Advertisement

ಕುತಂತ್ರದಿಂದ ಸುಳ್ಳು  ದೂರು ಕೊಡಿಸಿ ಶಿಕ್ಷಕನ ಬಂಧನ: ಆರೋಪ 

03:39 PM Oct 07, 2018 | |

ಉಪ್ಪಿನಂಗಡಿ : ಶಾಲಾಡಳಿತವು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಹಿತ ಬಯಸುವ ಶಿಕ್ಷಕರನ್ನು ಕುಟಿಲ ತಂತ್ರಗಳಿಂದ ಸಮಸ್ಯೆಗೆ ಸಿಲುಕಿಸುತ್ತಿದೆ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಶಾಲೆಯೊಂದರ ವಿದ್ಯಾರ್ಥಿಗಳ ಹೆತ್ತವರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

Advertisement

ವಿದ್ಯಾರ್ಥಿಗಳ ಹೆತ್ತವರಾದ ದಿನೇಶ್‌ ಮಲಂಗಲ್‌, ಸೀತಾರಾಮ ಮಡಿವಾಳ, ಮಹೇಶ್‌ ನಿಲ್ತಾರ್‌, ಮನೋಹರ್‌ ಸಹಿತ ಹಲವರು ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮಕ್ಕಳ ಹಿತಕ್ಕಾಗಿ ಅವಿರತ ಶ್ರಮಿಸುತ್ತಿರುವ ಶಿಕ್ಷಕರ ವಿರುದ್ಧ ಮಂಡಳಿಯ ಒಂದಿಬ್ಬರು ಸದಸ್ಯರ ಕುಮ್ಮಕ್ಕಿನಿಂದ ಸುಳ್ಳು ದೂರು ದಾಖಲಿಸಿ ಜೈಲಿಗಟ್ಟುವ ಕೆಲಸವಾಗಿದೆ. ಶಾಲೆಯಲ್ಲಿ ಏನಾಗಿದೆ ಎಂದು ಪ್ರಶ್ನಿಸಲೂ ಹೆತ್ತವರಿಗೆ ಅವಕಾಶ ನೀಡುತ್ತಿಲ್ಲ. ಸಮರ್ಥ ಶಿಕ್ಷಕರನ್ನು ಸಂಸ್ಥೆಯಿಂದ ಹೊರದಬ್ಬಲು ಅನ್ಯಾಯದ ಮಾರ್ಗ ತುಳಿದಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ತನಿಖೆ ನಡೆಸಿ, ಸಂಸ್ಥೆಯನ್ನು ಸುಸೂತ್ರವಾಗಿ ಮುನ್ನಡೆಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಐದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಗುರುತರ ಆಪಾದನೆ ಯಿಂದ ದೂರು ಸಲ್ಲಿಕೆಯಾಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಾಮೀನು ರಹಿತ ಬಂಧನಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಸದಾ ಪ್ರೇರೇಪಣೆ ಹಾಗೂ ತರಬೇತಿ ನೀಡುವ ಶಿಕ್ಷಕರನ್ನು ಜೈಲಿ ಗಟ್ಟುವುದು ಯಾವ ನ್ಯಾಯ? ಅಂತಹ ಘಟನೆಯೇ ನಡೆದಿಲ್ಲ. ಆದರೂ ಜನ ಮೆಚ್ಚಿದ ಶಿಕ್ಷಕರಿಗೆ ಈ ಶಿಕ್ಷೆ ಏಕೆ? ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳೂ ಜತೆಗೂಡಿ, ಶಿಕ್ಷಕರ ಮೇಲಿನ ಆರೋಪವನ್ನು ನಿರಾಕರಿಸಿ ದರು. ದೂರುದಾರ ವಿದ್ಯಾರ್ಥಿನಿಯೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಶಿಕ್ಷಕರ ಬಂಧನದ ಸುದ್ದಿ ತಿಳಿದು ಶುಕ್ರವಾರ ಶಾಲೆಯ 394 ವಿದ್ಯಾರ್ಥಿಗಳ ಪೈಕಿ 30 ಮಕ್ಕಳು ಮಾತ್ರ ತರಗತಿಗೆ ಹಾಜರಾಗಿದ್ದರು. ಉಳಿದ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದರು. ಶನಿವಾರವೂ ಬಹುತೇಕ ವಿದ್ಯಾರ್ಥಿಗಳು ಹೆತ್ತವರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಪ್ಪಿನಂಗಡಿ ಪಿಎಸ್‌ಐ ನಂದ ಕುಮಾರ್‌ ಪ್ರತಿಭಟನಕಾರರ ಮನವಿ ಸ್ವೀಕರಿಸಿ, ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಿಂದ ಸತ್ಯ ಏನೆಂದು ಗೊತ್ತಾಗಲಿದೆ. ಶಾಲಾ ಆಡಳಿತ ಹಾಗೂ ಮಕ್ಕಳ ಹೆತ್ತವರ ಮಧ್ಯೆ ಸಮಸ್ಯೆಗಳಿದ್ದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಲು ಸೂಚಿಸುವುದಾಗಿ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next