ವಾಷಿಂಗ್ಟನ್: ಕುಖ್ಯಾತ ಉಗ್ರ ಸಂಘಟನೆ ಐಸಿಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ವಿಶ್ವದಲ್ಲೇ ಅತಿ ದೊಡ್ಡದಾದ ಸಾಂಪ್ರದಾಯಿಕ ಬಾಂಬ್ (ಮದರ್ ಆಫ್ ಆಲ್ ಬಾಂಬ್) ಒಂದನ್ನು ಪ್ರಯೋಗಿಸಿದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಬಾಂಬ್ ಪ್ರಯೋಗದ ನಿರ್ಧಾರ ಕೈಗೊಳ್ಳಲಾಗಿದೆ.
36 ಮಂದಿ ಉಗ್ರರು ಹತ್ಯೆಗೀಡಾಗಿರುವ ಬಗ್ಗೆ ಶುಕ್ರವಾರ ಆಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ. ಸಚಿವಾಲಯದ ವಕ್ತಾರ ಮಹಮದ್ ರದ್‌ಮಿಶ್ ಸುದ್ದಿಗಾರರೊಂದಿಗೆ ಮಾತನಾಡಿ ದಾಳಿಯಲ್ಲಿ ದೊಡ್ಡ ಪ್ರಮಾಣದ ಲ್ಲಿ ಉಗ್ರರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ನಾಶಗೊಂಡಿರುವುದಾಗಿ ತಿಳಿಸಿದ್ದಾರೆ.
ಅಮೆರಿಕ ಪ್ರಯೋಗಿಸಿದ ಬಾಂಬ್ ಪರಮಾಣು ಬಾಂಬ್‌ಗಳ ಹೊರತಾದ ಅತಿ ಸಾಮರ್ಥ್ಯದ ಬಾಂಬ್ ಇದಾಗಿದ್ದು, ಆಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದ ಅಚಿನ್ ಜಿಲ್ಲೆಯಲ್ಲಿರುವ ಐಸಿಸ್‌ನ ಅಡಗುದಾಣದ ಮೇಲೆ ಈ ಬಾಂಬ್ ಹಾಕಲಾಗಿದೆ. ಇಲ್ಲಿ ಐಸಿಸ್ ಉಗ್ರರು ಗುಹೆಯಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗಿದೆ.
ಜಿಬಿಯು-43/ಬಿ (ಮಾಬ್) ಹೆಸರಿನ, ಬರೋಬ್ಬರಿ 9787 ಕೇಜಿ ತೂಕದ ಭಾರೀ ದೊಡ್ಡ ಬಾಂಬ್ ಇದಾಗಿದ್ದು, ಸ್ಥಳೀಯ ಕಾಲಮಾನ 7 ಗಂಟೆಗೆ ಅದನ್ನು ಪ್ರಯೋಗಿಸಲಾಗಿದೆ. ಎಮ್ ಸಿ-130 ಸರಕು ಸಾಗಣೆ ವಿಮಾನದಿಂದ ಇದನ್ನು ಪ್ರಯೋಗಿಸಲಾಗಿದೆ ಎಂದು ಅಮೆರಿಕ ಮಿಲಿಟರಿ ಹೇಳಿಕೊಂಡಿದೆ. ಬಾಂಬ್ ಸುರಿದ ಜಾಗದಲ್ಲಿ ಆದ ಹಾನಿ ಎಷ್ಟು? ಅಲ್ಲಿದ್ದ ಉಗ್ರರ ಸರ್ವನಾಶವಾಗಿದೆಯೇ? ಎಂಬ ವಿಚಾರಗಳ ಬಗ್ಗೆ ಇನ್ನಷ್ಟೇ ಪರಿಶೀಲನೆ ನಡೆಸಬೇಕಿದೆ. ಆಫ್ಘಾನಿಸ್ತಾನದಲ್ಲಿನ ಅಮೆರಿಕ ಮಿಲಿಟರಿ ಮುಖ್ಯಸ್ಥ ಜ.ಜಾನ್ ನಿಕೊಲ್ಸನ್ ಈ ಬಾಂಬ್ ಪ್ರಯೋಗಿಸುವ ನಿರ್ಣಯಕ್ಕೆ ಸಹಿ ಹಾಕಿದ್ದಾರೆ ಎಂದು ಪೆಂಟಗಾನ್ ಮೂಲಗಳು ಹೇಳಿವೆ.
Related Articles
ಏನಿದು ಮಾಬ್ ಬಾಂಬ್?
ಸದ್ಯ ವಿಶ್ವದಲ್ಲೇ ಅತಿ ದೊಡ್ಡದಾದ ಸಾಂಪ್ರದಾಯಿಕ ಬಾಂಬ್. ಬಾಂಬ್‌ಗಳ ತಾಯಿ ಬಾಂಬ್ (ಮದರ್ ಆಫ್ ಆಲ್ ಬಾಂಬ್) ಎಂದೇ ಇದಕ್ಕೆ ಹೆಸರು. ಅಮೆರಿಕದ ಏರ್‌ಫೋರ್ಸ್ ಸಂಶೋಧನಾ ಕೇಂದ್ರ 2003ರಲ್ಲಿ ಇರಾಕ್ ಯುದ್ಧ ಸಂದರ್ಭ ಇದನ್ನು ತಯಾರಿಸಿದೆ.ಯುದ್ಧ ಪ್ರದೇಶದಲ್ಲಿ ಪ್ರಯೋಗವಾಗುತ್ತಿರುವುದು ಈ ಬಾಂಬ್ ಇದೇ ಮೊದಲು.
ಜಿಪಿಎಸ್ ನಿರ್ದೇಶನ ವ್ಯವಸ್ಥೆ ಇದರಲ್ಲಿದೆ. ದೊಡ್ಡ ಬಾಂಬರ್ ವಿಮಾನಗಳಲ್ಲಿ ಸರಕು ಸಾಗಣೆ ವಿಮಾನಗಳಲ್ಲಿ ಇದನ್ನು ಪ್ರಯೋಗಿಸಬಹುದು. 30 ಅಡಿ ಉದ್ದವಿರುವ ಈ ಬಾಂಬ್, 8164 ಕೇಜಿ ಸ್ಫೋಟಕವನ್ನು ಹೊಂದಿರುತ್ತದೆ. ಸ್ಫೋಟವಾದ ಸುಮಾರು 32 ಕಿ.ಮೀ.ಗಳಷ್ಟು ವ್ಯಾಪ್ತಿಯಲ್ಲಿ ಪರಿಣಾಮ ಬೀರುತ್ತದೆ. ಜೊತೆಗೆ 300 ಮೀ. ವಿಸ್ತಾರಕ್ಕೆ ದೊಡ್ಡ ಕುಳಿ ಉಂಟುಮಾಡಬಲ್ಲದು.
ಅಮೆರಿಕದ ಫ್ಲೋರಿಡಾದ ಎಲ್‌ಗಿನ್ ವಾಯುನೆಲೆಯಲ್ಲಿ 2003ರಲ್ಲಿ ಇದರ ಪರೀಕ್ಷೆ ಮೊದಲ ಬಾರಿಗೆ ನಡೆಸಲಾಗಿತ್ತು. ಬಳಿಕ ಇರಾಕ್ ಯುದ್ಧ ವೇಳೆ ಬಾಂಬ್ ಸಾಗಿಸಲಾಗಿದ್ದರೂ ಪ್ರಯೋಗಿಸಿರಲಿಲ್ಲ. ಅಮೆರಿಕದ ವಾಯುಪಡೆ, ಬ್ರಿಟನ್ ವಾಯುಪಡೆಗಳ ಬತ್ತಳಿಕೆಯಲ್ಲಿ ಈ ಬಾಂಬ್ ಇದೆ.
ನಂಗರ್‌ಹಾರ್ ಪ್ರಾಂತ್ಯ ಎಲ್ಲಿದೆ?
ಆಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಇದೂ ಒಂದು. ಪೂರ್ವ ದಿಕ್ಕಿನಲ್ಲಿ ಪಾಕಿಸ್ತಾನದ ಗಡಿಗೆ ತಾಗಿಕೊಂಡಂತೆ ಈ ಪ್ರಾಂತ್ಯವಿದೆ. ಜಲಲಾಬಾದ್ ಇದರ ರಾಜಧಾನಿ. 7727 ಕಿ.ಮೀ. ವಿಸ್ತಾರದಲ್ಲಿ ಈ ಪ್ರಾಂತ್ಯವಿದೆ.
ಬಾಂಬ್ ಹೇಗಿದೆ?
9,797ಕೆಜಿ ತೂಕ
30ಅಡಿ ಉದ್ದ
8,164ಕೆಜಿ ಸ್ಫೋಟಕ
2003ರಲ್ಲಿ ಮೊದಲ ಪರೀಕ್ಷೆ
32 ಕಿ.ಮೀ. ದೂರಕ್ಕೆ ಪರಿಣಾಮ
300 ಮೀ. ವ್ಯಾಪ್ತಿಯ ಕುಳಿ
ಜಿಪಿಎಸ್ ನಿರ್ದೇಶನ ವ್ಯವಸ್ಥೆ