Advertisement

Sandalwood: ಸ್ಯಾಂಡಲ್‌ವುಡ್‌ನ‌ಲ್ಲಿ ಏಕರೂಪ ಟಿಕೆಟ್‌ ದರ ಕೂಗು

10:08 AM Oct 29, 2024 | Team Udayavani |

ಪರಭಾಷೆಯ ಸ್ಟಾರ್‌ ಸಿನಿಮಾ ಬಿಡುಗಡೆಯಾಯಿತೆಂದರೆ ಕರ್ನಾಟಕದ ಮಲ್ಟಿಪ್ಲೆಕ್ಸ್‌ ಹಾಗೂ ಕೆಲವು ಚಿತ್ರಮಂದಿರಗಳು ಟಿಕೆಟ್‌ ಬೆಲೆಯನ್ನು ಏಕಾಏಕಿ ಏರಿಸಿಬಿಡುತ್ತವೆ. 200 ರೂಪಾಯಿ ಇದ್ದ ಟಿಕೆಟ್‌ ಬೆಲೆ 1200 ಆದ ಉದಾಹರಣೆಯೂ ಇದೆ. ಹೀಗೆ ಕರ್ನಾಟಕದ ಪ್ರೇಕ್ಷಕರ ಹಣ ಪರರಾಜ್ಯಗಳ, ಪರಭಾಷಾ ನಿರ್ಮಾಪಕರ ಪಾಲಾಗುತ್ತಿದೆ. ಇದನ್ನು ಕನ್ನಡ ಚಿತ್ರರಂಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆರಂಭದಿಂದಲೂ ವಿರೋಧಿಸುತ್ತಾ ಬಂದಿದ್ದು, ಈ ಬಾರಿ ಕರ್ನಾಟಕದಲ್ಲಿ ನಿರ್ದಿಷ್ಟ ಟಿಕೆಟ್‌ ಬೆಲೆ ನಿಗದಿಪಡಿಸಲೇಬೇಕು ಎಂಬ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ಮುಂದಾಗಿದೆ.

Advertisement

ಬೇರೆ ರಾಜ್ಯಗಳಲ್ಲಿ ಕಡಿಮೆ ದರ: ಕರ್ನಾಟಕದ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಟಿಕೆಟ್‌ ದರ ಕಡಿಮೆಯೇ ಇದೆ. 150-200 ರೂಪಾಯಿಗಿಂತ ಹೆಚ್ಚಿಲ್ಲ. ಆದರೆ ಕರ್ನಾಟಕದಲ್ಲಿ ಅನ್ಯ ಭಾಷಾ ಸಿನಿಮಾಗಳು ಬಿಡುಗಡೆಯಾದಾಗ 1500 ರೂ ಗಳಿಂದ 2000 ರೂ ಗಳವರೆಗೂ ಟಿಕೆಟ್‌ ಬೆಲೆ ಹೆಚ್ಚಿಸಲಾಗುತ್ತಿದೆ. ಇದರ ಲಾಭ ಮಲ್ಟಿಪ್ಲೆಕ್ಸ್‌ ಹಾಗೂ ಪರಭಾಷಾ ನಿರ್ಮಾಪಕರು ತಿನ್ನುತ್ತಿದ್ದಾರೆಯೇ ಹೊರತು ಕರ್ನಾಟಕಕ್ಕೆ ಯಾವುದೇ ಲಾಭವಿಲ್ಲ. ಇದರ ಜೊತೆಗೆ ಸಾಮಾನ್ಯ ಕುಟುಂಬವೊಂದು ಜೊತೆಯಾಗಿ ಸಿನಿಮಾ ನೋಡಬೇಕೆಂಬ ಕನಸು ಕೂಡಾ ಈಡೇರುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನಿಟ್ಟುಕೊಂಡು ಈಗ ಸ್ಯಾಂಡಲ್‌ವುಡ್‌ ಏಕರೂಪ ಟಿಕೆಟ್‌ ದರಕ್ಕೆ ಒತ್ತಾಯಿಸುತ್ತಿದೆ.

2017ರಿಂದಲೇ ಹೋರಾಟ: ಏಕರೂಪ ಟಿಕೆಟ್‌ ದರದ ಕುರಿತಾಗಿ ಸ್ಯಾಂಡಲ್‌ವುಡ್‌ 2017ರಲ್ಲೇ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಟಿಕೆಟ್‌ ದರವನ್ನು 200 ರೂಪಾಯಿ ನಿಗದಿ ಮಾಡುವಂತೆ ಮನವಿ ಮಾಡಿತ್ತು. ಮುಖ್ಯಮಂತ್ರಿಗಳು ಟಿಕೆಟ್‌ ದರವನ್ನು 200 ರೂಪಾಯಿ ನಿಗದಿ ಮಾಡಿ ಆದೇಶ ಹೊರಡಿಸಿದ್ದರು ಕೂಡಾ. ಆದರೆ, ಈ ಆದೇಶ ಗೃಹ ಇಲಾಖೆಯಿಂದ ಬರುವ ಬದಲು ವಾರ್ತಾ ಇಲಾಖೆಯಿಂದ ಬಂದಿತ್ತು. ವಾರ್ತಾ ಇಲಾಖೆಯಿಂದ ಬಂದಿದ್ದರಿಂದ ಥಿಯೇಟರು ಮಾಲೀಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರು. ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುವುದರಿಂದ ಹಿಂದೆ ಆಗಿರುವ ತಪ್ಪನ್ನು ಅವರ ಬಳಿ ಹೇಳಿಕೊಂಡು, ಕೂಡಲೇ ಸ್ಪಂದಿಸಿ ಗೃಹ ಇಲಾಖೆಯಿಂದಲೇ ಆದೇಶ ಹೊರಡಿಸುವಂತೆ ಮನವಿ ಮಾಡಲು ಕನ್ನಡ ಚಿತ್ರರಂಗದ ನಿಯೋಗ ಮುಂದಾಗಿದೆ.

ನವೆಂಬರ್‌ 15ರ ಗಡುವು: ಕರ್ನಾಟಕದಲ್ಲಿ ಏಕರೂಪ ಟಿಕೆಟ್‌ ದರ ಆದೇಶಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಶೀಘ್ರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ. ನವೆಂಬರ್‌ 15ರೊಳಗಾಗಿ ಆದೇಶ ಮಾಡದೇ ಹೋದರೆ ರಾಜ್ಯವ್ಯಾಪಿ ಈ ಕುರಿತು ಹೋರಾಟ ಮಾಡುವುದಾಗಿ ಎಚ್ಚರಿಸಿದೆ.

ಈ ಕುರಿತು ಮಾತನಾಡುವ ನಿರ್ಮಾಪಕ ಸಾ.ರಾ.ಗೋವಿಂದು, ವಿತರಕರಿಗೆ ಈಗಲೇ ಹೇಳುತ್ತೇವೆ, ಬೇರೆ ಭಾಷೆ ಸಿನಿಮಾಗೆ ಹೆಚ್ಚು ದುಡ್ಡು ಕೊಟ್ಟು ತರಬೇಡಿ. ಮುಂದೆ ಟಿಕೆಟ್‌ ದರ 200 ರೂಪಾಯಿ ಆಗುತ್ತದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ 180, 150 ಟಿಕೆಟ್‌ ದರ ಇದ್ದರೆ ಇಲ್ಲಿ 1200 ರೂಪಾಯಿ ಇದೆ. ಪುಷ್ಪ 2 ಚಿತ್ರಕ್ಕೆ 200 ರೂಪಾಯಿಗಿಂತ ಜಾಸ್ತಿ ದರ ಇಟ್ಟರೆ ಅದರಿಂದ ದೊಡ್ಡ ತೊಂದರೆ ಆಗಲಿದೆ. ಥಿಯೇಟರ್‌ಗಳಿಗೆ ಮುತ್ತಿಗೆ ಹಾಕಲಾಗುತ್ತದೆ. ಮಲ್ಟಿಪ್ಲೆಕ್ಸ್‌ನಲ್ಲಿ ರಜನಿಕಾಂತ್‌ ಚಿತ್ರಕ್ಕೆ 6 ಸ್ಕ್ರೀನ್‌ ಕೊಟ್ಟರೆ ಕನ್ನಡ ಸಿನಿಮಾಗೆ 2 ಶೋ ಕೊಡಲಾಗಿತ್ತು. ಟಿಕೆಟ್‌ ಬೆಲೆ 1500 ರೂಪಾಯಿ ನಿಗದಿ ಮಾಡಿದ್ದರು’ ಎಂದಿದ್ದಾರೆ.

Advertisement

ಪುಷ್ಪ ಮೇಲೆ ಎಫೆಕ್ಟ್ : ಸದ್ಯ ಪರಭಾಷೆಯ ಚಿತ್ರಗಳ ವಿಷಯಕ್ಕೆ ಬರುವುದಾದರೆ ಅಲ್ಲು ಅರ್ಜುನ್‌ ನಟನೆಯ “ಪುಷ್ಪ-2′ ಮೇಲೆ ಭರ್ಜರಿ ನಿರೀಕ್ಷೆ ಇದೆ. ಎಲ್ಲಾ ರಾಜ್ಯಗಳು ಈ ಚಿತ್ರಕ್ಕೆ ದೊಡ್ಡ ಮೊತ್ತ ಕೊಟ್ಟು ವಿತರಣಾ ಹಕ್ಕು ಪಡೆಯುತ್ತಿವೆ. ಇದರಲ್ಲಿ ಕರ್ನಾಟಕ ಕೂಡಾ ಸೇರಿದೆ. ಆದರೆ, ಸದ್ಯ ಏಕರೂಪ ಟಿಕೆಟ್‌ ದರ ಹೋರಾಟ ಹೆಚ್ಚಿರುವುದರಿಂದ ಇದು ಪುಷ್ಪ ಮೇಲೆ ನೇರ ಪರಿಣಾಮ ಬೀರಲಿದೆ. ಈ ಕುರಿತು ಮಾತನಾಡುವ ನಿರ್ಮಾಪಕ ಟೆ.ಶಿ. ವೆಂಕಟೇಶ್‌, “ನವೆಂಬರ್‌ 15ರೊಳಗೆ ಸರ್ಕಾರದ ಆದೇಶ ಹೊರಡಿಸದೇ ಹೋದರೆ ತೆಲುಗಿನ ಪುಷ್ಪ ಚಿತ್ರವನ್ನು ರಿಲೀಸ್‌ ಮಾಡಲು ಬಿಡುವುದಿಲ್ಲ. 200 ರೂಪಾಯಿ ಟೆಕೆಟ್‌ ದರ ನಿಗದಿ ಮಾಡಿದರೆ ಮಾತ್ರ ಪುಷ್ಪ ಸಿನಿಮಾ ರಿಲೀಸ್‌ ಮಾಡಬಹುದು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next