ವಾಷಿಂಗ್ಟನ್/ನವದೆಹಲಿ: ಅಮೆರಿಕದ ಕಾಂಗ್ರೆಸ್‌ನಲ್ಲಿ ಪಾಕಿಸ್ತಾನವನ್ನು ನಂಬಿಕೆಗೆ ಅರ್ಹವಾಗಿರುವ ರಾಷ್ಟ್ರ ಅಲ್ಲ ಎಂದು ಘೋಷಣೆ ಮಾಡುವ ಬಗ್ಗೆ ಸಂಸದ ಟೆಡ್ ಪೋ ಮಸೂದೆ ಮಂಡಿಸಿದ್ದಾರೆ.
ಅದಕ್ಕೆ ಪೂರಕವಾಗಿ ಭಾರತದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕು ಎಂದು ಮಂಡಿಸಲಾಗಿದ್ದ ಖಾಸಗಿ ಮಸೂದೆಯನ್ನು ಹಿಂಪಡೆದಿದ್ದಾರೆ.
ಅಮೆರಿಕ ಸಂಸತ್‌ನಲ್ಲಿ ಕಾಂಗ್ರೆಸ್ ಸಂಸದ ಟೆಡ್ ಪೋ ಮಸೂದೆ ಮಂಡಿಸಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಪೋ, ಉಗ್ರವಾದ ಚರ್ಚೆಗೆ ಸಂಬಂಧಿಸಿ ರಚಿಸಲಾದ ಸಂಸದೀಯ ಉಪಮಂಡಳಿಯ ಸದಸ್ಯರಾಗಿದ್ದಾರೆ. ತಾವೂ ಮಂಡಿಸಿರುವ ಮಸೂದೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಪೋ, ಪಾಕಿಸ್ತಾನ ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಹಕ್ಕಾನಿಯೊಂದಿಗೆ ಕೈಜೋಡಿಸಿ ಅಮೆರಿಕದಲ್ಲಿ ಭಯೋತ್ಪಾದನೆ ಮೂಲಕ ಭೀತಿ ಹುಟ್ಟಿಸಲು ಒಸಾಮಾ ಬಿನ್ ಲಾಡೆನ್ ಮುಂದಾಗಿದ್ದನ್ನು ಕಂಡಿದ್ದೇವೆ. ಉಗ್ರವಾದವನ್ನು ಮುಂದಿಟ್ಟು ಕೊಂಡು ಪಾಕಿಸ್ತಾನ ಯುದ್ಧಕ್ಕೆ ಮುಂದಾಗಿದೆ. ಇದು ಕೇವಲ ಅಮೆರಿಕದ ಮೇಲಷ್ಟೆ ಅಲ್ಲ. ಹಾಗಾಗಿ ಪಾಕ್ ನಂಬಿಕೆದ್ರೋಹಿ ದೇಶ ಎಂದು ಘೋಷಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಂಡಿಸಿದ ಖಾಸಗಿ ಮಸೂದೆ ಪರವಾಗಿ ಮಾತನಾಡಿದ ಬಿಜೆಪಿ ನಾಯಕ ಡಾ.ಸುಬ್ರಮಣಿಯನ್ ಸ್ವಾಮಿ, ಪಾಕಿಸ್ತಾನ ಗಡಿಯಾಚೆಯಿಂದ ನಡೆಸುತ್ತಿರುವ ಉಗ್ರ ಕೃತ್ಯಗಳಿಗೆ ನಿಯಂತ್ರಣ ಹೇರಲು ಈ ಕ್ರಮ ಅನಿವಾರ್ಯ ಎಂದು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿನ ಇಬ್ಬರು ಸಂಸದರು ಡಾ.ಸ್ವಾಮಿ ಮಾತುಗಳಿಗೆ ಸಮ್ಮತಿ ಸೂಚಿಸಿದರು. ಸಂಸದ ರಾಜೀವ್ ಚಂದ್ರಶೇಖರ್ ಮಾತನಾಡಿ ಪಾಕ್ ನಡೆಸುತ್ತಿರುವ ಉಗ್ರ ಕೃತ್ಯಗಳನ್ನು ಸಂಸತ್ ಹಲವು ಬಾರಿ ಚರ್ಚಿಸಿದೆ. ನೆರೆಯ ರಾಷ್ಟ್ರದ ಪ್ರೇರಿತ ಕೃತ್ಯಗಳಿಂದಾಗಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದರು. ಅಂತಿಮವಾಗಿ ಅದಕ್ಕೆ ಬೆಂಬಲ ವ್ಯಕ್ತವಾಗದ್ದರಿಂದ ಮಸೂದೆಯನ್ನು ಹಿಂಪಡೆಯುವ ಘೋಷಣೆ ಮಾಡಿದರು.
ಈ ನಡುವೆ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಸಚಿವ ರಾಜನಾಥ್, ಪಾಕಿಸ್ತಾನ ವಿರುದ್ಧ ಮಂಡಿಸಲಾಗಿರುವ ಮಸೂದೆಯನ್ನು ಒಪ್ಪಲಾಗದು. ಏಕೆಂದರೆ ಅದರಿಂದಾಗಿ ಅಂತಾ ರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.
ಮಸೂದೆ ವಾಪಸ್ ಆಗಿರುವುದರಿಂದ ಯಾವುದೇ ಹಿಂಜರಿಕೆ ಬೇಡ. ಕೇಂದ್ರಕ್ಕೆ ಸಂಸತ್‌ನ ಹೊರಗೆ, ಒಳಗಿನ ವಿಚಾರಗಳ ಬಗ್ಗೆ ಅರಿವು ಇದೆ. ಈ ಬಗ್ಗೆ ಚರ್ಚೆ ಈಗಷ್ಟೇ ಆರಂಭವಾಗಿದೆ.
– ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ