Advertisement

ಸಿಸಿಪಸ್‌, ಒಸಾಕಾ, ಸಾನಿಯಾ ಆಟ ಮುಗೀತು

09:37 PM Sep 04, 2021 | Team Udayavani |

ನ್ಯೂಯಾರ್ಕ್‌: ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ 5ನೇ ದಿನದಾಟದಲ್ಲಿ ಖ್ಯಾತನಾಮರ ಸೋಲಿನ ಕಥೆಗಳು ಸುದ್ದಿಯಾಗಿವೆ.

Advertisement

ಗ್ರೀಸ್‌ನ ದೈತ್ಯ ಆಟಗಾರ ಸ್ಟೆಫಾನಸ್‌ ಸಿಸಿಪಸ್‌, ಹಾಲಿ ವನಿತಾ ಚಾಂಪಿಯನ್‌ ನವೋಮಿ ಒಸಾಕಾ, ಭಾರತದ ಸ್ಟಾರ್‌ ಆಟಗಾರ್ತಿ ಸಾನಿಯಾ ಮಿರ್ಜಾ ಆಘಾತಕಾರಿ ಸೋಲಿನೊಂದಿಗೆ ಕೂಟದಿಂದ ನಿರ್ಗಮಿಸಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ 18 ವರ್ಷದ ಯುವ ಆಟಗಾರ ಕಾರ್ಲೋಸ್‌ ಅಲ್ಕರಾಝ್ 5 ಸೆಟ್‌ಗಳ ಥ್ರಿಲ್ಲರ್‌ನಲ್ಲಿ ಸಿಸಿಪಸ್‌ ಆಟವನ್ನು ಮುಗಿಸಿದರು. ಅಂತರ 6-3, 4-6, 7-6 (7-2), 0-8, 7-6 (7-5). 1992ರ ಬಳಿಕ ಗ್ರ್ಯಾನ್‌ಸ್ಲಾéಮ್‌ ಕೂಟದ 4ನೇ ಸುತ್ತಿಗೆ ಏರಿದ ಕಿರಿಯ ಟೆನಿಸಿಗನೆನಿಸಿದರು. ಅಂದಿನ ಸಾಧಕ ಆ್ಯಂಡ್ರೆ ಮೆಡ್ವೆಡೇವ್‌. ಫ್ರೆಂಚ್‌ ಓಪನ್‌ 4ನೇ ಸುತ್ತಿಗೇರುವಾಗ ಅವರ ವಯಸ್ಸು ಕೇವಲ 17 ವರ್ಷ.

ಅಮೆರಿಕದ ಫ್ರಾನ್ಸೆಸ್‌ ಥಿಯಾಫೊ ಕೂಡ ಏರುಪೇರಿನ ಫ‌ಲಿತಾಂಶ ದಾಖಲಿಸಿದರು. 3ನೇ ಸುತ್ತಿನ ಮುಖಾಮುಖೀಯಲ್ಲಿ ಅವರು 5ನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೇವ್‌ ವಿರುದ್ಧ 5 ಸೆಟ್‌ಗಳ ಹೋರಾಟ ನಡೆಸಿ 4-6, 6-3, 7-6 (8-6), 4-6, 6-1ರಿಂದ ಗೆದ್ದು ಬಂದರು. ನಂ.2 ಟೆನಿಸಿಗ ಡೇನಿಯೆಲ್‌ ಮೆಡ್ವೆಡೇವ್‌ ಸ್ಪೇನಿನ ಶ್ರೇಯಾಂಕರಹಿತ ಆಟಗಾರ ಪ್ಯಾಬ್ಲೊ ಆ್ಯಂಡುಜರ್‌ ಅವರನ್ನು 6-0, 6-4, 6-3 ಅಂತರದಿಂದ ಸುಲಭದಲ್ಲಿ ಮಣಿಸಿ 3ನೇ ಸುತ್ತು ದಾಟಿದರು. ನೊವಾಕ್‌ ಜೊಕೊವಿಚ್‌ ಹಾಲೆಂಡ್‌ನ‌ ಟಾಲನ್‌ ಗ್ರೀಕ್‌ಸ್ಪೂರ್‌ ಅವರನ್ನು 6-2, 6-3, 6-2ರಿಂದ ಮಣಿಸಿ ತೃತೀಯ ಸುತ್ತು ಪ್ರವೇಶಿಸಿದರು.

ಸಾನಿಯಾ ಜೋಡಿ ಔಟ್‌: ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ರಾಜೀವ್‌ ರಾಮ್‌ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದರು. ಇವರನ್ನು ಡಯಾನಾ ಯೆಸ್ಟ್ರೇಮ್‌ಸ್ಕಾ (ಉಕ್ರೇನ್‌)-ಮ್ಯಾಕ್ಸ್‌ ಪರ್ಸೆಲ್‌ (ಆಸ್ಟ್ರೇಲಿಯ) 6-3, 3-6, 10-7 ಅಂತರದಿಂದ ಹಿಮ್ಮೆಟ್ಟಿಸಿದರು.

Advertisement

ಸಿಮೋನಾ 3 ಸೆಟ್‌ ಥ್ರಿಲ್ಲರ್‌: ರೊಮೇನಿಯದ ಸಿಮೋನಾ ಹಾಲೆಪ್‌ ಕೂಡ ಅಪಾಯದ ಅಂಚಿನಲ್ಲಿದ್ದರು. ಕಝಕಸ್ತಾನದ ಎಲೆನಾ ರಿಬಾಕಿನಾ ದೊಡ್ಡದೊಂದು ಅಪಸೆಟ್‌ಗೆ ಸ್ಕೆಚ್‌ ಹಾಕಿದ್ದರು. ಆದರೆ ಹಾಲೆಪ್‌ ತಿರುಗಿ ಬಿದ್ದು 7-6 (11-13), 6-4, 6-3 ಅಂತರದ ಗೆಲುವು ಕಾಣಲು ಯಶಸ್ವಿಯಾದರು. ಗಾರ್ಬಿನ್‌ ಮುಗುರುಜಾ ಮತ್ತು ವಿಕ್ಟೋರಿಯಾ ಅಜರೆಂಕಾ ನಡುವಿನ ಸ್ಪರ್ಧೆಯೂ 3 ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟಿತು. ಇದನ್ನು ಮುಗುರುಜಾ 6-4, 3-6, 6-2ರಿಂದ ಗೆದ್ದರು. ಜರ್ಮನಿಯ ಏಂಜೆಲಿಕ್‌ ಕೆರ್ಬರ್‌ ಹಾಗೂ ಅಮೆರಿಕದ ಮಾಜಿ ಚಾಂಪಿಯನ್‌ ಸ್ಲೋನ್‌ ಸ್ಟೀಫ‌ನ್ಸ್‌ ಕೂಡ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾದರು. ಕೆರ್ಬರ್‌ 5-7, 6-2, 6-3ರಿಂದ ಗೆದ್ದು 4ನೇ ಸುತ್ತಿಗೇರಿದರು.

ಸೋತು ಅತ್ತು, ವಿರಾಮ ಪಡೆಯುತ್ತೇನೆಂದ ಒಸಾಕಾ:

ನವೋಮಿ ಒಸಕಾಗೆ ಆಘಾತವಿಕ್ಕಿದವರು ಕೆನಡಾದ 18ರ ಹರೆಯದ, 73ನೇ ರ್‍ಯಾಂಕಿಂಗ್‌ ಆಟಗಾರ್ತಿ ಲೇಲಾ ಫೆರ್ನಾಂಡಿಸ್‌. ಅಂತರ 5-7, 7-6 (7-2), 6-4. ಈ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಒಸಾಕಾ, ತಾನು ಸ್ವಲ್ಪ ಕಾಲ ಟೆನಿಸ್‌ನಿಂದ ಬ್ರೇಕ್‌ ಪಡೆದುಕೊಳ್ಳುವುದಾಗಿ ಹೇಳಿದರು. ಇತ್ತೀಚೆಗೆ ತಮ್ಮದೇ ನಾಡಾದ ಟೋಕ್ಯೊ ಒಲಿಂಪಿಕ್ಸ್‌ನಲ್ಲಿ ಆಘಾತಕಾರಿಯಾಗಿ ಸೋತಿದ್ದ ಅವರು, ಇಲ್ಲೂ ಸೋಲುವುದರೊಂದಿಗೆ ದಿಗ್ಭ್ರಮೆ ಅನುಭವಿಸಿದರು. ಹಾಗಾಗಿ ಕಣ್ಣೀರು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next