ವಾಷಿಂಗ್ಟನ್: 12ವರ್ಷ ಮೇಲ್ಪಟ್ಟವರಿಗೂ ಫೈಜರ್ ಬಯೋ ಎನ್ ಟೆಕ್ ಕೋವಿಡ್ 19 ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸೋಮವಾರ(ಮೇ 10) ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:18 ವರ್ಷದೊಳಗಿನ ಮಕ್ಕಳ ಚಿಕಿತ್ಸೆಗೆ ವರ್ಲಿಯಲ್ಲಿ 500 ಹಾಸಿಗೆಗಳ ಸಿದ್ಧತೆ: ಬಿಎಂಸಿ
ಇದಕ್ಕೂ ಮುನ್ನ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ 16 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಫೈಜರ್ ಲಸಿಕೆ ತುರ್ತು ಬಳಕೆ ಮಾಡಲು ಅನುಮತಿ ನೀಡಿತ್ತು. ಇದೀಗ 12ರಿಂದ 15 ವರ್ಷದವರೆಗಿನ ಮಕ್ಕಳಿಗೆ ಫೈಜರ್ ಲಸಿಕೆ ನೀಡುವ ಬೆಳವಣಿಗೆ ಮೂಲಕ ವೈರಸ್ ವಿರುದ್ಧ ಹೋರಾಡಲು ಇನ್ನಷ್ಟು ಬಲಬಂದಂತಾಗಿದೆ ಎಂದು ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
12-15 ವರ್ಷ ವಯಸ್ಸಿನವರಿಗೂ ಲಸಿಕೆ ನೀಡಲು ಅನುಮತಿ ಕೋರಿ ಯುರೋಪ್ ಒಕ್ಕೂಟದ ಔಷಧ ನಿಯಂತ್ರಕರಿಗೂ ಕಂಪನಿ ಮನವಿ ಮಾಡಿಕೊಂಡಿತ್ತು ಎಂದು ವರದಿ ತಿಳಿಸಿದೆ.
ಕೋವಿಡ್ 19 ಸೋಂಕು ಈಗಲೂ ಹಲವಾರು ದೇಶಗಳಲ್ಲಿ ಕ್ಷಿಪ್ರವಾಗಿ ಹರಡುತ್ತಿದೆ. 2019ರಿಂದ ಈವರೆಗೆ ಜಗತ್ತಿನಾದ್ಯಂತ 3.3 ಮಿಲಿಯನ್ ಜನರು ಸಾವಿಗೀಡಾಗಿದ್ದಾರೆ. ಕೋವಿಡ್ ನಿಂದ ಸಹಜ ಜನಜೀವನ ಹಾಗೂ ಆರ್ಥಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿರುವುದಾಗಿ ವರದಿ ವಿವರಿಸಿದೆ.