ವಾಷಿಂಗ್ಟನ್: ಬಳಕೆಯಾಗದೇ ಉಳಿದಿರುವಂಥ ಸುಮಾರು 3.80 ಲಕ್ಷ ಕೌಟುಂಬಿಕ ಮತ್ತು ಉದ್ಯೋಗ-ಆಧರಿತ ವೀಸಾಗಳನ್ನು ಮರುವಶಪಡಿಸಿಕೊಂಡು, ಗ್ರೀನ್ ಕಾರ್ಡ್ ಬ್ಯಾಕ್‌ಲಾಗ್ ಅನ್ನು ತಗ್ಗಿಸುವಂಥ ವಿಧೇಯಕ ವೊಂದನ್ನು ಅಮೆರಿಕದ ಪ್ರಭಾವಿ ಜನಪ್ರತಿನಿಧಿಗಳು ಕಾಂಗ್ರೆಸ್‌ನಲ್ಲಿ ಮಂಡಿಸಿದ್ದಾರೆ.
ಒಂದು ವೇಳೆ, ಈ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿದ್ದೇ ಆದಲ್ಲಿ, ಭಾರತದ ಸಾವಿರಾರು ಉನ್ನತ ಕೌಶಲ್ಯ ಹೊಂದಿರುವ ಐಟಿ-ವೃತ್ತಿಪರರಿಗೆ ಅನುಕೂಲವಾಗಲಿದೆ.
2020ರ ವರದಿಯ ಪ್ರಕಾರ, ಭಾರತೀಯ ನಾಗರಿಕನೊಬ್ಬ ಅಮೆರಿಕದ ಗ್ರೀನ್ ಕಾರ್ಡ್ ಪಡೆಯಬೇಕೆಂದರೆ 195 ವರ್ಷ ಕಾಯಬೇಕು. ಈಗ ಹೊಸ ವಿಧೇಯಕದ ಪ್ರಕಾರ, ಬಳಕೆಯಾಗದೇ ಉಳಿದಿರುವ ವೀಸಾಗಳನ್ನು ವಾಪಸ್ ಪಡೆದರೆ, ಗ್ರೀನ್‌ಕಾರ್ಡ್‌ಗಿರುವ ಬ್ಯಾಕ್‌ಲಾಗ್‌ಗಳನ್ನು ಕಡಿಮೆ ಮಾಡಬಹುದು ಎನ್ನುವುದು ಜನಪ್ರತಿನಿಧಿಗಳ ವಾದ.
ಇದನ್ನೂ ಓದಿ:ಬುಲ್ಡೋಜರ್ ಬಳಕೆ ಮಾಫಿಯಾಗಳಿಗೆ ಮಾತ್ರ, ಬಡವರಿಗೆ ಅಲ್ಲ: ಅಧಿಕಾರಿಗಳಿಗೆ ಯೋಗಿ
ಇನ್ನೊಂದೆಡೆ, ಎಚ್-4 ವೀಸಾ ಹೊಂದಿರುವವರಿಗೆ ದೇಶದಲ್ಲಿ ಉದ್ಯೋಗ ಮಾಡುವ ಆಟೋಮ್ಯಾಟಿಕ್ ಹಕ್ಕು ಒದಗಿಸುವಂಥ ವಿಧೇಯಕವೊಂದನ್ನು ಅಮೆರಿಕದ ಇಬ್ಬರು ಜನಪ್ರತಿನಿಧಿಗಳು ಶುಕ್ರವಾರ ಮಂಡಿಸಿದ್ದಾರೆ. ಇದು ಜಾರಿಯಾದರೆ, ಭಾರತೀಯರು ಸೇರಿದಂತೆ ಸಾವಿರಾರು ವಿದೇಶಿಯರ ಸಂಗಾತಿಗಳಿಗೆ ಅನುಕೂಲವಾಗಲಿದೆ.