ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಸರಕಾರದ ಮಧ್ಯೆ ನಡೆಯುತ್ತಿರುವ ತಿಕ್ಕಾಟದ ಮಧ್ಯೆಯೇ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ನ.19ರಂದು ಆರ್‌ಬಿಐ ಸಭೆ ನಡೆಯಲಿದ್ದು, ಅಂದು ತಮ್ಮ ನಿರ್ಧಾರವನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ಅನಾರೋಗ್ಯದ ಕಾರಣ ನೀಡಿ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಹಲವು ಮೂಲಗಳನ್ನು ಆಧರಿಸಿದ ವರದಿಯಲ್ಲಿ ವಿವರಿಸಲಾಗಿದೆ.
ಮೂರು ವಿಷಯಗಳಲ್ಲಿ ಭಿನ್ನಾಭಿಪ್ರಾಯ: ಆರ್‌ಬಿಐ ಹಾಗೂ ಸರಕಾರದ ಮಧ್ಯೆ ಮೂರು ವಿಚಾರಗಳಿಗೆ ಸಂಬಂಧಿಸಿ ಭಿನ್ನಾಭಿಪ್ರಾಯಗಳಿವೆ. ವಿತ್ತೀಯ ಕೊರತೆ ನಿರ್ವಹಿಸುವುದಕ್ಕಾಗಿ 3.6 ಲಕ್ಷ ಕೋಟಿ ರೂ. ಮೀಸಲು ನಿಧಿ ವರ್ಗಾವಣೆ ಮಾಡಬೇಕು ಎಂದು ಆರ್‌ಬಿಐ ಅನ್ನು ಸರಕಾರ ಕೇಳಿದೆ. ಅಲ್ಲದೆ, ಹಣಕಾಸು ಕಂಪೆನಿಗಳಿಗೆ ಹೆಚ್ಚು ಬಂಡವಾಳ ಕ್ರೋಡೀಕರಣಕ್ಕೆ ಅವಕಾಶ ನೀಡಬೇಕು ಮತ್ತು ಬ್ಯಾಂಕ್‌ಗಳಿಗೆ ಹೆಚ್ಚುವರಿ ಆದಾಯ ಗಳಿಸಲು ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರ ಕೇಳಿದೆ.
ಆರ್‌ಬಿಐ ಮಂಡಳಿಯು ರಾಹುಲ್ ದ್ರಾವಿಡ್ ರೀತಿ ರಕ್ಷಣಾತ್ಮಕವಾಗಿರಬೇಕು. ಆದರೆ ಸಿಧು ರೀತಿ ದೊಡ್ಡ ಧ್ವನಿಯಲ್ಲಿ ಮಾತನಾಡಬಾರದು. ಸರಕಾರ ಮತ್ತು ಆರ್‌ಬಿಐ ಪರಸ್ಪರ ಸಲಹೆ ಪಡೆಯಬೇಕು ಮತ್ತು ನೀಡಬೇಕು.
– ರಘುರಾಮ್ ರಾಜನ್, ಆರ್‌ಬಿಐ ನಿವೃತ್ತ ಗವರ್ನರ್