ನ್ಯೂಯಾರ್ಕ್: ಹಾಲಿ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೇವ್, ಸೆರೆನಾ ವಿಲಿಯಮ್ಸ್ ಸುಲಭ ಗೆಲುವು ಸಾಧಿಸಿ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದಲ್ಲಿ ಮುನ್ನಡೆದಿದ್ದಾರೆ. ಇದೇ ವೇಳೆ ಭರವಸೆಯ ಆಟಗಾರ್ತಿ ಸಿಮೋನಾ ಹಾಲೆಪ್ ಮೊದಲ ಸುತ್ತಿನಲ್ಲಿಯೇ ಸೋತು ಆಘಾತಕ್ಕೆ ಒಳಗಾಗಿದ್ದಾರೆ.
ಅಗ್ರ ಶ್ರೇಯಾಂಕದ ಮೆಡ್ವೆಡೇವ್ ಅವರು ಸ್ಟೀಫನ್ ಕೊಜೊÉàವ್ ಅವರನ್ನು 6-2, 6-4, 6-0 ಸೆಟ್‌ಗಳಿಂದ ಉರುಳಿಸಿದರು. ಮುಂದಿನ ಸುತ್ತಿನಲ್ಲಿ ಅವರು ಫ್ರಾನ್ಸ್‌ನ ಆರ್ಥರ್ ರಿಂಡೆರ್‌ನೆಕ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಜೊಕೋವಿಕ್ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದ ಮೆಡ್ವೆಡೇವ್ ಈ ಬಾರಿಯೂ ಗೆದ್ದು ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಮರ್ರೆ ಗೆಲುವು: ಬ್ರಿಟನ್‌ನ ಆ್ಯಂಡಿ ಮರ್ರೆ ಮೊದಲ ಸುತ್ತಿನಲ್ಲಿ ಆರ್ಜೆಟೀನಾದ ಫ್ರಾನ್ಸಿಸ್ಕೊ ಸೆರುಂಡೊಲೊ ಅವರನ್ನು 7-5, 6-3, 6-3 ಸೆಟ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ. 10 ವರ್ಷಗಳ ಹಿಂದೆ ಅವರಿಲ್ಲಿ (2012) ಜೊಕೋವಿಕ್ ಅವರನ್ನು ಸೋಲಿಸಿ ಮೊದಲ ಗ್ರ್ಯಾನ್ ಸ್ಲಾಮ್ ಕೂಟದ ಪ್ರಶಸ್ತಿ ಜಯಿಸಿದ್ದರು. ಈ ಸಾಧನೆಯ ಬಳಿಕ ತನ್ನ ಬಾಳ್ವೆಯಲ್ಲಿ ಬಹಳಷ್ಟು ಘಟನೆಗಳು ಸಂಭವಿಸಿವೆ ಎಂದವರು ಹೇಳಿದ್ದಾರೆ. ಕೋವಿಡ್ ಸೋಂಕಿಗೆ ಲಸಿಕೆ ಹಾಕಿಕೊಳ್ಳದ ಕಾರಣ ಅಮೆರಿಕಕ್ಕೆ ಪ್ರಯಾಣಿಸಲು ಅನುಮತಿ ನಿರಾಕರಿಸಿದ್ದರಿಂದ ಜೊಕೋವಿಕ್ ಈ ಬಾರಿ ಯುಎಸ್ ಓಪನ್‌ನಲ್ಲಿ ಭಾಗವಹಿಸುತ್ತಿಲ್ಲ. ಮರ್ರೆ ಮುಂದಿನ ಸುತ್ತಿನಲ್ಲಿ ಅಮೆರಿಕದ ಎಮಿಲಿಯೊ ನಾವಾ ಅವರನ್ನು ಎದುರಿಸಲಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಐದು ಸೆಟ್‌ಗಳ ಸುದೀರ್ಘ ಸೆಣಸಾಟದಲ್ಲಿ ಆಸ್ಟ್ರೇಲಿಯದ ಜಾನ್ ಮಿಲ್ಮನ್ ಅವರನ್ನು ಉರುಳಿಸಿದ್ದರು.
ಟಸಿಪಸ್‌ಗೆ ಸೋಲು: ನಾಲ್ಕನೇ ಶ್ರೇಯಾಂಕದ ಸ್ಟೆಫನೋಸ್ ಟಿಸಿಪಸ್ ಅರ್ಹತಾ ಆಟಗಾರ ಇಲಾಹಿ ಗಾಲನ್ ಅವರಿಗೆ ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಸೋತಿದ್ದಾರೆ. ಮುಖ್ಯ ಡ್ರಾದಲ್ಲಿ ಮೊದಲ ಬಾರಿ ಆಡಿದ ಗಾಲನ್ 6-0, 6-1, 3-6, 7-5 ಸೆಟ್‌ಗಳಿಂದ ಉರುಳಿಸಿದರು. 2020ರ ಚಾಂಪಿಯನ್ ಡೊಮಿನಿಕ್ ಥೀಮ್ ಕೂಡ ಸೋತು ಹೊರಬಿದ್ದಿದ್ದಾರೆ. ಅವರನ್ನು ಸ್ಪೇನ್‌ನ ಪಾಬ್ಲೊ ಕ್ಯಾರೆನೊ ಬುಸ್ಟ ಅವರನ್ನು 7-5, 6-1, 5-7, 6-3 ಸೆಟ್‌ಗಳಿಂದ ಕೆಡಹಿದರು.
ಅರ್ಹತಾ ಆಟಗಾರ ವು ಯಿಬಿಂಗ್ ಅವರು ನಿಕೋಲಾಸ್ ಬಾಸಿಲಶ್ವೆಲಿ ಅವರನ್ನು 6-3, 6-4, 6-0 ಸೆಟ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ. ಪುರುಷರ ಗ್ರ್ಯಾನ್ ಸ್ಲಾಮ್ ಕೂಟದ ಪಂದ್ಯದಲ್ಲಿ 63 ವರ್ಷಗಳ ಬಳಿಕ ಜಯ ಸಾಧಿಸಿದ ಚೀನದ ಮೊದಲ ಆಟಗಾರ ಎಂಬ ಹೆಮ್ಮೆಗೆ ಯುಬಿಂಗ್ ಪಾತ್ರರಾಗಿದ್ದಾರೆ.
ಸೆರೆನಾ ಮನ್ನಡೆ: ತನ್ನ 21ನೇ ಯು ಎಸ್ ಓಪನ್ ಕೂಟದಲ್ಲಿ ಆಡುತ್ತಿರುವ ಸೆರೆನಾ ವಿಲಿಯಮ್ಸ್ ಮಾಂಟೆನೆಗ್ರೊದ ದಾನ್ಕ ಕೊವಿನಿಕ್ ಅವರನ್ನು 6-3, 6-3 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ಇದು ಈ ವರ್ಷ ಸೆರೆನಾ ಅವರ ಕೇವಲ ಎರಡನೇ ಗೆಲುವು ಆಗಿದೆ. ಮುಂದಿನ ಸುತ್ತಿನಲ್ಲಿ ಅವರು ದ್ವಿತೀಯ ಶ್ರೇಯಾಂಕದ ಅನೆಟ್ ಕೊಂಟಾವೇಟ್ ಅವರನ್ನು ಎದರಿಸಲಿದ್ದಾರೆ. ದಾಖಲೆ ಸಮಬಲದ 24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಸೆರೆನಾ ಟೆನಿಸ್ ಬಾಳ್ವೆಯನ್ನು ಅಂತ್ಯಗೊಳಿಸುವ ಸಿದ್ಧತೆಯಲ್ಲೂ ಇದ್ದಾರೆ.
ಹಾಲೆಪ್‌ಗೆ ಆಘಾತ
ಕಳೆದ 22 ಪಂದ್ಯಗಳಲ್ಲಿ 19ರಲ್ಲಿ ಜಯ ಸಾಧಿಸಿದ್ದ ಹಾಗೂ ಇತ್ತೀಚೆಗೆ ಅಗ್ರ 10ರೊಳಗಿನ ರ್‍ಯಾಂಕಿಗೇರಿದ್ದ ಸಿಮೋನಾ ಹಾಲೆಪ್ ಮೊದಲ ಸುತ್ತಿನಲ್ಲಿಯೇ ಸೋತು ಆಘಾತಕ್ಕೆ ಒಳಗಾಗಿದ್ದಾರೆ. ಹಾಲೆಪ್ ಅವರನ್ನು ಕೆಡಹಿದವರು ಉಕ್ರೇನಿನ ದರಿಯಾ ಸ್ನಿಗುರ್. 6-2, 0-6, 6-4 ಸೆಟ್‌ಗಳಿಂದ ಗೆದ್ದ ಬಳಿಕ ಸ್ನಿಗುರ್ ಕಣ್ಣೀರು ಸುರಿಸಿದರು. ರಷ್ಯಾದ ಯುದ್ಧದಿಂದ ತತ್ತರಿಸಿರುವ ತನ್ನ ದೇಶ ಮತ್ತು ಕುಟುಂಬ ಸದಸ್ಯರನ್ನು ನೆನೆಸಿ ಅವರಿಗೆ ದುಃಖ ತಡೆಯಲಾಗಲಿಲ್ಲ. ಉಕ್ರೇನ್‌ಗೆ ಸಹಾಯ ನೀಡಲು ನಿಧಿ ಸಂಗ್ರಹಕ್ಕೆ ಸ್ನಿಗುರ್ ಕಳೆದ ವಾರ ಶಾಂತಿಗಾಗಿ ಟೆನಿಸ್ ಆಟ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.