ಚಿಂಚೋಳಿ: ಕಾಳಗಿ ಮತ್ತು ಚಿಂಚೋಳಿ ತಾಲೂಕಿನಲ್ಲಿ ಬಿದ್ದ ಭಾರಿ ಮಳೆ ಹಾಗೂ ಚಂದ್ರಂಪಳ್ಳಿ, ಮುಲ್ಲಾಮಾರಿ ಜಲಾಶಯಗಳಿಂದಹರಿದು ಬಿಟ್ಟ ನೀರಿನ ಪ್ರವಾಹದಿಂದ ಬೆಳೆ ನಷ್ಟವಾದ ರೈತರಿಗೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಉರುಳು ಸೇವೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ,ಚಿಂಚೋಳಿ-ಕಾಳಗಿ ತಾಲೂಕಿನಲ್ಲಿ ಸತತವಾಗಿ ಕಳೆದ ನಾಲ್ಕುತಿಂಗಳಿಂದ ವ್ಯಾಪಕವಾಗಿ ಸುರಿದ ಭಾರಿ ಮಳೆಯಿಂದ ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿವೆ. ಹೆಸರು, ಉದ್ದು, ಸೋಯಾಬಿನ್, ತರಕಾರಿ ಬೆಳೆಗಳು ಮಳೆಯಿಂದ ಕೊಳೆತು ಹಾನಿಯಾಗಿವೆ. ಅಲ್ಲದೇ ಮುಲ್ಲಾಮಾರಿ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಸಾವಿರಾರು ಮನೆಗಳಿಗೆ ನೀರು ನುಗ್ಗಿ ಹಾನಿಯನ್ನುಂಟು ಮಾಡಿದೆ. ಆದರೆ ಇಲ್ಲಿಯವರೆಗೆ ಸರಕಾರ ಪರಿಹಾರ ನೀಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕೆಳದಂಡೆ ಮುಲ್ಲಾಮಾರಿ ಮುಖ್ಯಕಾಲುವೆ ಆಧುನಿಕರಣ ಕಾಮಗಾರಿ ಕಳಪೆ ಮಟ್ಟದಿಂದ ನಡೆಯುತ್ತಿದೆ. ಯೋಜನೆಯ ಕಾಲುವೆ ಮತ್ತು ಪುರ್ನವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡಲು ಕರ್ನಾಟಕ ನೀರಾವರಿ ನಿಗಮದಿಂದ ಒಟ್ಟು180 ಕೋಟಿ ರೂ. ನೀಡಿದೆ. ಆದರೆ ಎಲ್ಲ ಕೆಲಸಗಳು ಉತ್ತಮ ಗುಣಮಟ್ಟದಿಂದ ನಡೆದಿಲ್ಲ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಸಿದ್ದಯ್ಯ ಸ್ವಾಮಿ, ಮಾಜಿದ್ ಪಟೇಲ್ ಸರಕಾರದ ನಿರ್ಲಕ್ಷ್ಯತನದಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಸಿಗುತ್ತಿಲ್ಲವೆಂದು ಸರಕಾರದ ನೀತಿ ಖಂಡಿಸಿದರು.
ನಂತರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿಗೆ ಸಲ್ಲಿಸಲಾಯಿತು. ಹಣಮಂತರಾವ್ ಪೂಜಾರಿ,ಓಮನರಾವ್ ಕೊರವಿ, ಎಸ್.ಕೆ. ಮುಕ್ತಾರ,ಎಂ.ಕೆ. ಮಗದೂಮ, ಮಂಜೂರ ಅಹೆಮದ್, ಸಂತೋಷ ಅಡಕಿ, ಬಸವರಾಜ ವಾಡಿ,ಮಹೆಬೂಬ ಶಾ ಅಣವಾರ ಇನ್ನಿತರರಿದ್ದರು. ಪಟ್ಟಣದ ಬಸವೇಶ್ವರ ವೃತ್ತದಿಂದ 2ಕಿ.ಮೀ ದೂರದಲ್ಲಿ ಇರುವ ಮಿನಿ ವಿಧಾನಸೌಧ ವರೆಗೆ ಜೆಡಿಎಸ್ ಕಾರ್ಯಕರ್ತರು ಉರುಳು ಸೇವೆ ನಡೆಸಿದರು