ಒಬ್ಬಳೇ ಮಗಳನ್ನು ಬಹಳ ಮುದ್ದಾಗಿ ಪ್ರೀತಿಯಿಂದ ಬೆಳೆಸಿದ್ದರು ಶ್ರೀಪತಿ ದಂಪತಿಗಳು. ಮಗಳು ಊರ್ವಶಿ, ಹೆಸರಿಗೆ ತಕ್ಕಂತೆ ಅತಿಲೋಕಸುಂದರಿ. ಮನೆಯಲ್ಲಿ ಆಸ್ತಿಗೇನೂ ಕಮ್ಮಿಯಿರಲಿಲ್ಲ. ಶ್ರೀಪತಿ ದಂಪತಿಗಳು ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದರು. ಊರಿನಲ್ಲಿ ಅವರ ಕುಟುಂಬಕ್ಕೆ ವಿಶೇಷ ಗೌರವವಿತ್ತು. ಅವರಿಗಿದ್ದ ಒಂದೇ ಸಮಸ್ಯೆಯೆಂದರೆ ಮಗಳ ಮದುವೆ. ಯಾವುದೇ ಹುಡುಗ ಬಂದರೂ ಅವನ ಜಾತಕ ಸರಿ ಹೊಂದುತ್ತಲೇ ಇರಲಿಲ್ಲ. ಇದರಿಂದ ಶ್ರೀಪತಿ ಚಿಂತೆಗೀಡಾಗಿದ್ದರು. ಊರ್ವಶಿಯೂ ಹತಾಶಳಾಗಿದ್ದಳು.
ಈ ನಡುವೆ ದೂರದೂರಿನಿಂದ ಜೋಯಿಸರು ವರನ ಕುಟುಂಬವೊಂದನ್ನು ಕರೆತಂದರು. ಶ್ರೀಪತಿಗಳಿಗಂತೂ ಅವರು ತುಂಬಾ ಹಿಡಿಸಿಬಿಟ್ಟರು. ಎಲ್ಲಕ್ಕಿಂತ ಹೆಚ್ಚಾಗಿ ಊರ್ವಶಿಗೆ ಆ ಹುಡುಗ ತುಂಬಾ ಒಪ್ಪಿಗೆಯಾಗಿದ್ದ. ಶ್ರೀಪತಿಯವರು ಈ ಸಂಬಂಧ ಒಲಿದುಬರುವಂತೆ ಮನಸ್ಸಿನಲ್ಲೇ ದೇವರಿಗೆ ಹರಕೆಯನ್ನೂ ಹೊತ್ತರು. ಆದರೆ ಅಂತಿಮವಾಗಿ ಜಾತಕ ತಾಳೆ ಹಾಕಿ ನೋಡಿದಾಗ ನಿರಾಶೆ ಕಾದಿತ್ತು. ಮತ್ತೆ ಜಾತಕ ಕೂಡಿ ಬರಲಿಲ್ಲ. ಬೇಸರಗೊಂಡ ಊರ್ವಶಿ ಒಂದು ನಿರ್ಧಾರಕ್ಕೆ ಬಂದಳು. “ನಾಳೆ ಬೆಳಗ್ಗೆ ಮೊದಲು ಯಾವ ಪುರುಷ ನನ್ನ ಕಣ್ಣಿಗೆ ಬೀಳುವನೋ ಅವನನ್ನೇ ಮದುವೆಯಾಗುತ್ತೇನೆ’ ಎಂದು ಘೋಷಿಸಿಬಿಟ್ಟಳು. ಜೋಯಿಸರು ಮತ್ತು ಶ್ರೀಪತಿ ದಂಪತಿಗಳಿಗೆ ಆಘಾತವಾಯಿತು. ಮುಂದೇನು ಅಪಚಾರ ಕಾದಿದೆಯೋ ಎಂದು ಅವರೆಲ್ಲರೂ ಚಿಂತೆಗೀಡಾದರು.
ಮಾರನೇ ದಿನ ಬೆಳಗ್ಗೆ ಊರ್ವಶಿ ಸೂರ್ಯ ಮೂಡುವ ಮೊದಲೆ ಎದ್ದಳು. ಎದ್ದು ಮನೆಯಿಂದ ಹೊರಟಳು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಒಬ್ಬ ಕಾವಲುಗಾರ ಕಣ್ಣಿಗೆ ಬಿದ್ದ. ಅವನೇ ತನ್ನ ಪತಿಯೆಂದು ಮನೆಗೆ ಕರೆತಂದಳು. ಶ್ರೀಪತಿಯವರಿಗೆ ಕಾವಲುಗಾರ ತನ್ನ ಅಳಿಯನೇ ಎಂದು ಒಂದು ಕ್ಷಣ ದಿಗಿಲಾಯಿತು. ಆದರೇನು ಮಾಡುವುದು ಮಗಳು ಇಷ್ಟಪಟ್ಟಿದ್ದಾಳಲ್ಲ ಎಂದು ಮದುವೆಗೆ ಅಸ್ತು ಎಂದರು. ಮದುವೆ ದಿನ ಅರಮನೆಗಳಿಂದ ಸ್ವತಃ ಮಹಾರಾಜರೇ ಬಂದರು. ಎಲ್ಲರಿಗೂ ಆಶ್ಚರ್ಯ ಸೇವಕನಿಗೋಸ್ಕರ ಮಹಾರಾಜರು ಬಂದರಲ್ಲ ಎಂದು. ಶ್ರೀಪತಿ “ಮಹಾರಾಜರೇ ನಮ್ಮಿಂದ ಏನಾದರೂ ತಪ್ಪಾಯಿತೇ. ನೀವು ಇಲ್ಲಿಯ ತನಕ ಬರಲು ಕಾರಣವೇನು?’ ಎಂದು ಕೇಳಿದರು. ಮಹಾರಾಜ “ನಮ್ಮ ಮಗನ ಮದುವೆಗೆ ನಾವು ಬಂದರೆ ತಪ್ಪೇ’ ಎಂದಾಗ ಎಲ್ಲರಿಗೂ ಆಶ್ಚರ್ಯ.
ಆ ಕಾವಲುಗಾರ ರಾಜಕುಮಾರನಾಗಿದ್ದ. ಆ ದಿನ ಬೆಳಿಗ್ಗೆ ಮಾರುವೇಷದಲ್ಲಿ ಸಂಚಾರಕ್ಕೆಂದು ಹೊರಟವನನ್ನೇ ಊರ್ವಶಿ ಕಾವಲುಗಾರನೆಂದು ಭ್ರಮಿಸಿದ್ದಳು. ಅವಳ ರೂಪ, ಗುಣಕ್ಕೆ ಮರುಳಾಗಿದ್ದ ರಾಜಕುಮಾರ ನಿಜವಿಚಾರವನ್ನು ಬೇಕೆಂದೇ ತಿಳಿಸಲಿಲ್ಲ. ಅವಳು ಸದ್ಗುಣ ಸಂಪನ್ನೆ ಎಂಬುದನ್ನು ಅರಿತ ರಾಜಕುಮಾರ ಮದುವೆಗೆ ಒಪ್ಪಿದ್ದ. ಈ ರೀತಿಯಾಗಿ ಕಡೆಗೂ ಊರ್ವಶಿಯ ಆಸೆ ಫಲಿಸಿತು.
ಸವಿತಾ ನಾಗೇಶ್