ವಾಷಿಂಗ್ಟನ್:ಕುಖ್ಯಾತ ಐಸಿಸ್ ಉಗ್ರರ ಅಡಗುದಾಣದ ಮೇಲೆ ಅಮೆರಿಕ ವಿಶ್ವದಲ್ಲೇ ಅತಿ ದೊಡ್ಡದಾದ ಸಾಂಪ್ರದಾಯಿಕ ಬಾಂಬ್(ಮದರ್ ಆಫ್ ಆಲ್ ಬಾಂಬ್) ದಾಳಿಯಲ್ಲಿ ಕೇರಳ ಮೂಲದ ಯುವಕ ಸೇರಿದಂತೆ 36 ಉಗ್ರರು ಬಲಿಯಾಗಿರುವುದಾಗಿ ಅಫ್ಘಾನ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದು, ಯಾವುದೇ ನಾಗರಿಕರ ಸಾವು ಸಂಭವಿಸಿಲ್ಲ ಎಂದು ಹೇಳಿದೆ.
ಕುಖ್ಯಾತ ಉಗ್ರ ಸಂಘಟನೆ ಐಸಿಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ವಿಶ್ವದಲ್ಲೇ ಅತಿ ದೊಡ್ಡದಾದ ಸಾಂಪ್ರದಾಯಿಕ ಬಾಂಬ್ (ಮದರ್ ಆಫ್ ಆಲ್ ಬಾಂಬ್) ಒಂದನ್ನು ಪ್ರಯೋಗಿಸಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಬಾಂಬ್ ಪ್ರಯೋಗದ ನಿರ್ಧಾರ ಕೈಗೊಂಡಿದೆ.
ಅಮೆರಿಕ ಪ್ರಯೋಗಿಸಿದ ಬಾಂಬ್ ಪರಮಾಣು ಬಾಂಬ್‌ಗಳ ಹೊರತಾದ ಅತಿ ಸಾಮರ್ಥ್ಯದ ಬಾಂಬ್ ಇದಾಗಿದ್ದು, ಆಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದ ಅಚಿನ್ ಜಿಲ್ಲೆಯಲ್ಲಿರುವ ಐಸಿಸ್‌ನ ಅಡಗುದಾಣದ ಮೇಲೆ ಈ ಬಾಂಬ್ ಹಾಕಲಾಗಿದೆ.
ಜಿಬಿಯು-43/ಬಿ (ಮಾಬ್) ಹೆಸರಿನ, ಬರೋಬ್ಬರಿ 9787 ಕೇಜಿ ತೂಕದ ಭಾರೀ ದೊಡ್ಡ ಬಾಂಬ್ ಇದಾಗಿದ್ದು, ಸ್ಥಳೀಯ ಕಾಲಮಾನ 7 ಗಂಟೆಗೆ ಅದನ್ನು ಪ್ರಯೋಗಿಸಲಾಗಿದೆ. ಎಮ್ ಸಿ-130 ಸರಕು ಸಾಗಣೆ ವಿಮಾನದಿಂದ ಇದನ್ನು ಪ್ರಯೋಗಿಸಲಾಗಿದೆ ಎಂದು ಅಮೆರಿಕ ಮಿಲಿಟರಿ ಹೇಳಿಕೊಂಡಿದೆ.
Related Articles
ಕಾಸರಗೋಡಿನ ಯುವಕ ಮುರ್ಷಿದ್ ಬಲಿ:
ಕಳೆದ ವರ್ಷ ಕೇರಳ, ಕಾಸರಗೋಡಿನಿಂದ ನಾಪತ್ತೆಯಾಗಿ, ಐಸಿಸ್ ಸೇರಿದ್ದ 21 ಯುವಕರಲ್ಲಿ ಮುರ್ಷಿದ್ ಕೂಡಾ ಒಬ್ಬನಾಗಿದ್ದು, ಗುರುವಾರ ರಾತ್ರಿ ಆಫ್ಘಾನಿಸ್ತಾನದ ನಂಗರ್‌ಹಾರ್ ನಲ್ಲಿ ಐಸಿಸ್ ನೆಲೆ ಮೇಲೆ ಅಮೆರಿಕ ಪಡೆ ನಡೆಸಿದ ಬೃಹತ್ ಬಾಂಬ್ ದಾಳಿಯಲ್ಲಿ ಕಾಸರಗೋಡಿನ ಮುರ್ಷಿದ್ ಬಲಿಯಾಗಿದ್ದಾನೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಮುರ್ಷಿದ್ ಬಲಿಯಾಗಿರುವ ಬಗ್ಗೆ ಅಘ್ಘಾನ್ ಅಧಿಕಾರಿಗಳು ಕಾಸರಗೋಡಿನಲ್ಲಿರುವ ಮುರ್ಷಿದ್ ಕುಟುಂಬಕ್ಕೆ ಮಾಹಿತಿ ರವಾನಿಸಿದ್ದಾರೆ ಎಂದು ವರದಿ ಹೇಳಿದೆ.