Advertisement

US Open 2024: ನಂ.1 ಜಾನಿಕ್‌ ಸಿನ್ನರ್‌, ಒಸಾಕಾ ಗೆಲುವಿನ ಆರಂಭ

11:13 PM Aug 28, 2024 | Team Udayavani |

ನ್ಯೂಯಾರ್ಕ್‌: ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ದ್ವಿತೀಯ ದಿನದಾಟದಲ್ಲಿ ವಿಶ್ವದ ನಂ.1 ಆಟಗಾರ ಜಾನಿಕ್‌ ಸಿನ್ನರ್‌ 4 ಸೆಟ್‌ಗಳ ಹೋರಾಟದಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ. ಜತೆಗೆ ಶ್ರೇಯಾಂಕಿತ ಆಟಗಾರರಾದ ಕಾರ್ಲೋಸ್‌ ಅಲ್ಕರಾಜ್‌, ಡ್ಯಾನಿಲ್‌ ಮೆಡ್ವಡೇವ್‌, ಹ್ಯೂಬರ್ಟ್‌ ಹುರ್ಕಾಜ್‌, ಜಾಕ್‌ ಡ್ರಾಪರ್‌ ಕೂಡ ಮುನ್ನಡೆದಿದ್ದಾರೆ. ಆದರೆ ಸ್ಟೆಫ‌ನಸ್‌ ಸಿಸಿಪಸ್‌, ಕರೆನ್‌ ಕಶನೋವ್‌, ಫೆಲಿಕ್ಸ್‌ ಔಗರ್‌ ಅಲಿಯಾಸಿಮ್‌, ಜೆಲೆನಾ ಒಸ್ಟಾಪೆಂಕೊ ಸೋಲಿನ ಆಘಾತಕ್ಕೆ ಸಿಲುಕಿದರು.

Advertisement

ಇತ್ತೀಚೆಗಷ್ಟೇ ಡೋಪಿಂಗ್‌ ವಿವಾದದಿಂದ ಪಾರಾಗಿ ಬಂದ ಇಟಲಿಯ ಜಾನಿಕ್‌ ಸಿನ್ನರ್‌ ನಿಧಾನ ಗತಿಯ ಆರಂಭದ ಬಳಿಕ ಅಮೆರಿಕದ ಮ್ಯಾಕಿ ಮೆಕ್‌ಡೊನಾಲ್ಡ್‌ ಅವರನ್ನು 2-6, 6-2, 6-1, 6-2ರಿಂದ ಮಣಿಸುವಲ್ಲಿ ಯಶಸ್ವಿಯಾದರು. ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ಸರ್ಬಿಯಾದ ಡುಸಾನ್‌ ಲಾಜೋವಿಕ್‌ ಅವರನ್ನು 6-3, 3-6, 6-3, 6-1ರಿಂದ ಮಣಿಸಿದರು. ವಿಶ್ವದ 7ನೇ ರ್‍ಯಾಂಕ್‌ ಆಟಗಾರ, ಪೋಲೆಂಡ್‌ನ‌ ಹ್ಯೂಬರ್ಟ್‌ ಹುರ್ಕಾಝ್ ಕಜಾಕ್‌ಸ್ಥಾನದ ಟಿಮೋಫಿ ಸ್ಕಾಟೋವ್‌ ಅವರನ್ನು 6-3, 7-6 (7-4), 7-6 (7-3)ರಿಂದ ಹಿಮ್ಮೆಟ್ಟಿಸಿದರು. ಬ್ರಿಟನ್‌ನ 25ನೇ ಶ್ರೇಯಾಂಕದ ಜಾಕ್‌ ಡ್ರಾಪರ್‌ ಚೀನದ ಜಾಂಗ್‌ ಜಿಜೆನ್‌ ಅವರನ್ನು 6-3, 6-0, 6-0 ಅಂತರದಿಂದ ಸುಲಭದಲ್ಲಿ ಮಣಿಸಿದರು.

ಕಾರ್ಲೋಸ್‌ ಅಲ್ಕರಾಜ್‌ಗೆ ಶರಣಾದವರು ಆಸ್ಟ್ರೇಲಿಯದ ಲೀ ಟು. ಸ್ಪೇನಿಗನ ಗೆಲುವಿನ ಅಂತರ 6-2, 4-6, 6-3, 6-1.

ಗ್ರೀಕ್‌ ದೈತ್ಯನ ಪತನ
ಗ್ರೀಕ್‌ನ ಟೆನಿಸ್‌ ದೈತ್ಯ, 11ನೇ ಶ್ರೇಯಾಂಕದ ಸ್ಟೆಫ‌ನಸ್‌ ಸಿಸಿಪಸ್‌ ಮೊದಲ ಸುತ್ತಿನಲ್ಲೇ ಎಡವಿದ್ದು ದ್ವಿತೀಯ ದಿನದ ಏರುಪೇರಿನ ಫ‌ಲಿತಾಂಶವಾಗಿ ದಾಖಲಾಯಿತು. ಅವರನ್ನು ಆಸ್ಟ್ರೇಲಿಯದ ತನಾಸಿ ಕೊಕಿನಾಕಿಸ್‌ 7-6 (7-5), 4-6, 6-3, 7-5 ಅಂತರದಿಂದ ಬಗ್ಗುಬಡಿದರು. ಹಾಗೆಯೇ 19ನೇ ಶ್ರೇಯಾಂಕಿತ ಆಟಗಾರ, ಕೆನಡಾದ ಫೆಲಿಕ್ಸ್‌ ಔಗರ್‌ ಅಲಿಯಾಸಿಮ್‌ ಜೆಕ್‌ ಗಣರಾಜ್ಯದ ಜೇಕಬ್‌ ಮೆನ್ಸಿಕ್‌ ಕೈಯಲ್ಲಿ 6-2, 6-4, 6-2ರ ಆಘಾತ ಅನುಭವಿಸಿದರು.

ಒಸಾಕಾ ವಿಜಯ
ಮೆಂಟಲ್‌ ಹೆಲ್ತ್‌ ಬಗ್ಗೆ ಅಮೆರಿಕದ ಖ್ಯಾತ ಸ್ವಿಮ್ಮರ್‌ ಮೈಕಲ್‌ ಪೆಲ್ಫ್$Õ ಅವರಲ್ಲಿ ಟಿಪ್ಸ್‌ ಪಡೆದು ಬಂದ ನವೋಮಿ ಒಸಾಕಾ ಮೊದಲ ಸುತ್ತಿನಲ್ಲೇ ಇದರ ಪ್ರಯೋಜನ ಪಡೆದಂತಿತ್ತು. ಅವರು 2017ರ ಫ್ರೆಂಚ್‌ ಓಪನ್‌ ಚಾಂಪಿಯನ್‌, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ವಿರುದ್ಧ 6-3, 6-2 ಅಂತರದಿಂದ ಗೆದ್ದು ಬಂದರು. ಒಸಾಕಾ, ಕಳೆದ 4 ವರ್ಷಗಳಲ್ಲಿ ಟಾಪ್‌-10 ಆಟಗಾರ್ತಿಯನ್ನು ಸೋಲಿಸಿದ ಮೊದಲ ನಿದರ್ಶನ ಇದಾಗಿದೆ.

Advertisement

ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್‌ ರಷ್ಯಾದ ಕ್ಯಾಮಿಲ್ಲಾ ರಖೀಮೋವಾ ಅವರನ್ನು 6-4, 7-6 (8-6)ರಿಂದ; ಈ ವರ್ಷದ ಫ್ರೆಂಚ್‌ ಓಪನ್‌ ಮತ್ತು ವಿಂಬಲ್ಡನ್‌ ಫೈನಲಿಸ್ಟ್‌ ಆಗಿರುವ ಇಟಲಿಯ ಜಾಸ್ಮಿನ್‌ ಪೌಲಿನಿ 2019ರ ನ್ಯೂಯಾರ್ಕ್‌ ಚಾಂಪಿಯನ್‌ ಬಿಯಾಂಕಾ ಆ್ಯಂಡ್ರಿಸ್ಕೂ ಅವರನ್ನು 6-7 (5-7), 6-2, 6-4ರಿಂದ ಮಣಿಸಿದರು. ಆಲ್‌ ಅಮೆರಿಕನ್‌ ಸೆಣಸಾಟವೊಂದರಲ್ಲಿ ಕ್ಯಾರೋಲಿನ್‌ ಡೋಲ್‌ಹೈಡ್‌ 1-6, 7-5, 6-4ರಿಂದ ಡೇನಿಯಲ್‌ ಕಾಲಿನ್ಸ್‌ ಅವರನ್ನು ಪರಾಭವಗೊಳಿಸಿದರು.

5 ಗಂಟೆ, 35 ನಿಮಿಷ ನಡೆದ ಸುದೀರ್ಘ‌ ಪಂದ್ಯ
ಬ್ರಿಟನ್‌ನ ಡ್ಯಾನ್‌ ಇವಾನ್ಸ್‌ ಮತ್ತು ರಷ್ಯಾದ ಕರೆನ್‌ ಕಶನೋವ್‌ ನಡುವಿನ ಮೊದಲ ಸುತ್ತಿನ ಪಂದ್ಯ ನೂತನ ದಾಖಲೆಯೊಂದನ್ನು ನಿರ್ಮಿಸಿದೆ. ಇದು ಯುಎಸ್‌ ಓಪನ್‌ ಇತಿಹಾಸದ ಸುದೀರ್ಘ‌ ಪಂದ್ಯವೆಂಬ ಹಿರಿಮೆಗೆ ಪಾತ್ರವಾಗಿದೆ. 5 ಸೆಟ್‌ಗಳ ರ್ಯಾಕೆಟ್‌ ಸಮರ ಬರೋಬ್ಬರಿ 5 ಗಂಟೆ, 35 ನಿಮಿಷಗಳ ತನಕ ಸಾಗಿತು. ಹಿಂದಿನ ದಾಖಲೆ 5 ಗಂಟೆ, 26 ನಿಮಿಷವಾಗಿತ್ತು. ಇದು ಸ್ಟೀಫ‌ನ್‌ ಎಡºರ್ಗ್‌-ಮೈಕಲ್‌ ಚಾಂಗ್‌ ನಡುವಿನ 1992ರ ಸೆಮಿಫೈನಲ್‌ ಮುಖಾಮುಖೀಯಾಗಿತ್ತು. ಈ ಪಂದ್ಯವನ್ನು ಡ್ಯಾನ್‌ ಇವಾನ್ಸ್‌ 6-7 (6-8), 7-6 (7-2), 7-6 (7-4), 4-6, 6-4 ಅಂತರದಿಂದ ಜಯಿಸಿದರು. ಇದರೊಂದಿಗೆ ಕಶನೋವ್‌ ವಿರುದ್ಧ ಆಡಿದ ಐದೂ ಪಂದ್ಯಗಳನ್ನು ಇವಾನ್ಸ್‌ ಗೆದ್ದಂತಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next