Advertisement

ಭಾರತೀಯ ನೌಕಪಡೆಗೆ ಸದ್ಯದಲ್ಲೇ ಬಲತುಂಬಲಿದೆ ‘ರೋಮಿಯೋ’!

09:02 AM Apr 04, 2019 | Hari Prasad |

ವಾಷಿಂಗ್ಟನ್‌: ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಸಬ್‌ ಮೆರೀನ್‌ ನಿರೋಧಕ ಹಾಗೂ ಬಹುವಿಧ ಕಾರ್ಯವೈಖರಿಯ ಎಂ.ಹೆಚ್‌.-60 ರೋಮಿಯೋ ಸೀ ಹಾಕ್‌ ಹೆಲಿಕಾಫ್ಟರ್‌ ಇನ್ನು ಭಾರತೀಯ ನೌಕಾದಳದ ಬತ್ತಳಿಕೆಯನ್ನು ಸೇರಿಕೊಳ್ಳಲಿದೆ. ಇಂತಹ 24 ಹೆಲಿಕಾಫ್ಟರ್‌ ಗಳನ್ನು ಅಂದಾಜು 2.4 ಬಿಲಿಯನ್‌ ಡಾಲರ್‌ ವೆಚ್ಚದಲ್ಲಿ ಭಾರತಕ್ಕೆ ಮಾರಾಟ ಮಾಡಲು ಅಮೆರಿಕಾ ಒಪ್ಪಿಕೊಂಡಿದೆ. ಭಾರತದ ಜಲಪ್ರದೇಶವನ್ನು ಬಲಪಡಿಸಲು ಹಾಗೂ ಇತ್ತೀಚಿನ ದಿನಗಳಲ್ಲಿ ಜಲಮಾರ್ಗಗಳಿಂದಲೂ ದೇಶದ ಸಾರ್ವಭೌಮತೆಗೆ ಅಪಾಯ ಒದಗುವ ಸಾಧ್ಯತೆಗಳಿರುವುದರಿಂದ ನೌಕಾಪಡೆಗೆ ಈ ರಿತಿಯ ಸುಸಜ್ಜಿತ ಹೆಲಿಕಾಫ್ಟರ್‌ ಗಳ ಅಗತ್ಯ ಒದಗಿಬಂದಿತ್ತು.

Advertisement

ಸಾಗರ ತಳದಲ್ಲಿರುವ ಸಬ್‌ ಮೆರೀನ್‌ ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ, ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮರ್ಥ್ಯ ಈ ‘ರೋಮಿಯೋ’ ಹೆಲಿಕಾಫ್ಟರ್‌ ಗಳಿದೆ. ಅಮೆರಿಕಾದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿ ಮತ್ತು ಮಾರಾಟ ಸಂಸ್ಥೆ ಲಾಕ್‌ ಹೀಡ್‌ ಮಾರ್ಟಿನ್‌ ನಿರ್ಮಿತ ಈ ಅತ್ಯಾಧುನಿಕ ಹೆಲಿಕಾಫ್ಟರ್‌ ಗಳು ಮುಂಬರುವ ದಿನಗಳಲ್ಲಿ, ಸದ್ಯ ಭಾರತೀಯ ನೌಕಾಪಡೆಯ ಬಳಿ ಇರುವ ಇಂಗ್ಲೆಡ್‌ ನ ಹಳೆಯ ಮಾದರಿ ಹೆಲಿಕಾಫ್ಟರ್‌ ಗಳಿಗೆ ಬದಲಿಯಾಗಿ ಕಾರ್ಯನಿರ್ವಹಿಸಲಿವೆ.

ಎಲ್ಲಾ ಮಾದರಿಯ ಯುದ್ಧನೌಕೆಗಳಿಂದ ಕಾರ್ಯಾಚರಿಸಬಹುದಾದ ಸಾಮರ್ಥ್ಯವನ್ನು ಹೊಂದಿರುವ ಈ ಹೆಲಿಕಾಫ್ಟರ್‌ ಗಳು ಸದ್ಯ ಲಭ್ಯವಿರುವ ನೌಕಾ ಹೆಲಿಕಾಫ್ಟರ್‌ ಗಳಲ್ಲೇ ಅತ್ಯಂತ ಆಧುನಿಕ ಮಾದರಿಯವುಗಳಾಗಿವೆ ಎಂದು ರಕ್ಷಣಾ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಭವಿಷ್ಯದಲ್ಲಿ ಇವುಗಳ ಸೇರ್ಪತೆಯಿಂದಾಗಿ ಭಾರತೀಯ ನೌಕಾದಳದ ಸಾಮರ್ಥ್ಯ ಇನ್ನೂ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next