ಫ್ಲೋರಿಡಾ, ಅಮೆರಿಕ : ನೀವು ಎಟಿಎಂ ಗೆ ಹೋದಾಗ ಅದು ನೀವು ಕೇಳಿದ್ದಕ್ಕಿಂತ ಹೆಚ್ಚು ಹಣವನ್ನು ಹೊರ ಹಾಕಿದರೆ ನೀವೇನು ಮಾಡುವಿರಿ ? ಖಂಡಿತವಾಗಿಯೂ ಸಂತೋಷದಿಂದ ಸ್ವೀಕರಿಸುತ್ತೀರಿ ಮತ್ತು ಎಷ್ಟು ಮಾತ್ರಕ್ಕೂ ಎಟಿಎಂ ಸ್ಕ್ರೀನ್ ಮೇಲೆ ನಿಮ್ಮ ಕೋಪ-ತಾಪ-ಸಿಟ್ಟು-ಸೆಡವನ್ನು ತೋರಿಸುವುದಿಲ್ಲ, ಅಲ್ವಾ ?
ಆದರೆ ಫ್ಲೋರಿಡಾದ ಮೆರಿಟ್ ಐಲ್ಯಾಂಡ್ ನಿವಾಸಿಯಾಗಿರುವ ಮೈಕೆಲ್ ಜೋಸೆಫ್ ಓಲೆಕ್ಸಿಕ್ ಮಾತ್ರ ನಿಮ್ಮ ಹಾಗಲ್ಲ; ಎಟಿಎಂ ತಾನು ಕೇಳಿದ್ದಕ್ಕಿಂತ ಹೆಚ್ಚು ಹಣ ಕೊಟ್ಟದ್ದಕ್ಕೆ ಸಿಟ್ಟಿಗೆದ್ದ ಆತ ಎಟಿಎಂ ಪರದೆಗೆ ಬಲವಾಗಿ ಹೊಡೆದು ಅದನ್ನು ಒಡೆದು ಹಾಕಿದ್ದಾನೆ.
23ರ ಹರೆಯದ ಓಲೆಕ್ಸಿಕ್ ಕಳೆದ ನವೆಂಬರ್‌ನಲ್ಲಿ ಎಟಿಎಂ ಗೆ ಹೋದಾಗ ಆತ ಕೇಳಿದ್ದಕ್ಕಿಂತ ಎಷ್ಟೋ ಹೆಚ್ಚಿನ ಹಣವನ್ನು ಅದು ಹೊರ ತಳ್ಳಿತು. ಇಷ್ಟು ಹಣ ನನಗ್ಯಾಕೆ ? ಅದರಿಂದ ನನಗೇನು ಮಾಡಲಿಕ್ಕಿದೆ ಎಂದು ಕೋಪಗೊಂಡ ಆತ ಒಡನೆಯೇ ಸಿಟ್ಟಿನಿಂದ ಎಟಿಎಂ ಪರದೆಯನ್ನು ಬಲವಾಗಿ ಗುದ್ದಿದ. ಪರಿಣಾವಾಗಿ ಆ ಪರದೆ ಒಡೆದು ಚೂರು ಚೂರಾಯಿತು. ಆತನ ಈ ಕೃತ್ಯ ಎಟಿಎಂ ಸಿಸಿ ಟಿವಿ ಯಲ್ಲಿ ದಾಖಲಾಯಿತು.
ಈ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿದ ಫ್ಲೋರಿಡಾ ಪೊಲೀಸರು ಒಂದು ತಿಂಗಳ ಬಳಿಕ ಕಳೆದ ಶುಕ್ರವಾರ ಆತನನ್ನು ಬಂಧಿಸಿದರು. ಎಟಿಎಂ ಗೆ 5,000 ಡಾಲರ್ ಹಾನಿ ಉಂಟುಮಾಡಿದ್ದಕ್ಕೆ ಕೇಸು ದಾಖಲಿಸಿದರು. ಎಟಿಎಂ ನಾನು ಕೇಳಿದ್ದಕ್ಕಿಂತ ಎಷ್ಟೋ ಹೆಚ್ಚು ಹಣವನ್ನು ಕೊಟ್ಟಾಗ ನನಗೆ ಸಿಟ್ಟು ಬಂದು ನಾನು ಅದರ ಪರದೆಯನ್ನು ಗುದ್ದಿದ್ದು ಹೌದೆಂದು ಆತ ಪೊಲೀಸರಲ್ಲಿ ಒಪ್ಪಿಕೊಂಡ.
ಈ ಘಟನೆ ಕೊಕೋವಾದಲ್ಲಿನ ವೆಲ್ಸ್ ಫಾರ್ಗೋ ಬ್ಯಾಂಕ್ ಶಾಖೆಯ ಎಟಿಎಂ ನಲ್ಲಿ ನಡೆಯಿತೆಂದು ಯುಎಸ್‌ಎ ಟುಡೇ ವರದಿ ಮಾಡಿದೆ.