ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವಿನ ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಇನ್ನಷ್ಟು ಆಳಕ್ಕೆ ಒಯ್ಯುವ ಪಣ ತೊಟ್ಟಿರುವಂತೆಯೇ
ಅಮೆರಿಕ ಭಾರತಕ್ಕೆ ಪ್ರಿಡೇಟರ್ ಗಾರ್ಡಿಯನ್ ಡ್ರೋನ್‌ಗಳ ಮಾರಾಟಕ್ಕೆ ಅನುಮೋದನೆ ನೀಡಿದೆ.
ಅಮೆರಿಕದ ಅತ್ಯಂತ ನಿಕಟ ಮಿತ್ರ ದೇಶಗಳು ಹಾಗೂ ಪಾಲುದಾರರಿಗೆ ಸರಿಸಮನಾದ ಮಟ್ಟದಲ್ಲಿ ಅತ್ಯಾಧುನಿಕ ರಕ್ಷಣಾ ಪರಿಕರ ಮತ್ತು ತಂತ್ರಜ್ಞಾನವನ್ನು ವಿನಿಮಯಿಸಿಕೊಳ್ಳುವ ದಿಶೆಯಲ್ಲಿ ಕೆಲಸ ಮಾಡುವುದನ್ನು ಭಾರತ ಮತ್ತು ಅಮೆರಿಕ ಎದುರು ನೋಡುತ್ತಿವೆ ಎಂದು ಶ್ವೇತ ಭವನದಲ್ಲಿ ಭಾರತ – ಅಮೆರಿಕ ಶೃಂಗ ನಡೆದ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ಘೋಷಿಸಲಾಗಿದೆ.
ಭಾರತವನ್ನು ಅಮೆರಿಕವು ತನ್ನ ಪ್ರಮುಖ ರಕ್ಷಣಾ ಪಾಲುದಾರ ದೇಶವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು ಉಭಯ ದೇಶಗಳ ನಡುವಿನ ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಇನ್ನಷ್ಟು ಆಳಕ್ಕೆ ಒಯ್ಯುವ ಪಣ ತೊಟ್ಟಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಹಿಂದೂ ಮಹಾಸಾಗರ ನೌಕಾ ವಿಚಾರ ಸಂಕಿರಣದಲ್ಲಿ ವೀಕ್ಷಕನಾಗುವಂತೆ ಕೋರುವ ಮೂಲಕ ಭಾರತ ಅಮೆರಿಕವನ್ನು ಬೆಂಬಲಿಸಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ, ಜಪಾನ್ ಮತ್ತು ಭಾರತವನ್ನು ಒಳಗೊಂಡ ಮಲಬಾರ್ ನೌಕಾ ಕವಾಯತು ನಡೆಸಲಾಗುವುದರ ಮಹತ್ವವನ್ನು ಪರಿಗಣಿಸಿರುವ ಉಭಯ ನಾಯಕರು ಈ ಬಗೆಯ ಹೊಸ ಕವಾಯತುಗಳನ್ನು ನಡೆಸುವ ಹಾಗೂ ಸಾಗರಿಕರ ಧ್ಯೇಯೋದ್ದೇಶಗಳನ್ನು ಹಂಚಿಕೊಳ್ಳುವ ಪ್ರಯತ್ನಗಳನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.