ಕಾಬೂಲ್/ ವಾಷಿಂಗ್ಟನ್: ಅಮೆರಿಕ ಯೋಧರು ಸೇರಿದಂತೆ ನೂರಾರು ಜನರ ಸಾವಿಗೆ ಕಾರಣವಾಗಿದ್ದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿಗೆ ಅಮೆರಿಕ ಪ್ರತಿಕಾರ ತೀರಿಸಿಕೊಂಡಿದೆ.
ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ವಾಯಸೇನೆಯಿಂದ ಡ್ರೋನ್ ದಾಳಿ ಮಾಡಲಾಗಿದೆ. ಕಾಬೂಲ್ ವಿಮಾನ ನಿಲ್ದಾಣದ ಬಾಂಬ್ ದಾಳಿ ನಡೆದು 36 ಗಂಟೆಯೊಳಗೆ ಸೇಡು ತೀರಿಸಿಕೊಳ್ಳಲಾಗಿದೆ.
ಅಮೆರಿಕ ಪ್ರತೀಕಾರ ತೀರಿಸಿಕೊಳ್ಳಲು ನಂಗರ್ ಹಾರ್ ನಲ್ಲಿ ಐಸಿಸ್ -ಖೊರಸಾನ್ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ನಿಂದ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:ಭಾರತಕ್ಕೆ ಐಸಿಸ್ ಕೇಡು : ಐಸಿಸ್-ಕೆ ದಾಳಿಕೋರ ಉಗ್ರರ ಮುಂದಿನ ಗುರಿ ಭಾರತ ?
ಆತ್ಮಹುತಿ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಉಗ್ರ ಸಂಘಟನೆಗೆ ಖಡಕ್ ಎಚ್ಚರಿಕೆ ನೀಡಿದ್ದರು. ಅಮೆರಿಕ ವಿರುದ್ಧ ದಾಳಿ ಮಾಡಿದವರು ಎಚ್ಚರಿಕೆಯಿಂದ ಇರಿ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ. ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ ಎಂದು ಎಚ್ಚರಿಸಿದ್ದರು.
ಕಾಬೂಲ್ ಏರ್ಪೋರ್ಟ್ ಬಳಿ ಬಿಗಿಭದ್ರತೆ ವಹಿಸಲಾಗಿದೆ. ಏರ್ಪೋರ್ಟ್ ಗೇಟ್ ಬಳಿ ಹೋಗದಂತೆ ಆಮೆರಿಕಾದ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.