ವಾಷಿಂಗ್ಟನ್: ಕೋವಿಡ್-19 ವೈರಸ್ ಗೆ ತತ್ತರಿಸಿ ಹೋಗಿರುವ ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ಬೆಚ್ಚಿಬೀಳಿಸುವ ರೀತಿಯಲ್ಲಿ 47,000 ಜನರಿಗೆ ಸೋಂಕು ತಗುಲಿದೆ. ವೈರಾಣು ಕಾಣಿಸಿಕೊಂಡಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹೊಸ ಪ್ರಕರಣಗಳು ವರದಿಯಾಗಿದೆ ಎಂದು ರಾಯಿಟರ್ಸ್ ತಿಳಿಸಿದೆ.
ವಿಪರ್ಯಾಸವೆಂದರೇ ಈಗಿರುವ ಪ್ರಮಾಣಕ್ಕಿಂತಲೂ ಎರಡು ಪಟ್ಟು ಅಧಿಕ ಮಂದಿ ಸೊಂಕಿಗೆ ತುತ್ತಾಗುವ ಕಾಲ ದೂರವಿಲ್ಲ ಎಂದು ಸರ್ಕಾರದ ಉನ್ನತ ಮಟ್ಟದ ಸಾಂಕ್ರಾಮಿಕ ರೋಗ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟು ದಿನ ನ್ಯೂಯಾರ್ಕ್ ಕೋವಿಡ್ 19 ಕೇಂದ್ರಬಿಂದುವಾಗಿತ್ತು. ಇದೀಗ ಕ್ಯಾಲಿಫೋರ್ನಿಯಾ, ಟೆಕ್ಷಾಸ್, ಆರಿಜೋನಾ ಗಳಲ್ಲೂ ಕೋವಿಡ್ ಅಟ್ಟಹಾಸ ಬೀರಲಾರಂಬಿಸಿವೆ.
ಪರಿಸ್ಥಿತಿ ಕೈ ಮೀರಿದ್ದು ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದೇ ರೀತಿ ಮುಂದುವರೆದರೇ ಪ್ರತಿನಿತ್ಯ 1 ಲಕ್ಷ ಮಂದಿ ಸೋಂಕಿಗೆ ಭಾಧಿತರಾಗುತ್ತಾರೆ. ಇದರಿಂದ ಇಡೀ ದೇಶ ಅಪಾಯಕ್ಕೆ ತುತ್ತಾಗುತ್ತದೆ ಎಂದು ಸಾಂಕ್ರಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಸೆನೆಟ್ ಗೆ ಮಾಹಿತಿ ನೀಡಿದ್ದಾರೆ.
ಟೆಕ್ಸಾಸ್ ಮತ್ತು ಫ್ಲೋರಿಡಾ ಸೇರಿದಂತೆ ಕನಿಷ್ಠ 10 ರಾಜ್ಯಗಳಲ್ಲಿ ಜೂನ್ ತಿಂಗಳೊಂದರಲ್ಲೇ ಕೋವಿಡ್ ಪ್ರಕರಣಗಳು ದ್ವಿಗುಣಗೊಂಡಿವೆ. ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಮರ್ಪಕ ವೈದ್ಯಕೀಯ ಸೌಲಭ್ಯ ಮತ್ತು ಹಾಸಿಗೆಗಳ ಕೊರತೆ ಕೂಡ ಕಂಡುಬರುತ್ತಿದೆ ಎಂದು ರಾಯಿಟರ್ಸ್ ಹೇಳಿದೆ.
ಈ ಮಾರಾಣಾಂತಿಕ ವೈರಸ್ ಗೆ 1.30ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಸಾವನ್ನಪ್ಪಿದ್ದಾರೆ. 27 ಲಕ್ಷಕ್ಕಿಂತ ಹೆಚ್ಚು ಜನರು ವೈರಾಣುವಿಗೆ ತುತ್ತಾಗಿದ್ದಾರೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕತೆಯು ತೀವ್ರವಾಗಿ ಕುಗ್ಗಿದೆ ಎಂದು ವರದಿ ತಿಳಿಸಿದೆ.