ನ್ಯೂಯಾರ್ಕ್: ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಎಂಬುದು ಅಕ್ಷರಶಃ “ಅಮೆರಿಕನ್ ಓಪನ್’ ಆಗಿಯೇ ಅವತಾರ ತಾಳಿದೆ. ಇದಕ್ಕೆ ಕಾರಣ, ವನಿತಾ ಸಿಂಗಲ್ಸ್ ಸೆಮಿಫೈನಲ್. ಈ ಹಂತಕ್ಕೆ ಏರಿದ ಎಲ್ಲ 4 ಮಂದಿ ಆಟಗಾರ್ತಿಯರು ಅಮೆರಿಕನ್ನರೇ ಆಗಿದ್ದಾರೆ. ಯಾರೇ ಗೆದ್ದರೂ ಪ್ರಶಸ್ತಿ ಅಮೆರಿಕದ ಮಡಿಲನ್ನೇ ಸೇರಲಿದೆ!
ಬುಧವಾರದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕೊಕೊ ವಾಂಡೆವೇಗ್ ಮತ್ತು ಮ್ಯಾಡಿ ಸನ್ ಕೇಯ್ಸ ಜಯ ಸಾಧಿಸುವು ದರಿಂದಿಗೆ ಆಲ್ ಅಮೆರಿಕನ್ ಸೆಮಿಫೈನಲ್‌ಗೆ ವೇದಿಕೆ ಸಜ್ಜು ಗೊಂಡಿತು. ಮೊದಲೆರಡು ಕ್ವಾರ್ಟರ್ ಫೈನಲ್‌ಗಳಲ್ಲಿ ವೀನಸ್ ವಿಲಿಯಮ್ಸ್, ಸ್ಲೋನ್ ಸ್ಟೀಫನ್ಸ್ ಜಯ ಸಾಧಿಸಿದ್ದರು.
ಕೂಟದ 3ನೇ ಕ್ವಾರ್ಟರ್ ಫೈನಲ್‌ನಲ್ಲಿ ಕೊಕೊ ವಾಂಡೆ ವೇಗ್ 7-6 (7-4), 6-3 ಅಂತರದಿಂದ ವಿಶ್ವದ ನಂ.1 ಆಟಗಾರ್ತಿ, ಜೆಕ್ ಗಣರಾಜ್ಯದ ಕ್ಯಾರೋಲಿನ್ ಪ್ಲಿಸ್ಕೋವಾಗೆ ಆಘಾತವಿಕ್ಕಿದರು. ಈ ಸೋಲಿನೊಂದಿಗೆ ಪ್ಲಿಸ್ಕೋವಾ ಅವರ ನಂ. 1 ಕಿರೀಟ ಜಾರಿದೆ. ಮುಂದಿನ ವಾರ ಸ್ಪೇನಿನ ಮುಗುರುಜಾ ವಿಶ್ವದ ನಂ. 1 ಆಟಗಾರ್ತಿಯಾಗಿ ಮೂಡಿಬರಲಿದ್ದಾರೆ. ಅವರು ಈ ಹೆಗ್ಗಳಿಕೆಗೆ ಪಾತ್ರರಾಗಲಿರುವ ವಿಶ್ವದ 24ನೇ ಆಟಗಾರ್ತಿ.
ಈ ಜಯದೊಂದಿಗೆ ವಾಂಡೆವೇಗ್ ಮೊದಲ ಬಾರಿಗೆ ಅಮೆ ರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ತಲುಪಿದರು. ಇದು ಅವರ 2ನೇ ಗ್ರ್ಯಾನ್‌ಸ್ಲಾಮ್ ಉಪಾಂತ್ಯ. ಇದೇ ವರ್ಷ ಆಸ್ಟ್ರೇಲಿ ಯನ್ ಓಪನ್‌ನಲ್ಲೂ ವಾಂಡೆವೇಗ್ ಸೆಮಿ ತನಕ ಸಾಗಿದ್ದರು.
ಕೇಯ್ಸ ಬಲೆಗೆ ಬಿದ್ದ ಕನೆಪಿ: ಅಂತಿಮ ಕ್ವಾರ್ಟರ್ ಫೈನಲ್‌ನಲ್ಲಿ 15ನೇ ಶ್ರೇಯಾಂಕದ ಮ್ಯಾಡಿಸನ್ ಕೇಯ್ಸ 6-3, 6-3ರಿಂದ ಎಸ್ತೋನಿಯಾದ ಕಯಾ ಕನೆಪಿ ಆಟವನ್ನು ಮುಗಿಸಿದರು. ಕೇಯ್ಸ ಅವರಿಗೂ ಇದು ಮೊದಲ ಯುಎಸ್ ಸೆಮಿಫೈನಲ್. ಸೆಮಿಫೈನಲ್‌ನಲ್ಲಿ ವಾಂಡೆವೇಗ್-ಕೇಯ್ಸ ಸೆಣಸಾಡಲಿದ್ದಾರೆ. ಗೆದ್ದವರು ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಡಲಿದ್ದಾರೆ.
36 ವರ್ಷಗಳ ಬಳಿಕ ಅಮೆರಿಕ ಪಾರುಪತ್ಯ 1981ರ ಯುಎಸ್ ಓಪನ್ ಹಾಗೂ 1985ರ ವಿಂಬಲ್ಡನ್ ಸೆಮಿಫೈನಲ್ ಬಳಿಕ ಗ್ರ್ಯಾನ್‌ಸ್ಲಾಮ್ ಉಪಾಂತ್ಯವೊಂದರಲ್ಲಿ ಅಮೆರಿನ್ನರ ಪಾರುಪತ್ಯ ಕಂಡುಬಂದ ಮೊದಲ ದೃಷ್ಟಾಂತವಿದು. 1981ರ ಯುಎಸ್ ಓಪನ್‌ನಲ್ಲಿ ಅಮೆರಿಕದ ಕ್ರಿಸ್ ಎವರ್ಟ್, ಮಾರ್ಟಿನಾ ನವ್ರಾಟಿಲೋವಾ, ಟ್ರೇಸಿ ಆಸ್ಟಿನ್ ಮತ್ತು ಬಾರ್ಬರಾ ಪಾಟರ್ ಸೆಮಿಫೈನಲ್ ತಲುಪಿದ್ದರು. ನವ್ರಾಟಿಲೋವಾ ಅವರನ್ನು ಪರಾಭವಗೊಳಿಸಿದ ಆಸ್ಟಿನ್ ಚಾಂಪಿಯನ್ ಆಗಿದ್ದರು.
1985ರ ವಿಂಬಲ್ಡನ್ ಸೆಮಿಫೈನಲ್ ತಲುಪಿದ ಅಮೆರಿಕದ ನಾಲ್ವರೆಂದರೆ ಕ್ರಿಸ್ ಎವರ್ಟ್, ಕ್ಯಾಥಿ ರಿನಾಲ್ಡಿ, ಜಿನಾ ಹ್ಯಾರಿಸನ್ ಮತ್ತು ಮಾರ್ಟಿನಾ ನವ್ರಾಟಿಲೋವಾ. ಇಲ್ಲಿ ಕ್ರಿಸ್ ಎವರ್ಟ್ ಅವರನ್ನು ಸೋಲಿಸಿದ ನವ್ರಾಟಿಲೋವಾ ಪ್ರಶಸ್ತಿ ಎತ್ತಿದ್ದರು.