ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯ ನೆಚ್ಚಿನ ಆಟಗಾರರಾಗಿ ಗೋಚರಿಸಿರುವ ಜಾನಿಕ್ ಸಿನ್ನರ್ ಮತ್ತು ಡ್ಯಾನಿಲ್ ಮೆಡ್ವೆಡೇವ್ ಕ್ವಾರ್ಟರ್ ಫೈನಲ್‌ನಲ್ಲಿ ಪರಸ್ಪರ ಮುಖಾಮುಖೀ ಆಗಲಿದ್ದಾರೆ. ಅಲ್ಲಿಗೆ ಇನ್ನೋರ್ವ ಫೇವರಿಟ್ ಟೆನಿಸಿಗನ ನಿರ್ಗಮನವಾಗಲಿದೆ. ಗೆದ್ದವರು “ನ್ಯೂಯಾರ್ಕ್ ಕಿಂಗ್’ ಕಿರೀಟದ ಮೇಲೆ ಕಣ್ಣಿಡಲಿದ್ದಾರೆ.
ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜಾನಿಕ್ ಸಿನ್ನರ್ ಅಮೆರಿಕದ ಟಾಮಿ ಪೌಲ್ ಆಟಕ್ಕೆ 7-6 (7-3), 7-6 (7-5), 6-1ರಿಂದ ತೆರೆ ಎಳೆದರು. 2021ರ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೇವ್ ಪೋರ್ಚುಗಲ್‌ನ ನುನೊ ಬೋಗ್ಸ್ ವಿರುದ್ಧ 6-0, 6-1, 6-3 ಅಂತರದ ಸುಲಭ ಜಯ ಸಾಧಿಸಿದರು. ಮೆಡ್ವೆಡೇವ್ ಈ ಪಂದ್ಯಾವಳಿಯಲ್ಲಿ ಉಳಿದಿರುವ ಏಕೈಕ ಮಾಜಿ ಚಾಂಪಿಯನ್ ಆಗಿದ್ದಾರೆ.
ಬ್ರಿಟನ್‌ನ ಜಾಕ್ ಡ್ರಾಪರ್ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು ಜೆಕ್ ಗಣರಾಜ್ಯದ ಥಾಮಸ್ ಮಾಕ್ಸಾಕ್ ವಿರುದ್ಧ 6-3, 6-1, 6-2 ಅಂತರದಿಂದ ಗೆದ್ದು ಬಂದರು. ಜಾಕ್ ಡ್ರಾಪರ್ ಅವರಿನ್ನು ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ವಿರುದ್ಧ ಸೆಣಸಬೇಕಿದೆ. ಡಿ ಮಿನೌರ್ ತಮ್ಮದೇ ದೇಶದ ಜೋರ್ಡನ್ ಥಾಮ್ಸನ್‌ಗೆ 6-0, 3-6, 6-3, 7-5 ಅಂತರದ ಸೋಲುಣಿಸಿದರು.
ಸ್ವಿಯಾಟೆಕ್ 100ನೇ ಪಂದ್ಯ
ವನಿತಾ ಸಿಂಗಲ್ಸ್‌ನಲ್ಲಿ ತಮ್ಮ 100ನೇ ಗ್ರ್ಯಾನ್‌ಸ್ಲಾಮ್ ಪಂದ್ಯವಾಡಿದ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಗೆಲುವಿನೊಂದಿಗೆ ಸಂಭ್ರಮಿಸಿದ್ದಾರೆ. ಅವರು ರಷ್ಯಾದ ಲುಡ್ಮಿಲಾ ಸಾಮ್ಸನೋವಾಗೆ 6-4, 6-1 ಅಂತರದ ಆಘಾತವಿಕ್ಕಿದರು. ಇವರ ಕ್ವಾರ್ಟರ್ ಫೈನಲ್ ಎದುರಾಳಿ ಅಮೆರಿಕದ ಜೆಸ್ಸಿಕಾ ಪೆಗುಲಾ. ಇವರು ರಷ್ಯಾದ ಮತ್ತೋರ್ವ ಆಟಗಾರ್ತಿ ಡಯಾನಾ ಶ್ನೆ„ಡರ್ ಅವರನ್ನು 6-4, 6-2ರಿಂದ ಪರಾಭವಗೊಳಿಸಿದರು.