Advertisement

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..

06:13 PM Sep 28, 2024 | ಸುಹಾನ್ ಶೇಕ್ |

ಬಣ್ಣದ ಲೋಕದ ಕಲಾವಿದರು ಅಥವಾ ಸೆಲೆಬ್ರಿಟಿಗಳ ನಡುವಿನ ಪ್ರೀತಿ – ಪ್ರೇಮ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಅವರ ವೈಯಕ್ತಿಕ ಹಾಗೂ ಸಾಂಸಾರಿಕ ಜೀವನ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿ ಆಗುತ್ತವೆ. ಸೆಲೆಬ್ರಿಟಿ ಲೈಫ್‌ ಲೀಡ್‌ ಮಾಡುವ ವ್ಯಕ್ತಿಗಳ ಬದುಕಿನಲ್ಲಿ ಏನೇ ವಿಚಾರವಾದರೂ ಅದು ಮಾಧ್ಯಮದ ಮೂಲಕ ನಾಲ್ಕು ಮಂದಿಗೆ ಗೊತ್ತಾಗುತ್ತದೆ.

Advertisement

ಇತ್ತೀಚೆಗೆ ವರ್ಷಗಳಲ್ಲಿ ಖ್ಯಾತ ಸ್ಟಾರ್‌ ದಂಪತಿ ಅಥವಾ ಸ್ಟಾರ್‌ ಕಪಲ್ಸ್‌ ಎಂದು ಕರೆಯಲ್ಪಡುವ ಸಲೆಬ್ರಿಟಿಗಳು ತನ್ನ ದಾಂಪತ್ಯ ಜೀವನವನ್ನು ಅಂತ್ಯವಾಡಿದ್ದಾರೆ. ಬಾಲಿವುಡ್‌ , ಕಾಲಿವುಡ್, ಕ್ರಿಕೆಟ್‌ ಲೋಕದಲ್ಲಿನ ಖ್ಯಾತನಾಮರು ಈ ವರ್ಷ  ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯವನ್ನಾಡಿದ್ದಾರೆ.

ಯಾವೆಲ್ಲ ಸೆಲೆಬ್ರಿಟಿಗಳು ಈ ವರ್ಷ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎನ್ನುವ ಪಟ್ಟಿ ಇಲ್ಲಿದೆ..

ನಟ ಜಯಂ ರವಿ – ಅರತಿ: ಕಾಲಿವುಡ್‌ ಸಿನಿರಂಗದಲ್ಲಿ ಇತ್ತೀಚೆಗೆ ದೊಡ್ಡ ಸುದ್ದಿಯಾದ ವಿಚ್ಛೇದನ ಪ್ರಕರಣವಿದು. ನಟ ಜಯಂ ರವಿ (Actor Jayam Ravi) ಹಾಗೂ ಆರತಿ (Aarti ) ಅವರ ವಿಚ್ಚೇದನ ವಿಚಾರ ವಿವಾದದಿಂದಲೂ ಸುದ್ದಿಯಾಗಿದೆ.

ನಟ ಜಯಂ ರವಿ ತನ್ನ 15 ವರ್ಷ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಪತ್ನಿ ಆರತಿಗೆ ವಿಚ್ಛೇದನ ನೀಡಿದ್ದಾರೆ. ಆದರೆ ಅವರು ವಿಚ್ಛೇದನ ಘೋಷಿಸಿದ ಕೆಲ ಗಂಟೆಗಳಲ್ಲೇ ಅವರ ಪತ್ನಿ ಆರತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

Advertisement

ತಮ್ಮ ಗಮನಕ್ಕೆ ಬಾರದೆ ಅವರು ವಿಚ್ಚೇದನದ ವಿಚಾರವನ್ನು ಘೋಷಿಸಿದ್ದಾರೆ ಎಂದು ಆರತಿ ಹೇಳಿದ್ದರು. ಈ ಮಾತಿಗೆ ಜಯಂ ರವಿ ಅವರು ಈ ಬಗ್ಗೆ ಆರತಿಗೆ ತಾನು ಎರಡು ನೋಟಿಸ್‌ ನೀಡಿದ್ದೆ ಎಂದು ಹೇಳಿದ್ದರು.

ಈ ನಡುವೆ ಜಯಂ ಆರತಿ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಆರತಿ ಮನೆಯಲ್ಲಿ ನನ್ನ ಚಿನ್ನಾಭರಣ, ಪಾಸ್‌ಪೋರ್ಟ್, ಕಾರ್ ಕೀ ಸೇರಿದಂತೆ ಇತರೆ ವಸ್ತುಗಳಿವೆ ಅದನ್ನು ವಾಪಾಸ್‌ ಕೊಡಿಸುವಂತೆ ಅಡ್ಯಾರ್ ಪೊಲೀಸರ ಬಳಿ ದೂರು ನೀಡಿ ನಟ ಜಯಂ ರವಿ ಮನವಿ ಮಾಡಿದ್ದರು.

ಸದ್ಯ ಈ ವಿಚ್ಛೇದನ ವಿಚಾರ ಸುದ್ದಿಯಲ್ಲಿದೆ.  ಜಯಂ ಹಾಗೂ ಆರತಿಗೆ ಆರವ್ ಮತ್ತು ಅಯಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಅವರು ನನಗೆ ಬೇಕು ಅದಕ್ಕಾಗಿ ಯಾವ ಕಾನೂನು ಹೋರಾಟವನ್ನು ಬೇಕಾದರೂ ಮಾಡಬಲ್ಲೆ ಎಂದು ಜಯಂ ರವಿ ಹೇಳಿದ್ದಾರೆ.

ನಟಿ ಊರ್ಮಿಳಾ ಮಾತೋಂಡ್ಕರ್ – ಮೊಹ್ಸಿನ್ ಅಖ್ತರ್ ಮಿರ್‌: ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ಮದುವೆಯಾದ 8 ವರ್ಷಗಳ ಬಳಿಕ ಪತಿ ಮೊಹ್ಸಿನ್ ಅಖ್ತರ್ ಮಿರ್‌ ಅವರಿಂದ ವಿಚ್ಛೇದನಕ್ಕೆ(Divorce) ಅರ್ಜಿ ಸಲ್ಲಿಸಿರುವ ವಿಚಾರ ಇತ್ತೀಚೆಗೆ ಸುದ್ದಿಯಾಗಿದೆ.

ತನಗಿಂತ 10 ವರ್ಷ ಕಿರಿಯರಾಗಿರುವ ಕಾಶ್ಮೀರ ಮೂಲದ ನಟ ಮೊಹ್ಸಿನ್ (Mohsin Akhtar Mir) ಅವರೊಂದಿಗೆ 2016 ಮಾರ್ಚ್ 3 ರಂದು ಊರ್ಮಿಳಾ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲೇ ಇಬ್ಬರ ನಡುವಿನ ಪ್ರೀತಿ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು.

ಮುಸ್ಲಿಂ ಹುಡುಗನನ್ನು ಮದುವೆ ಆದ ಕಾರಣಕ್ಕೆ ಅವರನ್ನು ಅನೇಕರು ಟೀಕಿಸಿದ್ದರು. ಮದುವೆ ಬಳಿಕ ಊರ್ಮಿಳಾ ಮುಸ್ಲಿಂಗೆ ಮತಾಂತರಗೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿಯನ್ನು ನಟಿ  ತಳ್ಳಿ ಹಾಕಿದ್ದರು.

ಮದುವೆಯಾದ 8 ವರ್ಷದಲ್ಲೇ ಪತಿ ಮೊಹ್ಸಿನ್‌ ಮೊಹ್ಸಿನ್ ಅಖ್ತರ್ ಮಿರ್‌ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರತ್ಯೇಕತೆಯ ಹಿಂದಿನ ಕಾರಣ ಇನ್ನೂ ತಿಳಿದಿಲ್ಲವಾದರೂ, ವಿಚ್ಛೇದನವು ”ಪರಸ್ಪರ ಒಪ್ಪಿಗೆಯ ಮೇಲೆ ನಡೆಯುತ್ತಿಲ್ಲ” ಎಂದು ವರದಿಯಾಗಿದೆ.

ಹಾರ್ದಿಕ್‌ ಪಾಂಡ್ಯ – ನತಾಶಾ ಸ್ಟಾನ್ಕೊವಿಕ್:  ಈ ವರ್ಷ ಸುದ್ದಿಯಾದ ದೊಡ್ಡ ಸೆಲೆಬ್ರಿಟಿ ವಿಚ್ಛೇದನ ವಿಚಾರವಿದು. ಕ್ರಿಕೆಟಿಗ ಹಾರ್ದಿಕ್‌ (Hardik Pandya) – ನತಾಶಾ ಸ್ಟಾನ್ಕೊವಿಕ್ (Natasa Stankovic) 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದು ಇದೇ ವರ್ಷದಲ್ಲಿ.

ಇಬ್ಬರ ನಡುವಿನ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂದು ಹಲವು ತಿಂಗಳಿನಿಂದ ಸುದ್ದಿ ಹರಿದಾಡುತ್ತಿತ್ತು. ಮೊದಲಿಗೆ ನತಾಶ ಹಾರ್ದಿಕ್‌ ಜತೆಗಿನ ಎಲ್ಲ ಫೋಟೋಗಳನ್ನು ಡಿಲೀಟ್‌ ಮಾಡಿದ್ದರು. ಅಲ್ಲಿಂದಲೇ ಇಬ್ಬರ ನಡುವೆ ಏನೋ ಭಿನ್ನಾಭಿಪ್ರಾಯ ಮೂಡಿದೆ ಎಂದು ಹೇಳಲಾಗಿತ್ತು. ಇನ್ನು ಕೆಲವರು ವಿಚ್ಚೇದನದ ವಿಚಾರ ಪಿಆರ್‌ ತಂಡ ಮಾಡಿದ ಪಬ್ಲಿಕ್‌ ಸ್ಟಂಟ್‌ ಎನ್ನುವ ಮಾತನ್ನು ಆಡಿದ್ದರು. ಆದರೆ ಜುಲೈ 18 ರಂದು ಅಧಿಕೃತವಾಗಿ ವಿಚ್ಛೇದನವನ್ನು ಘೋಷಿಸಿದರು.

“4 ವರ್ಷಗಳ ಕಾಲ ಒಂದಾಗಿ ಇದ್ದ ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಇದು ನಮ್ಮಿಬ್ಬರ ಹಿತಾಸಕ್ತಿಗಾಗಿ ಎಂದು ನಾವು ನಂಬುತ್ತೇವೆ. ಇದು ಕಠಿನ ನಿರ್ಧಾರವಾಗಿದೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಹೊಂದಿದ್ದೇವೆ, ಕುಟುಂಬವನ್ನು ಬೆಳೆಸಿಕೊಂಡಿದ್ದೇವೆ. ನಾವು ಅಗಸ್ತ್ಯನೊಂದಿಗೆ ಆಶೀರ್ವದಿಸಲ್ಪಟ್ಟಿದ್ದೇವೆ, ಅವನು ನಮ್ಮಿಬ್ಬರ ಜೀವನದ ಕೇಂದ್ರದಲ್ಲಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನೀಡುವುದನ್ನು ಖಚಿತಪಡಿಸಿಕೊಳ್ಳಲು ಸಹ-ಪೋಷಕರಾಗಿರುತ್ತೇವೆ”  ಎಂದು ಇಬ್ಬರು ಹೇಳಿದ್ದಾರೆ.

ದಲ್ಜೀತ್ ಕೌರ್ – ನಿಖಿಲ್ ಪಟೇಲ್: ನಟ ಶಾಲಿನ್ ಭಾನೋಟ್‌ನಿಂದ ವಿಚ್ಛೇದನ ಪಡೆದ 8 ವರ್ಷಗಳ ನಂತರ ಕಿರುತೆರೆ ನಟಿ ದಲ್‌ಜೀತ್ ಕೌರ್ (Dalljiet Kaur) ಬ್ಯಾಂಕರ್ ನಿಖಿಲ್ ಪಟೇಲ್‌ (Nikhil Patel) ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು. 2023ರ ಮಾರ್ಚ್‌ನಲ್ಲಿ ನಡೆದಿದ್ದ ಮದುವೆ ಕೆಲವೇ ತಿಂಗಳಿನಲ್ಲಿ ವಿಚ್ಛೇದನ ಹಂತಕ್ಕೆ ಬಂದಿತ್ತು.

ಮದುವೆ ಬಳಿಕ ದಲ್‌ಜೀತ್ ಕೌರ್ ಮಗ ಜೈಡನ್ ಮತ್ತು ನಿಖಿಲ್‌ನ ಪುತ್ರಿಯರಾದ ಆರಿಯಾನಾ ಮತ್ತು ಆನಿಕಾ ಅವರೊಂದಿಗೆ ಕೀನ್ಯಾಕ್ಕೆ ಶಿಫ್ಟ್‌ ಆಗಿದ್ದರು. ಅಲ್ಲಿಂದಲೇ ಪ್ರತಿದಿನ ವ್ಲಾಗ್ಸ್‌ ಗಳನ್ನು ಮಾಡಿ ದಲ್‌ ಜೀತ್‌ ಹಂಚಿಕೊಳ್ಳುತ್ತಿದ್ದರು.

2024ರ ಆರಂಭದಲ್ಲಿ ದಲ್‌ ಜೀತ್‌ ತನ್ನ ಗಂಡನ ಅಸಲಿ ಮುಖವನ್ನು ಬಯಲಿಗೆ ಎಳೆದಿದ್ದರು. ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದ ದಲ್‌ ಜೀತ್‌ ಅಂದು ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಗಂಡನ ಮೇಲೆ ಅಕ್ರಮ ಸಂಬಂಧದ ಆರೋಪವನ್ನು ಮಾಡಿದ್ದರು.  ನಿಖಿಲ್‌ ಆರಂಭದಲ್ಲಿ ತನ್ನನ್ನು ಮದುವೆ ಆಗಲು ನಿರಾಕರಿಸಿದ್ದರು. ನನ್ನ ಬಟ್ಟೆ, ಮಗನ ಸ್ಕೂಲ್‌ ಬುಕ್ಸ್‌ ಎಲ್ಲವೂ ಗಂಡನ ಮನೆಯಾದ ಕೀನ್ಯಾದಲ್ಲಿದೆ. ಆದರೆ ಅವರು ನನ್ನನ್ನು ಮದುವೆಯೇ ಆಗಿಲ್ಲವೆಂದು ಹೇಳುತ್ತಿದ್ದಾರೆ ಎಂದು ಇನ್ಸ್ಟಾಗ್ರಾಮ್‌ ನೋಟ್‌ ನಲ್ಲಿ ಬರೆದುಕೊಂಡಿದ್ದರು.

ನಿಖಿಲ್‌ ಬೇರೆ ಹೆಂಗಸಿನ ಜತೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಿ ದಲ್‌ ಜೀತ್‌ ಪತಿಯಿಂದ ವಿಚ್ಛೇದನ ಕೋರಿದ್ದರು.

ಇಶಾ ಡಿಯೋಲ್ –  ಭಾರತ್ ತಖ್ತಾನಿ: ನಟಿ ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್‌(Esha Deol) ಭಾರತ್‌ ತಖ್ತಾನಿ (Bharat Takhtani) ಇದೇ ವರ್ಷದ ಫೆ.7 ರಂದು ವಿಚ್ಛೇದನ ಘೋಷಿಸಿದ್ದರು.

ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರು 12 ವರ್ಷಗಳ ದಾಂಪತ್ಯಕ್ಕೆ ಅಂತ್ಯವಾಡಿದ್ದರು. ಮಕ್ಕಳಾದ ರಾಧ್ಯಾ ಮತ್ತು ಮಿರಯಾ ಅವರಿಗೆ ಸಹ-ಪೋಷಕರಾಗಿರುತ್ತೇವೆ ಎಂದು ಇಬ್ಬರು ಹೇಳಿದ್ದಾರೆ.

ಇಶಾ ಕೊಪ್ಪಿಕರ್ – ಟಿಮ್ಮಿ ನಾರಂಗ್: 90 ದಶಕದ ಬಹುಭಾಷಾ ನಟಿ ಇಶಾ ಕೊಪ್ಪಿಕರ್ (Isha Koppikar) 2009ರಲ್ಲಿ ಹೊಟೇಲ್‌ ಉದ್ಯಮಿ ಟಿಮ್ಮಿ ನಾರಂಗ್‌ (Timmy Narang) ಅವರೊಂದಿಗೆ ವಿವಾಹವಾಗಿದ್ದರು. ದಾಂಪತ್ಯದಲ್ಲಿನ ಹೊಂದಾಣಿಕೆ ಸಮಸ್ಯೆಯಿಂದಾಗಿ ಇಬ್ಬರು ಪರಸ್ಪರ ದೂರವಾದರು. 2024ರ ಜನವರಿಯಲ್ಲಿ ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದರು. ಇವರಿಗೆ ರಿಯಾನ್ನಾ ನಾರಂಗ್ ಎಂಬ ಮಗಳಿದ್ದಾರೆ.

ತಮಿಳು, ತೆಲುಗು, ಕನ್ನಡ ಮತ್ತು ಮರಾಠಿ ಸಿನಿಮಾರಂಗದಲ್ಲಿ  ಗುರುತಿಸಿಕೊಂಡಿರುವ ಇಶಾ ‘ಫಿಜಾ'(2000), ‘ಕಂಪನಿ’ (2002), ‘ಕಾಂತೆ’ (2002), ‘ಪಿಂಜಾರ್’ (2003), ‘ಡಾನ್’ ಮತ್ತು ‘ಡರ್ನಾ ಮನ ಹೈ’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ತಮಿಳಿನ ‘ಅಯಲಾನ್’ ಚಿತ್ರ ದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ – ಶೋಯೆಬ್‌ ಮಲಿಕ್:‌  ಭಾರತದ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕ್‌ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌ (Shoaib Malik) ಅವರ ದಾಂಪತ್ಯ ಜೀವನ ಬೇರ್ಪಟ್ಟ ವಿಚಾರ ವರ್ಷದ ಆರಂಭದಲ್ಲಿ ದೊಡ್ಡ ಸುದ್ದಿಯಾಗಿತ್ತು.

2022ರಿಂದಲೂ ಇಬ್ಬರ ನಡುವಿನ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತಾಗಿತ್ತು. ಆದರೆ 2023ರಲ್ಲಿ ಇಬ್ಬರು ವಿಚ್ಛೇದನ ಪಡೆದಿದ್ದರು. ಆದರೆ 2024ರ ಜ.20 ರಂದು ಶೋಯೆಬ್‌ ಮಲಿಕ್‌ ಪಾಕ್ ನಟಿ ಸನಾ ಜಾವೇದ್‌ ಅವರನ್ನು ವಿವಾಹವಾದ ಬಳಿಕ ಸಾನಿಯಾ ಅವರೊಂದಿಗೆ ವಿಚ್ಛೇದನ ಪಡೆದ ವಿಚಾರ ಬೆಳಕಿಗೆ ಬಂದಿತ್ತು.

2010 ರಲ್ಲಿ ಸಾನಿಯಾ – ಶೋಯೆಬ್‌ ವಿವಾಹವಾಗಿತ್ತು. 2018 ರಲ್ಲಿ ದಂಪತಿ ಇಜಾನ್‌  ಎಂಬ ಗಂಡು ಮಗುವಿಗೆ ತಂದೆ – ತಾಯಿಯಾಗಿದ್ದರು.

ನಿವೇದಿತಾ-ಚಂದನ್: ಪ್ರೀತಿಸಿಸಿ ಮದುವೆಯಾಗಿದ್ದ ರ್‍ಯಾಪರ್‌ ಚಂದನ್‌ ಶೆಟ್ಟಿ(Chandan Shetty) – ನಿವೇದಿತಾ ಗೌಡ (Niveditha Gowda) ಪರಸ್ಪರ ಒಪ್ಪಿಗೆಯೇ ಮೇಲೆಯೇ ವಿಚ್ಚೇದನ ಪಡೆದುಕೊಂಡಿದ್ದಾರೆ. ಮುದ್ದು ಮುದ್ದಾಗಿ ಜತೆಯಾಗಿ ರೀಲ್ಸ್‌ ಮಾಡುತ್ತಿದ್ದ ಚಂದನ್‌ – ನಿವೇದಿತಾ ಇದ್ದಕ್ಕಿದ್ದಂತೆ ಡೈವೋರ್ಸ್‌ ಪಡೆದುಕೊಂಡ ವಿಚಾರ ಅನೇಕರಿಗೆ ಶಾಕ್‌ ನೀಡಿತ್ತು.

ಪತಿ ಪತ್ನಿಯಾಗಿ  ಮುಂದುವರೆಯುವ ನಿಟ್ಟಿನಲ್ಲಿ ಹೊಂದಾಣಿಕೆ ಇಲ್ಲದಿರುವುದೇ ಇಬ್ಬರ ವಿಚ್ಚೇದನಕ್ಕೆ ಪ್ರಮುಖ ಕಾರಣವಾಗಿತ್ತು.

“ಈ ದಿನ ಚಂದನ್ ಶೆಟ್ಟಿ ಹಾಗೂ ನಾನು, ನಮ್ಮ ದಾಂಪತ್ಯವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಹಾಗೂ ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಎಂದಿನಂತೆ ಬೆಂಬಲ ಕೋರುತ್ತೇವೆ. ನಾವೂ ಪ್ರತ್ಯೇಕ ಮಾರ್ಗ ಅನುಸರಿಸಿದ್ರೂ, ಒಬ್ಬರೊನ್ನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ನಿವೇದಿತಾ ವಿಚ್ಚೇದನ ವಿಚಾರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಆದರೆ ಇವರ ವಿಚ್ಛೇದನ ವಿಚಾರದಲ್ಲಿ ನಾನಾ ಮಾತು ಕೇಳಿ ಬಂದಿತ್ತು. ಮಕ್ಕಳು ಮಾಡಿಕೊಳ್ಳುವ ವಿಚಾರಕ್ಕೆ ಹೀಗೆ ಆಗಿದೆ ಎನ್ನುವ ಮಾತೂ ಕೂಡ ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ಆ ಬಳಿಕ ಇಬ್ಬರು ಸುದ್ದಿಗೋಷ್ಟಿ ನಡೆಸಿ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದರು.

ಸದ್ಯ ಇಬ್ಬರು ʼಮುದ್ದು ರಾಕ್ಷಸಿʼ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಯುವರಾಜ್‌ ಕುಮಾರ್‌ – ಶ್ರೀದೇವಿ: ಡಾ. ರಾಜ್‌ ಕುಮಾರ್‌ ಕುಟುಂಬದ ಕುಡಿ, ರಾಘವೇಂದ್ರ ಅವರ ಪುತ್ರ ಯುವರಾಜ್‌ (Yuvaraj Kumar)  ಕುಮಾರ್ ಅವರ ದಾಂಪತ್ಯ ಜೀವನದಲ್ಲಿನ ಬಿರುಕಿನ ವಿಚಾರ ಸ್ಯಾಂಡಲ್‌ ವುಡ್‌ ನಲ್ಲಿ ಸುದ್ದಿಯಾಗಿತ್ತು.

ಯುವರಾಜ್‌ ಕುಮಾರ್‌ 2019 ರಲ್ಲಿ ಮೈಸೂರು ಮೂಲದ ಶ್ರೀದೇವಿ ಭೈರಪ್ಪರನ್ನು (Sridevi byrappa)  ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಇಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು. ಆದರೆ 2024 ಜೂನ್‌ ತಿಂಗಳಿನಲ್ಲಿ ಯುವರಾಜ್‌ (ಗುರುರಾಜ್‌ ಕುಮಾರ್) ತನ್ನ ಪತ್ನಿ ಶ್ರೀದೇವಿ ಅವರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ವಿಚ್ಛೇದನ ಪ್ರಕರಣದ ಬಳಿಕ ಶ್ರೀದೇವಿ – ಯುವರಾಜ್‌ ನಡುವೆ ಆರೋಪ – ಪ್ರತ್ಯಾರೋಪ ಕೇಳಿ ಬಂದಿತ್ತು. ಶ್ರೀದೇವಿ ಭೈರಪ್ಪ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಇನ್ನೊಂದೆಡೆ ಯುವರಾಜ್‌ ಕುಮಾರ್(ಗುರುರಾಜ್‌ ಕುಮಾರ್)‌ ಸಹನಟಿ ಜೊತೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂದು ಆರೋಪವನ್ನು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next