Advertisement

ಉದ್ಘಾಟನೆಯಾಗಿ 8 ತಿಂಗಳುಗಳಾದರೂ ಕಾರ್ಯಾರಂಭಿಸದ ಉರ್ವ ಮಾರುಕಟ್ಟೆ

10:26 PM Aug 26, 2019 | mahesh |

ಮಹಾನಗರ: ಉರ್ವ ಮಾರ್ಕೆಟ್‌ ಸಂಕೀರ್ಣ ಉದ್ಘಾಟನೆಗೊಂಡು ಎಂಟು ತಿಂಗಳು ಕಳೆದರೂ ಅದು ಕಾರ್ಯಾರಂಭಗೊಂಡಿಲ್ಲ. ಆದರೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾದ ಈ ಹೊಸ ಕಟ್ಟಡದಿಂದಲೇ ಈಗ 15ಕ್ಕೂ ಹೆಚ್ಚು ಫ್ಯಾನ್‌ ಕಳವುಗೊಂಡಿದ್ದು, ಈ ಬಗ್ಗೆ ನಗರದ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಾರ್ಕೆಟ್‌ಗಳನ್ನು ಸಮಗ್ರ ಅಭಿವೃದ್ಧಿಪಡಿಸುವ ಸಲುವಾಗಿ ಮಹಾನಗರ ಪಾಲಿಕೆ 2008ರಲ್ಲಿ 35 ವರ್ಷ ಗುತ್ತಿಗೆ ಅವಧಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಹಸ್ತಾಂತರಿಸಿತ್ತು. 2016ರಲ್ಲಿ ಮೂಡಾದಿಂದ ಉರ್ವಾ ಮಾರ್ಕೆಟ್‌ಗೆ 12.29 ಕೋ.ರೂ. ವೆಚ್ಚದಲ್ಲಿ ಹೊಸ ಸಂಕೀರ್ಣ ನಿರ್ಮಾಣಕ್ಕೆ ಕಾಮಗಾರಿಗೆ ಚಾಲನೆ ನೀಡಿ 2019ರ ಜನವರಿಯಲ್ಲಿ ಉದ್ಘಾಟನೆ ನಡೆಸಿದೆ. ಉದ್ಘಾಟನೆಯಾದ ಬಳಿಕ ಮಳಿಗೆಗಳನ್ನು ಏಲಂ ಮಾಡದೆ ಮೂಡ ಹಾಗೆಯೇ ಇರಿಸಿಕೊಂಡಿತ್ತು. ಇದೀಗ ನೂತನ ಸಂಕೀರ್ಣದಿಂದ ಕಳವು ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

ಭದ್ರತಾ ಸಿಬಂದಿ ಇದ್ದರೂ ಕಳವು
ಉರ್ವ ನೂತನ ಮಾರುಕಟ್ಟೆಗೆ ಓರ್ವ ಭದ್ರತಾ ಸಿಬಂದಿಯನ್ನು ನೇಮಕ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಾರುಕಟ್ಟೆ ಒಳಗೆ ಅಳವಡಿಸಲಾದ ಫ್ಯಾನ್‌ಗಳು ಕಳವಾಗಿವೆ. ಕೆಲವು ದಿನಗಳ ಹಿಂದೆ ಮಾರುಕಟ್ಟೆ ಆವರಣದೊಳಗೆ ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು. ರಾತ್ರಿ ವೇಳೆಗೆ ಅಲೆ ಮಾರಿಗಳು ಇಲ್ಲೇ ವಾಸ್ತವ್ಯ ಮಾಡುವ ಬಗ್ಗೆಯೂ ಸ್ಥಳೀಯರಿಂದ ಆರೋಪಗಳು ಕೇಳಿ ಬರುತ್ತಿವೆ. 12 ಕೋ. ರೂ. ಖರ್ಚು ಮಾಡಿ ನಿರ್ಮಾಣ ಮಾಡಿದ ಕಟ್ಟಡ ಇದೀಗ ಅವ್ಯವಸ್ಥೆಗಳ ಆಗರವಾಗಿ ಬದಲಾಗುತ್ತಿದೆ.

ತಾತ್ಕಾಲಿಕ ಮಾರ್ಕೆಟ್‌ನಲ್ಲಿ ಸಂಕಷ್ಟ
ಮಾರುಕಟ್ಟೆ ಕಾಮಗಾರಿ ಆರಂಭಿಸುವ ಮುನ್ನ ಹಳೆ ಮಾರ್ಕೆಟ್‌ ಬಳಿ ತಾತ್ಕಾಲಿಕ ಮಾರ್ಕೆಟ್‌ ನಿರ್ಮಿಸಿ ಮೀನು ಮಾರಾಟ, ಇತರ ಅಂಗಡಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಈಗ ಸುಸಜ್ಜಿತ ಮಾರ್ಕೆಟ್‌ ಕಟ್ಟಡ ನಿರ್ಮಾಣವಾಗಿದ್ದರೂ ಮಳಿಗೆಗಳನ್ನು ಹಂಚಿಕೆ ಮಾಡದ ಕಾರಣ ತಾತ್ಕಾಲಿಕ ಮಾರ್ಕೆಟ್‌ನಲ್ಲೇ ವ್ಯಾಪಾರ ಮುಂದುವರಿದಿದೆ. ತಾತ್ಕಾಲಿಕ ಮಾರುಕಟ್ಟೆಯಲ್ಲಿ ಹಲವು ಸಮಸ್ಯೆಗಳಿದ್ದರೂ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ.

ಹೊಸ ಸಂಕೀರ್ಣದೊಳಗೆ!
ಉರ್ವ ಮಾರ್ಕೆಟ್‌ ಸಂಕೀರ್ಣ ತಳ ಅಂತಸ್ತು, ನೆಲ ತಳ ಅಂತಸ್ತು, ನೆಲ ಮೇಲಂತಸ್ತು, ಮೂರು ಅಂತಸ್ತುಗಳ ಒಟ್ಟು 84,891 ಚದರ ಅಡಿ ವಿಸ್ತೀರ್ಣವಿದೆ.

Advertisement

ತಳ ಅಂತಸ್ತಿನಲ್ಲಿ 73 ಕಾರು, 40 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ, 5 ಶಾಪ್‌, ನೆಲ ತಳ ಅಂತಸ್ತಿನಲ್ಲಿ 21 ಮೀನು, ಮಟನ್‌ ಸ್ಟಾಲ್‌, ನೆಲ ಮೇಲಂತಸ್ತಿನಲ್ಲಿ 65 ಹೂ, ಹಣ್ಣು, ತರಕಾರಿ, ಇತರ ಸ್ಟಾಲ್‌ಗ‌ಳು, ಮೊದಲ ಅಂತಸ್ತಿನಲ್ಲಿ ಕ್ಯಾಂಟೀನ್‌, ಇತರ 16 ಶಾಪ್‌ಗ್ಳು, 2ನೇ ಅಂತಸ್ತಿನಲ್ಲಿ 8, 3ನೇ ಅಂತಸ್ತಿನಲ್ಲಿ 7 ಕಚೇರಿ ಮಳಿಗೆಗಳಿವೆ.

ಮೂಡ, ಮನಪಾದಲ್ಲೇ ಗೊಂದಲ
ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಮನಪಾ ಅಧೀನದಲ್ಲಿ ಮಾರುಕಟ್ಟೆಯನ್ನು ಮೂಡಕ್ಕೆ ಹಸ್ತಾಂತರಿಸಲಾಗಿತ್ತು. ಮೂಡ ನೂತನ ಸಂಕೀರ್ಣ ವನ್ನು ನಿರ್ಮಿಸಿದ ಬಳಿಕ ಏಲಂ ಮಾಡದ ಹಿನ್ನೆಲೆಯಲ್ಲಿ ಕಟ್ಟಡದ ನಿರ್ವಹಣೆಗಾಗಿ ಮಹಾನಗರಪಾಲಿಕೆಗೆ ನೀಡಬೇಕು ಎಂಬುದಾಗಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಇದಾದ ಬಳಿಕ ಯಾವುದೇ ತೀರ್ಮಾಣ ತೆಗೆದುಕೊಳ್ಳದ ಕಾರಣ ಕಟ್ಟಡ ಏಲಂ ಆಗದೆ ಹಾಗೆಯೇ ಉಳಿದಿದೆ. ಈ ನಡುವೆ ಮುಡಾ ತನ್ನ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡವನ್ನು ಮನಪಾಕ್ಕೆ ಹಸ್ತಾಂತರಿಸಿದರೆ ನಿರ್ಮಾಣ ವೆಚ್ಚ ಭರಿಸುವುದು ಯಾರು ಎನ್ನುವ ಪ್ರಶ್ನೆಯೂ ಮೂಡಿದೆ.

 ಇ- ಟೆಂಡರ್‌ ಕರೆಯಲಾಗಿದೆ
ಉರ್ವ ನೂತನ ಮಾರುಕಟ್ಟೆಯ ಅಂಗಡಿಗಳನ್ನು ಮಾರಾಟಕ್ಕಾಗಿ ಇ- ಟೆಂಡರ್‌ ಕರೆಯಲಾಗಿದೆ. ಕಟ್ಟಡವನ್ನು ಗುತ್ತಿಗೆದಾರರು ಅಧೀಕೃತವಾಗಿ ಈವರೆಗೆ ಮೂಡಕ್ಕೆ ಹಸ್ತಾಂತರಿಸಿಲ್ಲ. ಕಳವು ಬಗ್ಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಗುತ್ತಿಗೆದಾರರು ದೂರು ನೀಡಿದ್ದಾರೆ.
– ಶ್ರೀಕಾಂತ್‌ ರಾವ್‌, ಆಯುಕ್ತರು, ಮುಡಾ

Advertisement

Udayavani is now on Telegram. Click here to join our channel and stay updated with the latest news.

Next