚೀನ ಹೇಳಿಕೊಂಡಿದೆ. ಆದರೆ, ಆ ದೇಶದಲ್ಲಿ ನಿಜವಾಗಿಯೂ ಮೃತಪಟ್ಟವರೆಷ್ಟು ಎಂಬುದು ಯಾರಿಗೂ ಗೊತ್ತಿಲ್ಲ.

Advertisement

ಸುಳ್ಳು ಅಂಕಿಅಂಶಗಳನ್ನು ನೀಡುವ ಮೂಲಕ ಚೀನ ಅಂತಾರಾಷ್ಟ್ರೀಯ ಸಮುದಾಯದ ಹಾದಿ ತಪ್ಪಿಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ವರದಿ ನೀಡಿದೆ. ಅದನ್ನು ಗುರುವಾರದ ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿರುವ ಟ್ರಂಪ್‌, ಚೀನ ಸತ್ಯವನ್ನೇ ಹೇಳುತ್ತಿದೆ ಎಂದು ನಾವು ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಚೀನದ ಅನಂತರ ಸೋಂಕನ್ನು ಕಂಡ ಅಮೆರಿಕದಲ್ಲೇ ಈಗಾಗಲೇ 5, 114ಮಂದಿ ಮೃತಪಟ್ಟು, 2.15 ಲಕ್ಷ ಮಂದಿಗೆ ಸೋಂಕು ತಗುಲಿದೆ. ಚೀನಗಿಂತ ಹೆಚ್ಚಿನ ಸಾವು ಅಮೆರಿಕದಲ್ಲಿ ಸಂಭವಿಸಿದೆ ಎನ್ನುವುದನ್ನು ನಂಬಲಸಾಧ್ಯ. ಅಮೆರಿಕದಲ್ಲಿ ಮೃತರ ಪ್ರಮಾಣ ನೋಡುತ್ತಿದ್ದರೆ, ಚೀನದಲ್ಲಿ ಅದೆಷ್ಟು ಮಂದಿ ಸಾವಿಗೀಡಾಗಿರಬಹುದು ಎಂಬ ಸಂಶಯ ಸಹಜವಾಗಿಯೇ ಮೂಡುತ್ತದೆ ಎಂದೂ ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ವೈದ್ಯಕೀಯ ಸಲಕರಣೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ರಷ್ಯಾದಿಂದ ಮಾಸ್ಕ್, ವೆಂಟಿಲೇಟರ್‌ ಸೇರಿದಂತೆ ಸುಮಾರು 60 ಟನ್‌ ತೂಕದ ವೈದ್ಯಕೀಯ ಪರಿಕರಗಳನ್ನು ಹೊತ್ತ ರಷ್ಯಾದ ಸರಕು ಸಾಗಣೆ ವಿಮಾನ ಗುರುವಾರ ಅಮೆರಿಕ ತಲುಪಿದೆ.

6 ವಾರದ ಹಸುಗೂಸು ಸಾವು: ಅಮೆರಿಕದ ಕನೆಕ್ಟಿಕಟ್‌ ನಲ್ಲಿ 6 ವಾರಗಳ ಹಸುಗೂಸುವೊಂದು ಕೋವಿಡ್ 19 ವೈರಸ್ ಗೆ ಬಲಿಯಾಗಿದೆ. ಈ ಮಗುವಿನ ಸಾವು  ಕೋವಿಡ್ 19 ವೈರಸ್ ಮುಂದೆ ಯಾರೂ ಸುರಕ್ಷಿತರಲ್ಲ ಎಂಬುದನ್ನು ಸಾಬೀತುಪಡಿಸಿದೆ.

Advertisement

ಹ್ಯೂಸ್ಟನ್‌ನಲ್ಲಿ ಭಾರತೀಯ ಮೂಲದ ವೈದ್ಯರಾದ ಲವಂಗಾ ವೇಲುಸ್ವಾಮಿ, ಐಟಿ ವೃತ್ತಿಪರ ರೋಹನ್‌ ಭಾವಡೇರ್ಕ ಸೇರಿದಂತೆ ಮೂವರಿಗೆ ಸೋಂಕು ದೃಢಪಟ್ಟಿದೆ. ಈ ಮೂವರ ಸ್ಥಿತಿಯೂ ಚಿಂತಾಜನಕ ವಾಗಿದೆ ಎಂದು ಮೂಲಗಳು ತಿಳಿಸಿವೆ.

ಐರೋಪ್ಯ ಒಕ್ಕೂಟ: 5 ಲಕ್ಷ ಸೋಂಕು
ಐರೋಪ್ಯ ಒಕ್ಕೂಟದಲ್ಲಿಯೇ 5 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, 34,571 ಮಂದಿ ಸಾವಿಗೀಡಾಗಿದ್ದಾರೆ. ಅಂದರೆ ಜಾಗತಿಕ ಮೃತರ ಸಂಖ್ಯೆಯಲ್ಲಿ ಅರ್ಧದಷ್ಟು ಪ್ರಕರಣ ಈ ಖಂಡದಲ್ಲಿಯೇ ಸಂಭವಿಸಿದೆ. ಈ ಪೈಕಿ ಯುರೋಪ್‌ ಖಂಡದಲ್ಲಿನ ಇಟಲಿಯಲ್ಲಿ ಅತಿಹೆಚ್ಚು ಸಾವು (13,155) ವರದಿಯಾಗಿದ್ದರೆ, ಸ್ಪೇನ್‌ ನಲ್ಲಿ 10,003 ಮಂದಿ ಅಸುನೀಗಿದ್ದಾರೆ.

ಜಗತ್ತಿನಾದ್ಯಂತ ಒಟ್ಟು ಕೋವಿಡ್ 19 ವೈರಸ್ 47,836 ಮಂದಿ ಸಾವಿಗೀಡಾಗಿದ್ದು, 9.40 ಲಕ್ಷ ಮಂದಿಗೆ ಸೋಂಕು ತಗುಲಿದೆ. ಏತನ್ಮಧ್ಯೆ, ಇರಾನ್‌ ನಲ್ಲಿ ಗುರುವಾರ 124 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 3,160ಕ್ಕೆ ತಲುಪಿದೆ.

ಐರೋಪ್ಯ ಒಕ್ಕೂಟ: 5,08,271
ಸಾವಿನ ಸಂಖ್ಯೆ: 34, 571
ಅಮೆರಿಕ: 2,15,357
ಸಾವಿನ ಸಂಖ್ಯೆ: 5,113

Advertisement

Udayavani is now on Telegram. Click here to join our channel and stay updated with the latest news.

Next