Advertisement

ಬುಡಕಟ್ಟು ಜನರಿಂದ ಕ್ರೈಸ್ತ ಮಿಷನರಿಯ ಹತ್ಯೆ

06:00 AM Nov 22, 2018 | |

ಪೋರ್ಟ್‌ಬ್ಲೇರ್‌/ಹೊಸದಿಲ್ಲಿ: ಅಂಡಮಾನ್‌ ಮತ್ತು ನಿಕೋಬಾರ್‌ ಬಳಿಯ ನಾರ್ತ್‌ ಸೆಂಟಿನೆಲ್‌ ದ್ವೀಪದಲ್ಲಿರುವ ಸಂರಕ್ಷಿತ ಬುಡಕಟ್ಟು ಜನಾಂಗದವರ ಮನವೊಲಿಸಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ದ್ವೀಪಕ್ಕೆ ಕಾಲಿಟ್ಟಿದ್ದ ಅಮೆರಿಕದ ಧರ್ಮ ಪ್ರಚಾರಕರೊಬ್ಬರನ್ನು ಸ್ಥಳೀಯ ಬುಡಕಟ್ಟು ಜನರು ಬಾಣ ಹೊಡೆದು ಹತ್ಯೆಗೈದಿದ್ದಾರೆ. ಜಾನ್‌ ಅಲೆನ್‌ ಚೌ (27) ಮೃತ ವ್ಯಕ್ತಿ. ನ. 16ರಂದು ನಡೆದಿರುವ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈವರೆಗೂ ಜಾನ್‌ ಅವರ ಶವ ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ. ವಿಚಿತ್ರವೆಂದರೆ ಜಾನ್‌ ಕೊಲೆಯನ್ನು ಬುಡಕಟ್ಟು ಜನಾಂಗದವರೇ ಮಾಡಿದ್ದರೂ ಕಾನೂನು ರೀತಿ ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ.

Advertisement

ಮೀನುಗಾರರ ಸಹಾಯ ಪಡೆದಿದ್ದರು!
ಈ ದ್ವೀಪಕ್ಕೆ ಕರೆದುಕೊಂಡು ಹೋಗಲು ಯಾವುದೇ ಮೀನುಗಾರರು ಒಪ್ಪುವುದಿಲ್ಲ. ಹಾಗಾಗಿ ಈ ಹಿಂದೆ ಕೆಲವು ಬಾರಿ ಈ ದ್ವೀಪ ಪ್ರವೇಶಿಸುವ ವ್ಯರ್ಥ ಪ್ರಯತ್ನ ಮಾಡಿದ್ದ ಜಾನ್‌, ಬರಿಗೈಯಲ್ಲಿ ಹಿಂದಿರುಗಿದ್ದರು. ಆದರೆ ಈ ಬಾರಿ ಏಳು ಮೀನುಗಾರರೊಂದಿಗೆ ದೋಣಿಗಳಲ್ಲಿ ಸಾಗಿ ದ್ವೀಪ ತಲುಪಿದ್ದರು. ಈಗ ಈ ಮೀನುಗಾರರನ್ನು ಅಂಡಮಾನ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಾಣಗಳ ಸುರಿಮಳೆ
ಮೀನುಗಾರರು ನೀಡಿರುವ ಹೇಳಿಕೆ ಪ್ರಕಾರ, ದ್ವೀಪದೊಳಕ್ಕೆ ಕಾಲಿಟ್ಟ ಕೆಲವೇ ಸೆಕೆಂಡುಗಳಲ್ಲಿ ದ್ವೀಪದೊಳಗಿನಿಂದ ಬಂದ ಹತ್ತಾರು ಬಾಣಗಳು ಅವರ ದೇಹವನ್ನು ಹೊಕ್ಕವು. ಆದರೂ ಜಾನ್‌ ಕೊಂಚ ದೂರ ನಡೆದು ಕುಸಿದುಬಿದ್ದರು. ಘಟನೆಯನ್ನು ನೋಡಿದ ಮೀನುಗಾರರು ಭೀತಿ ಯಿಂದ ಅಲ್ಲಿಂದ ಪಲಾಯನಗೈದರು. 

ತಂಡದಲ್ಲಿದ್ದ ಮೀನುಗಾರನೊಬ್ಬ ಒಮ್ಮೆ ಹಿಂದೆ ತಿರುಗಿ ನೋಡಿದಾಗ, ಬುಡಕಟ್ಟು ಜನಾಂಗದ ವ್ಯಕ್ತಿಗಳು ಬಂದು ಜಾನ್‌ ಕೊರಳಿಗೆ ಹಗ್ಗ ಸುತ್ತುತ್ತಿದ್ದರು. ಮರುದಿನ ಬೆಳಗ್ಗೆ ಮತ್ತೆ ಮೀನುಗಾರರು ಜಾನ್‌ ಪರಿಸ್ಥಿತಿ ತಿಳಿಯಲು ದ್ವೀಪದ ಸಮೀಪ ಹೋದಾಗ ಅಲ್ಲಿ ಸಮುದ್ರ ದಂಡೆಯ ಮೇಲಿನ ಮರಳಲ್ಲಿ ಅರ್ಧ ಹೂತುಹಾಕಿದ್ದ ಅವರ ಶವ ವನ್ನು ನೋಡಿದ್ದಾರೆ. ಆದರೆ ಅಲ್ಲಿಗೆ ಹೋಗಿ ಶವ ತರಲು ಭಯಪಟ್ಟು ಹಾಗೇ ಹಿಂದಿರುಗಿದ್ದಾರೆ.

ಅನಂತರ ಈ ವಿಚಾರವನ್ನು ಅಂಡಮಾನ್‌ನಲ್ಲಿರುವ ಜಾನ್‌ ಅವರ ಆಪ್ತರೂ ಆಗಿರುವ ಕ್ರೈಸ್ತ ಧರ್ಮ ಪ್ರಚಾರಕ ಅಲೆಕ್ಸ್‌ ಅವರಿಗೆ ತಿಳಿಸಿದ್ದಾರೆ. ಅಲೆಕ್ಸ್‌ ಅವರು ಅಮೆರಿಕದಲ್ಲಿರುವ ಜಾನ್‌ ಕುಟುಂಬಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ತತ್‌ಕ್ಷಣವೇ ಜಾನ್‌ ಕುಟುಂಬ ದಿಲ್ಲಿಯಲ್ಲಿರುವ ಅಮೆರಿಕದ ದೂತವಾಸದ ಗಮನಕ್ಕೆ ಈ ವಿಚಾರ ತಂದಿದ್ದು ಸಹಾಯ ಕೋರಿದೆ. ಪ್ರಸ್ತುತ ಹೆಲಿಕಾಪ್ಟರ್‌ಗಳ ಮೂಲಕ ಜಾನ್‌ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ ಹೆಲಿಕಾಪ್ಟರ್‌ ಅಲ್ಲಿ ಇಳಿಸಿದರೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಇನ್ನೂ ದ್ವೀಪದೊಳಗೆ ಯಾರೂ ಕಾಲಿಟ್ಟಿಲ್ಲ.

Advertisement

ತಪ್ಪಿತಸ್ಥರನ್ನು ಹಿಡಿಯಿರಿ
ಅಂಡಮಾನ್‌ ದ್ವೀಪದಲ್ಲಿ ಕೊಲೆಗೀಡಾಗಿರುವ ಜಾನ್‌ ನಮ್ಮದೇ ಸಂಘಟನೆಗೆ ಸೇರಿದವ ಎಂದು ಅಮೆರಿಕದ ಕ್ರೈಸ್ತ ಮಿಷನರಿ ಪರ್ಸೆಕ್ಯೂಶನ್‌(ಇಂಟರ್‌ನ್ಯಾಶನಲ್‌ ಕ್ರಿಶ್ಚಿಯನ್‌ ಕನ್ಸರ್ನ್) ಹೇಳಿಕೊಂಡಿದೆ. ಅಮೆರಿಕದ ದೂತವಾಸದ ಮಾಹಿತಿ ಮೇರೆಗೆ ನಮಗೆ ವಿಷಯ ಗೊತ್ತಾಗಿದೆ. ಅವರು ಅಲ್ಲಿನ ಜನರ ಜತೆ ಮಾತನಾಡಿ ಮತಾಂತರ ಮಾಡುವುದಕ್ಕಾಗಿ ತೆರಳಿದ್ದರು ಎಂದು ಸಂಸ್ಥೆಯೇ ಹೇಳಿರುವುದಾಗಿ ಡೈಲಿ ಮೇಲ್‌ ವರದಿ ಮಾಡಿದೆ. ಜತೆಗೆ ತಪ್ಪಿತಸ್ಥರ ವಿರುದ್ಧ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಎಂದು ಭಾರತ ಸರಕಾರಕ್ಕೂ ಈ ಸಂಸ್ಥೆ ಆಗ್ರಹಿಸಿದೆ.

ಹೊರಜಗತ್ತಿನಿಂದ ದೂರ
ಪೋರ್ಟ್‌ಬ್ಲೇರ್‌ನಿಂದ ಪೂರ್ವಕ್ಕೆ ಬಂಗಾಲ ಕೊಲ್ಲಿ ಸಾಗರದಲ್ಲಿ ಸುಮಾರು 50 ಕಿ.ಮೀ. ದೂರದಲ್ಲಿದೆ ನಾರ್ತ್‌ ಸೆಂಟಿನೆಲ್‌ ದ್ವೀಪ. ಹೊರ ಜಗತ್ತಿನ ಯಾರೇ ಆಗಲಿ ಈ ದ್ವೀಪದ ಹತ್ತಿರಕ್ಕೆ ಬಂದರೂ ಸಾಕು ಅವರನ್ನು ದ್ವೀಪದ ಬುಡಕಟ್ಟು ಜನಾಂಗದವರು ಬಾಣಗಳಿಂದ ಹೊಡೆದು ಕೊಲ್ಲುತ್ತಾರೆ. ದ್ವೀಪಕ್ಕೆ ಕಾಲಿಟ್ಟ ಕೆಲವರನ್ನು ಕತ್ತರಿಸಿ ಹಾಕಿದ ಉದಾಹರಣೆಗಳೂ ಇವೆ. ಹಾಗಾಗಿ ಈ ದ್ವೀಪದೊಳಕ್ಕೆ ಹೋಗಲು ಈವರೆಗೆ ಯಾರಿಗೂ ಸಾಧ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next