ವಾಷಿಂಗ್ಟನ್/ಬೀಜಿಂಗ್: ಕೋವಿಡ್ ಪ್ರಾರಂಭವಾದಗಿನಿಂದ ಹಾವು ಮುಂಗುಸಿಯಂತೆ ಆಡುತ್ತಿರುವ ಚೀನ ಮತ್ತು ಅಮೆರಿಕ ಒಳಗೊಳಗೆ ಶೀತಲ ಸಮರ ನಡೆಸುತ್ತಿದ್ದು, ವಿಶ್ವದ ದೊಡ್ಡಣ್ಣ ಚೀನಕ್ಕೆ ಮೇಲಿಂದ ಮೇಲೆ ಪೆಟ್ಟು ನೀಡುತ್ತಲ್ಲೇ ಇದೆ.
ಇದೀಗ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚೀನಿ ರಾಷ್ಟ್ರೀಯರ ವೀಸಾಗಳನ್ನು ರದ್ದು ಪಡ್ಡಿಸುವ ಮೂಲಕ ಡ್ರ್ಯಾಗನ್ ವಿರುದ್ಧ ಮತ್ತೂಮ್ಮೆ ಚಾಟಿ ಬೀಸಿದ್ದು, ಭದ್ರತಾ ಕಾರಣಗಳನ್ನು ನೀಡಿ ಈ ಕ್ರಮವನ್ನು ಜಾರಿ ಮಾಡಿದೆ.
ದೇಶದ ಭದ್ರತೆಗೆ ಧಕ್ಕೆ ತರುವಂತಹ ಶಂಕೆಯಿರುವ ಚೀನಿ ವಿದ್ಯಾರ್ಥಿಗಳು ಮತ್ತು ಸಂಶೋಧಕರ ಪ್ರವೇಶಾತಿಯ ಮೇಲೆ ನಿರ್ಬಂಧ ಹೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ 29ರಂದು ಆದೇಶ ಹೊರಡಿಸಿದ್ದರು. ಈಗ ಅದರ ಮುಂದುವರೆದ ಭಾಗವಾಗಿ ಮತ್ತೂಮ್ಮೆ ವೀಸಾ ರದ್ದು ಪಡಿಸಲಾಗಿದೆ ಎಂದು ಗೃಹ ಇಲಾಖೆಯ ವಕ್ತಾರ ಬುಧವಾರ ತಿಳಿಸಿದ್ದಾರೆ.
ಚೀನದ ಮಿಲಿಟರಿಯೊಂದಿಗೆ ಸಂಬಂಧವಿರುವ ಚೀನಿ ಪದವಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ವೀಸಾಗಳನ್ನು ತಡೆ ಹಿಡಿಯುವುದಾಗಿ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ಪ್ರಭಾರ ಮುಖ್ಯಸ್ಥ ಚಾಡ್ ವೂ ಇದಕ್ಕೂ ಮುನ್ನ ಹೇಳಿದ್ದರು. ಸೂಕ್ಷ್ಮ ಸಂಶೋಧನಾ ವಿಚಾರಗಳನ್ನುಕದ್ದು ದುರುಪಯೋಗ ಮಾಡುವುದನ್ನು ತಡೆಯಲು ಈ ಕ್ರಮ ಜಾರಿ ಮಾಡಿದ್ದೇವೆ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ ವೈರಸ್ ಸಂಶೋಧನೆ ಸಹಿತ ಚೀನ ಹಲವು ಕಾನೂನು ಬಾಹಿರ ವ್ಯಾವಹಾರಿಕ ಚಟುವಟಿಕೆ ನಡೆಸುತ್ತಿದೆ ಹಾಗೂ ಕೈಗಾರಿಕಾ ಅಂಶಗಳ ಬಗ್ಗೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಅಮೆರಿಕದ ಆರೋಪವನ್ನು ಚಾಡ್ ವೂ ಪುನರುಚ್ಚರಿಸಿದ್ದಾರೆ. ಅಮೆರಿಕದ ಶೈಕ್ಷಣಿಕ ವಿಚಾರಗಳನ್ನು ದೋಚಲು ವಿದ್ಯಾರ್ಥಿ ವೀಸಾಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದಿದ್ದಾರೆ.