ವಾಷಿಂಗ್ಟನ್: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುವನ್ನು ಅಮೆರಿಕದಲ್ಲೇ ಹತ್ಯೆಗೈಯ್ಯಲು ಸಂಚು ರೂಪಿಸಿದ್ದು ಭಾರತದ ರಾ (ರಿಸರ್ಚ್ ಆ್ಯಂಡ್ ಅನಾಲಿ ಸಿಸ್ ವಿಂಗ್) ಅಧಿಕಾರಿಯಾ ಗಿದ್ದ ವಿಕ್ರಮ್ ಯಾದವ್ ಎಂದು ಅಮೆರಿಕದ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಗುರುಪತ್ವಂತ್‌ನ ನ್ಯೂಯಾರ್ಕ್ ವಿಳಾಸ ಸಹಿತ ಆತನ ಪ್ರತಿಯೊಂದು ಮಾಹಿತಿಯನ್ನೂ ವಿಕ್ರಮ್ ಯಾದವ್ ಕಲೆ ಹಾಕಿ ಬಳಿಕ ಪನ್ನು ಹತ್ಯೆಗೆ ಜನರನ್ನು ನೇಮಿಸಿದ್ದರು. ಈ ಹತ್ಯೆ ಕಾರ್ಯಾಚರಣೆಗೆ ಅಂದಿನ ರಾ ಮುಖ್ಯಸ್ಥ ಸಮಂತ್ ಗೋಯಲ್ ಅವರ ಅನುಮತಿಯನ್ನೂ ಪಡೆಯಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಈ ಕುರಿತಂತೆ ಭಾರತದ ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2022ರ ನವೆಂಬರ್‌ನಲ್ಲಿ ಅಮೆರಿಕ ದಲ್ಲಿ ಪನ್ನು ಹತ್ಯೆಗೆ ಸಂಚು ರೂಪಿಸಲಾಗಿತ್ತು, ಅದನ್ನು ವಿಫಲಗೊಳಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿತ್ತು. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಮೂಲದ ನಿಖೀಲ್ ಗುಪ್ತಾ ಎಂಬಾತನನ್ನು ಬಂಧಿಸಿ, ಆತನ ಹಿಂದೆ ಭಾರತೀಯ ಅಧಿಕಾರಿಗಳೂ ಇದ್ದಾರೆಂದು ಆರೋಪಿಸಿತ್ತು. ಈ ಸಂಬಂಧ ಭಾರತವೂ ತನಿಖೆಗೆ ಸಮಿತಿ ರಚಿಸಿತ್ತು. ಈ ಮಧ್ಯೆ ಭಾರತದ ಆ ಅಧಿಕಾರಿ ವಿಕ್ರಮ್ ಯಾದವ್ ಎಂದು ವರದಿ ಮಾಡಲಾಗಿದೆ. ಈ ಹಿಂದೆ “ರಾ’ದಲ್ಲಿ ಅಧಿಕಾರಿಯಾಗಿದ್ದ ಇವರು ಈಗ ಭಾರತ ಸರಕಾರದ ಬೇರೊಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ವರದಿಯಲ್ಲಿ ಏನಿದೆ?
-ಖಲಿಸ್ಥಾನಿ ಉಗ್ರ ಪನ್ನುವನ್ನು ಅಮೆರಿಕದ ಮಣ್ಣಲ್ಲೇ ಕೊಲ್ಲಲು ಸಂಚು
-ಇದಕ್ಕೆಂದೇ ತಂಡವೊಂದನ್ನು ನೇಮಕ
ಮಾಡಿದ್ದ ರಾ ಅಧಿಕಾರಿ
-ಪನ್ನುವಿನ ನ್ಯೂಯಾರ್ಕ್ ವಿಳಾಸ ಸಹಿತ ಎಲ್ಲ ಮಾಹಿತಿ ಯನ್ನೂ ಈ ತಂಡಕ್ಕೆ ರವಾನಿಸಿದ್ದ ವಿಕ್ರಂ
-“ಆಪರೇಷನ್ ಟಾರ್ಗೆಟ್ ಪನ್ನು’ವಿಗೆ ಅಂದಿನ ರಾ ಮುಖ್ಯಸ್ಥ ಸಮಂತ್ ಗೋಯಲ್ ಒಪ್ಪಿಗೆಯೂ ಸಿಕ್ಕಿತ್ತು