Advertisement
ಮೂಲಸೌಕರ್ಯ ಕೊರತೆಯಿಂದ ನಲುಗಿರುವ ಉರ್ವಸ್ಟೋರ್ ಮಾರುಕಟ್ಟೆಯ ಜಾಗದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಸಂಬಂಧ ಮಂಗಳೂರು ಪಾಲಿಕೆಯು ಚಿಂತನೆ ನಡೆಸಿದೆ. ಈ ಸಂಬಂಧ ಮಾರುಕಟ್ಟೆ ಪರಿಧಿಯಲ್ಲಿರುವ ಸ್ಥಳದ ಬಗ್ಗೆ ಹಾಗೂ ಅಭಿವೃದ್ಧಿಗೊಳಿಸುವ ಸಾಧ್ಯತೆಗಳ ಬಗ್ಗೆ ಅವಲೋಕನ ಆರಂಭಿಸಲಾಗಿದೆ.
ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಸಹಿತ ಆಧುನಿಕ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಉರ್ವಸ್ಟೋರ್ ಮಾರುಕಟ್ಟೆಯ ಪೂರ್ವ, ಉತ್ತರ ಹಾಗೂ ದಕ್ಷಿಣ ಭಾಗದಲ್ಲಿರುವ ಸರಕಾರಿ ಜಾಗವನ್ನು ಸೇರಿಸಿಕೊಂಡು ಹೊಸ ಮಾರುಕಟ್ಟೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕಾರ್ಪೋರೆಟರ್ ಶೋಭಾ ರಾಜೇಶ್ ಅವರು ಈ ಬಗ್ಗೆ ಪಾಲಿಕೆಗೆ ಮನವಿ ಸಲ್ಲಿಸಿದ್ದು, ಪರಿಷತ್‌ನಲ್ಲಿ ಕಾರ್ಯಸೂಚಿ ಮಂಡಿಸಲು ಕೋರಿದ್ದಾರೆ.
Related Articles
Advertisement
ಜಮೀನಿಗೆ ಎದುರಾಗಿದೆ ತಾಂತ್ರಿಕ ತಾಪತ್ರಯ!
ಉರ್ವಸ್ಟೋರ್ ಮಾರುಕಟ್ಟೆ ವ್ಯಾಪ್ತಿಯಲ್ಲಿ 1.77 ಎಕ್ರೆ ಸರಕಾರಿ, ಪಾಲಿಕೆಯ ಜಮೀನು ಇರುವ ಬಗ್ಗೆ ಮೋಜಣಿದಾರರ ನಕ್ಷೆಯಲ್ಲಿ ಉಲ್ಲೇಖೀಸಲಾಗಿದೆ. ಆದರೆ ಈ ಜಮೀನಿನಲ್ಲಿ 88 ಸೆಂಟ್ಸ್ ಜಮೀನನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಅಭಿವೃದ್ಧಿಪಡಿಸಲು ಈ ಹಿಂದೆಯೇ ಲೀಸ್‌ಗೆ ನೀಡಲಾಗಿತ್ತು. ಉರ್ವಸ್ಟೋರ್ ಮಾರುಕಟ್ಟೆ ಅಭಿವೃದ್ಧಿ ಕಾರಣದಿಂದ ಇದನ್ನು ರದ್ದುಪಡಿಸುವಂತೆ ಪಾಲಿಕೆಯು 2019ರಲ್ಲಿ ಪ್ರಸ್ತಾವ ಮಾಡಿತ್ತು. ಆದರೆ ಇದು ಇನ್ನಷ್ಟೇ ಇತ್ಯರ್ಥವಾಗಬೇಕಿದೆ. ಇದರ ಜತೆಗೆ ಐ ಜಮೀನಿನ ಪೈಕಿ ಭ್ರಷ್ಟಾಚಾರ ನಿಗ್ರಹದಳ ಇಲಾಖೆಯವರು 15 ಸೆಂಟ್ಸ್ ಸರಕಾರಿ ಜಮೀನಿಗೆ ನಿರಾಪೇಕ್ಷಣಾ ಪತ್ರ ನೀಡುವಂತೆ ಪಾಲಿಕೆಯನ್ನು ಕೋರಿದ್ದಾರೆ. ಹೀಗಾಗಿ ಈ ಎರಡು ಸಂಗತಿಗಳನ್ನು ಮೊದಲು ಇತ್ಯರ್ಥ ಮಾಡಿದ ಬಳಿಕವಷ್ಟೇ ಮಾರುಕಟ್ಟೆ ಅಭಿವೃದ್ಧಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. ಹೊಸ ಮಾರುಕಟ್ಟೆಗೆ ಆದ್ಯತೆ
ಉರ್ವಸ್ಟೋರ್ ಮಾರುಕಟ್ಟೆ ಅಭಿವೃದ್ಧಿಪಡಿಸುವ ಬಗ್ಗೆ ಬಹು ಬೇಡಿಕೆಯಿದೆ. ಇಲ್ಲಿ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಚಿಂತನೆ ನಡೆಸಲಾಗಿದೆ. ಮಾರುಕಟ್ಟೆ ವ್ಯಾಪ್ತಿಯ ಜಮೀನಿಗೆ ಸಂಬಂಧಿಸಿ ಮುಡಾ ಹಾಗೂ ಭ್ರಷ್ಟಾಚಾರ ನಿಗ್ರಹದಳ ಇಲಾಖೆಯ ಕೋರಿಕೆ ವಿಚಾರವೂ ಪರಿಶೀಲನಾ ಹಂತದಲ್ಲಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಪ್ರೇಮಾನಂದ ಶೆಟ್ಟಿ,
ಮೇಯರ್, ಮಂಗಳೂರು ಪಾಲಿಕೆ -ದಿನೇಶ್ ಇರಾ