ನ್ಯೂಯಾರ್ಕ್: ಟೆನ್ನಿಸ್ ದಂತಕಥೆ ರೋಜರ್ ಫೆಡರರ್ ವಿರುದ್ಧ ಮೊದಲ ಬಾರಿಗೆ ಯುಎಸ್ ಓಪನ್ ಆಡಲಿಳಿದ ಭಾರತದ ಯುವ ಆಟಗಾರ ಸುಮಿತ್ ನಗಾಲ್ ಚಾಂಪಿಯನ್ ಆಟಗಾರನ ವಿರುದ್ಧ ದಿಟ್ಟ ಹೋರಾಟ ನಡೆಸಿ ಅಭಿಮಾನಿಗಳ ಮನಗೆದ್ದರು. ಮೊದಲ ಸೆಟ್ ಗೆದ್ದರೂ ನಂತರ ಹಿರಿಯ ಆಟಗಾರನ ವಿರುದ್ಧ ಮೇಲುಗೈ ಸಾಧಿಸಲಾಗದೆ 6-4, 1-6, 2-6, 4-6 ಅಂತರದಿಂದ ಸೋಲನುಭವಿಸಿದರು.
22ರ ಹರೆಯದ ಸುಮಿತ್ ನಗಾಲ್ ಇದೇ ಮೊದಲ ಬಾರಿಗೆ ಯುಎಸ್ ಓಪನ್ ಮುಖ್ಯ ಟೂರ್ನಿ ಆಡುತ್ತಿದ್ದಾರೆ. ಆದರೆ ಪದಾರ್ಪಣೆ ಪಂದ್ಯದಲ್ಲೇ ಎದುರಾಗಿದ್ದು ಯುಎಸ್ ಅಂಗಳದಲ್ಲಿ ಐದು ಬಾರಿ ಕಪ್ ಗೆದ್ದು ಬೀಗಿದ್ದ ರೋಜರ್ ಫೆಡರರ್. ಹಾಗಾಗಿ ಭಾರತೀಯ ಅಭಿಮಾನಿಗಳು ಈ ಪಂದ್ಯವನ್ನು ಕಾತರದಿಂದ ಕಾಯುತ್ತಿದ್ದರು.
ತನ್ನ ಪದಾರ್ಪಣೆ ಸೆಟ್ ಅನ್ನು ಸ್ಮರಣೀಯವಾಗಿಸಿದ ಸುಮಿತ್ ಮೊದಲ ಸೆಟ್ ಅನ್ನು 6-4 ಅಂತರದಿಂದ ಗೆದ್ದು ಬೀಗಿದರು. ಫೆಡರರ್ ಕೆಲವು ತಪ್ಪುಗಳನ್ನು ಮಾಡಿದ್ದರಿಂದ ಸುಮಿತ್ ಮೊದಲ ಸೆಟ್ ಗೆದ್ದು ಮುನ್ನಡೆ ಸಾಧಿಸಿದರು.
ಮೊದಲ ಸೆಟ್ ಸೋತ ಫೆಡರರ್ ನಂತರ ತನ್ನೆಲ್ಲಾ ಅನುಭವ ಉಪಯೋಗಿಸಿ ಆಟವಾಡಿದರು. ಮುಂದಿನೆರಡು ಸೆಟ್ ಗಳಲ್ಲಿ ಅನನುಭವಿ ಸುಮಿತ್ ಗೆ ಯಾವುದೇ ರೀತಿಯ ಅವಕಾಶ ನೀಡದೆ 6-1, 6-2 ಅಂತರದಿಂದ ಗೆದ್ದರು.
ನಾಲ್ಕನೇ ಸೆಟ್ ನಲ್ಲಿ ಮತ್ತೆ ವಿರೋಧ ತೋರಿಸಿದ ಭಾರತದ ಯುವ ಪ್ರತಿಭೆ ಸುಮಿತ್ ದಿಟ್ಟ ಹೋರಾಟ ನಡೆಸಿದರು . ಆದರೆ ಕೊನೆಯಲ್ಲಿ 6-4 ಅಂತರದಿಂದ ಸ್ವಿಸ್ ಆಟಗಾರ ಸೆಟ್ ಗೆದ್ದು ಪಂದ್ಯವನ್ನು ಗೆದ್ದರು.
ಯಾರು ಈ ಸುಮಿತ್ ನಗಾಲ್
ಹರ್ಯಾಣದ ಝಾಜ್ಜರ್ ಮೂಲದ ಸುಮಿತ್ ನಗಾಲ್ ಗ್ರ್ಯಾಂಡ್ ಸ್ಲಾಮ್ ಮೊದಲ ರೌಂಡ್ ಗೆ ಆಯ್ಕೆಯಾದ ಅತೀ ಕಿರಿಯ ಭಾರತೀಯ. 2015ರಲ್ಲಿ ವಿಂಬಲ್ಡನ್ ಬಾಯ್ಸ್ ಡಬಲ್ಸ್ ಕಪ್ ಗೆದ್ದಿದ್ದರು. 2016ರಲ್ಲಿ ಸ್ಪೈನ್ ವಿರುದ್ಧ ಡೇವಿಸ್ ಕಪ್ ಪದಾರ್ಪಣೆ ಮಾಡಿದ್ದ ಸುಮಿತ್, 2017ರಲ್ಲಿ ಬೆಂಗಳೂರು ಚಾಲೆಂಜರ್ಸ್ ಪರ ಆಡಿದ್ದರು.