Advertisement

ಸೆರಾನಾ, ಬ್ರಾಡಿ ಔಟ್‌; ಅಮೆರಿಕನ್ನರ ಆಟ ಖತಂ: ಕಿರೀಟಕ್ಕೆ ಒಸಾಕಾ-ಅಜರೆಂಕಾ ಸ್ಪರ್ಧೆ

07:00 PM Sep 11, 2020 | mahesh |

ನ್ಯೂಯಾರ್ಕ್: ಯುಎಸ್‌ ಓಪನ್‌ “ಆಲ್‌ ಅಮೆರಿಕನ್‌ ಫೈನಲ್‌’ಗೆ ಸಾಕ್ಷಿ ಆಗಬಹುದೆಂಬ ತವರಿನ ಟೆನಿಸ್‌ ಅಭಿಮಾನಿಗಳ ನಿರೀಕ್ಷೆ ತಲೆಕೆಳಗಾಗಿದೆ. ಸೆಮಿಫೈನಲ್‌ನಲ್ಲಿ ಅಮೆರಿಕದ ಜೆನ್ನಿಫ‌ರ್‌ ಬ್ರಾಡಿ ಮತ್ತು ಸೆರೆನಾ ವಿಲಿಯಮ್ಸ್‌ ಇಬ್ಬರೂ ಉದುರಿ ಹೋಗಿದ್ದಾರೆ. ಜಪಾನಿನ ನವೋಮಿ ಒಸಾಕಾ ಮತ್ತು ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ರವಿವಾರದ ಪ್ರಶಸ್ತಿ ಸಮರಕ್ಕೆ ಸಜ್ಜಾಗಿದ್ದಾರೆ.

Advertisement

ಅವಳಿ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತೆ ನವೋಮಿ ಒಸಾಕಾ ಮೊದಲ ಸೆಮಿಫೈನಲ್‌ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದು ಬಂದರು. ಇದೊಂದು “ಥ್ರಿಲ್ಲಿಂಗ್‌ ಫೈಟ್‌’ ಆಗಿತ್ತು. ಮೊದಲ ಸೆಟ್‌ ಅನ್ನು ಬ್ರಾಡಿ ಟೈ-ಬ್ರೇಕರ್‌ನಲ್ಲಿ ಕಳೆದುಕೊಳ್ಳದೇ ಹೋಗಿದ್ದರೆ ಬಹುಶಃ ಒಸಾಕಾ ಆಟ ಮುಗಿದೇ ಹೋಗುತ್ತಿತ್ತು. ಅವರು ಜೆನ್ನಿಫ‌ರ್‌ ಬ್ರಾಡಿ ಆಟವನ್ನು 7-6 (7-1), 3-6, 6-3ರಿಂದ ಕೊನೆಗಾಣಿಸುವಲ್ಲಿ ಯಶಸ್ವಿಯಾದರು. ಕೂಟದಲ್ಲಿ ಒಂದೂ ಸೆಟ್‌ ಕಳೆದುಕೊಳ್ಳದೆ ಸೆಮಿಫೈನಲ್‌ ತನಕ ಬಂದಿದ್ದ 28ನೇ ಶ್ರೇಯಾಂಕದ ಬ್ರಾಡಿ ಅವರ ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಕನಸು ಛಿದ್ರಗೊಂಡಿತು.

ಪಂದ್ಯದ ವೇಳೆ ಮಳೆ ಸುರಿದ ಕಾರಣ “ಆರ್ಥರ್‌ ಆ್ಯಶ್‌ ಸ್ಟೇಡಿಯಂ ಛಾವಣಿಯನ್ನು ಮುಚ್ಚಿ ಆಟ ಮುಂದುವರಿಸಲಾಯಿತು. “ಇಂಥ ವಾತಾವರಣದಲ್ಲಿ ಆಡಲು ನಾನು ತುಂಬ ಇಷ್ಟಪಡುತ್ತೇನೆ. ಬೇಸರವೆಂದರೆ, ವೀಕ್ಷಕರಿಲ್ಲದಿರುವುದು…’ ಎಂದು 3ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಒಸಾಕಾ ಹೇಳಿದರು.

2018ರ ಯುಎಸ್‌ ಓಪನ್‌ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಅವರನ್ನು ಮಣಿಸುವ ಮೂಲಕ ಒಸಾಕಾ ಮೊದಲ ಗ್ರ್ಯಾನ್‌ಸ್ಲಾಮ್‌ ಜಯಿಸಿದ್ದರು. ಬಳಿಕ ಕಳೆದ ವರ್ಷದ ಆಸ್ಟ್ರೇಲಿಯನ್‌ ಓಪನ್‌ನಲ್ಲೂ ಚಾಂಪಿಯನ್‌ ಆಗಿ ಮೂಡಿಬಂದರು. ಇನ್ನೊಂದೆಡೆ ಬ್ರಾಡಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಆಗಿತ್ತು.

ಸೆರೆನಾಗೆ ತವರಿನ ಶಾಪ!
ಬಹುಶಃ ಸೆರೆನಾ ವಿಲಿಯಮ್ಸ್‌ ತವರಿನ ಶಾಪಕ್ಕೆ ತುತ್ತಾಗಿರಬಹುದು. 24ನೇ ಗ್ರ್ಯಾನ್‌ಸ್ಲಾಮ್‌ ದಾಖಲೆಯನ್ನು ಸರಿದೂಗಿಸಲು 2017ರಿಂದಲೂ ಪ್ರಯತ್ನಿಸುತ್ತಿದ್ದ ಅವರಿಗೆ ಮತ್ತೂಮ್ಮೆ ಹಿನ್ನಡೆಯಾಗಿದೆ. ಅವರನ್ನು ವಿಕ್ಟೋರಿಯಾ ಅಜರೆಂಕಾ 1-6, 6-3, 6-3ರಿಂದ ಹಿಮ್ಮೆಟ್ಟಿಸಿದರು.

Advertisement

ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದಾಗ ಸೆರೆನಾರ ಫೈನಲ್‌ ಓಟ ಖಚಿತ ಎಂಬ ನಿರೀಕ್ಷೆ ಗರಿಗೆದರಿತ್ತು. ಆದರೆ ಅಜರೆಂಕಾ ಫೀನಿಕ್ಸ್‌ನಂತೆ ಎದ್ದು ಬಂದರು. ಸೆರೆನಾ ವಿರುದ್ಧ ಆಡಿದ 11 ಗ್ರ್ಯಾನ್‌ಸ್ಲಾಮ್‌ ಪಂದ್ಯಗಳಲ್ಲಿ ಮೊದಲ ಬಾರಿಗೆ ಗೆಲುವಿನ ಸಂಭ್ರಮ ಆಚರಿಸಿದರು. 7 ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗೆ ಲಗ್ಗೆ ಇರಿಸಿದರು.

ಅಜರೆಂಕಾ 2012 ಮತ್ತು 2013ರ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿದ್ದಾರೆ. ಈ ಎರಡು ವರ್ಷ ಯುಎಸ್‌ ಓಪನ್‌ ಫೈನಲ್‌ ತಲುಪಿಯೂ ಸೆರೆನಾಗೆ ಶರಣಾಗಿ ಪ್ರಶಸ್ತಿಯಿಂದ ದೂರವೇ ಉಳಿದಿದ್ದರು. ಈ ಬಾರಿ ಸೆರೆನಾ ವಿರುದ್ಧ ಸೆಮಿಫೈನಲ್‌ನಲ್ಲೇ ಸೇಡು ತೀರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next