Advertisement

ಬ್ರಾಡಿ, ಒಸಾಕಾ ಕ್ವಾರ್ಟರ್‌ ಫೈನಲ್‌ ಪ್ರವೇಶ

07:15 PM Sep 07, 2020 | mahesh |

ನ್ಯೂಯಾರ್ಕ್‌: ಅಮೆರಿಕದ ಜೆನ್ನಿಫ‌ರ್‌ ಬ್ರಾಡಿ ಮೊದಲ ಬಾರಿಗೆ ತವರಿನ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಅವರು 2016ರ ಯುಎಸ್‌ ಓಪನ್‌ ಚಾಂಪಿಯನ್‌, ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಅವರನ್ನು 6-1, 6-4ರಿಂದ ಕೆಡವಿ ಮುನ್ನಡೆ ಸಾಧಿಸಿದರು.

Advertisement

“ಕೆರ್ಬರ್‌ ಗ್ರೇಟ್‌ ಪ್ಲೇಯರ್‌. ಒಂದೊಂದು ಅಂಕಕ್ಕೂ ಅವರು ಭಾರೀ ಹೋರಾಟ ನಡೆಸುತ್ತಾರೆ. ಹೀಗಾಗಿ ಅವರೆದುರಿನ ಈ ಗೆಲುವು ನನ್ನ ಪಾಲಿಗೆ ಮಹತ್ವದ್ದಾಗಿದೆ’ ಎಂದು ಜೆನ್ನಿಫ‌ರ್‌ ಬ್ರಾಡಿ ಪ್ರತಿಕ್ರಿಯಿಸಿದ್ದಾರೆ.

ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರಾಡಿ ಕಜಾಕ್‌ಸ್ಥಾನದ ಯುಲಿಯಾ ಪುಟಿನ್ಸೇವಾ ವಿರುದ್ಧ ಆಡಲಿದ್ದಾರೆ. ಇನ್ನೊಂದು ಮುಖಾಮುಖೀಯಲ್ಲಿ ಅವರು ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್‌ ವಿರುದ್ಧ 6-3, 2-6, 6-4 ಅಂತರದಿಂದ ಗೆದ್ದು ಬಂದರು.

ಒಸಾಕಾ ಓಟ
ಪೂರ್ತಿ ಫಿಟ್‌ನೆಸ್‌ಗೆ ಮರಳಿದಂತೆ ಕಂಡುಬಂದ 4ನೇ ಶ್ರೇಯಾಂಕದ ನವೋಮಿ ಒಸಾಕಾ ಎಸ್ತೋನಿಯಾದ ಅನೆಟ್‌ ಕೊಂಟಾವೀಟ್‌ ಅವರನ್ನು 6-3, 6-4 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಇದರೊಂದಿಗೆ ಕೊಂಟಾವೀಟ್‌ ವಿರುದ್ಧ ಆಡಿದ ಎಲ್ಲ 5 ಪಂದ್ಯಗಳನ್ನು ಒಸಾಕಾ ಗೆದ್ದಂತಾಯಿತು. 22ರ ಹರೆಯದ ಜಪಾನ್‌ ಆಟಗಾರ್ತಿ ಇನ್ನು ಅಮೆರಿಕದ ಶೆಲ್ಬಿ ರೋಜರ್ ಅವರನ್ನು ಎದುರಿಸಬೇಕಿದೆ. ಇನ್ನೊಂದು ಮುಖಾಮುಖೀಯಲ್ಲಿ ಶೆಲ್ಬಿ ರೋಜರ್ ಜೆಕ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾಗೆ 7-6 (7-5), 3-6, 7-6 (8-6) ಅಂತರದ ಸೋಲುಣಿಸಿದರು.

ನವೋಮಿ ಒಸಾಕಾ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳನ್ನು ಗೆದ್ದ ದಾಖಲೆ ಶೆಲ್ಬಿ ರೋಜರ್ ಅವರದ್ದಾಗಿದೆ. ತವರಿನ ಆಟಗಾರ್ತಿಯ ಓಟಕ್ಕೆ ಒಸಾಕಾ ಬ್ರೇಕ್‌ ಹಾಕುವರೇ ಎಂಬುದೊಂದು ಕುತೂಹಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next