Advertisement

ನಿಯಮ ಮೀರಿ ಪರಿಸರ ಹಾಳು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ

10:32 AM Feb 20, 2022 | Team Udayavani |

ಹುಮನಾಬಾದ:  ಗಡವಂತಿ ಹಾಗೂ ಮಾಣಿಕನಗರ ವ್ಯಾಪ್ತಿಯ ಅಂತರ್ಜಲ ಹಾಳು ಮಾಡುತ್ತಿರುವ ಕೆಮಿಕಲ್ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಒತ್ತಾಯಿಸಿದರು.

Advertisement

ಶನಿವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ವಿವಿಧ ಕಾರ್ಖಾನೆಗಳ ತ್ಯಾಜ್ಯ ನೇರವಾಗಿ ಹೊರಬೀಳುತ್ತಿರುವ ಕಾರಣ ಹಳ್ಳಕೊಳ್ಳಗಳು ಸಂಪೂರ್ಣ ಕಲ್ಮಷಗೊಂಡಿದ್ದು,  ಹಳ್ಳದಲ್ಲಿನ ನೀರು ವಿಷವಾಗಿ ಪರಿವರ್ತನೆಯಾಗುತ್ತದೆ. ಮೀನು ಹಾವುಗಳು ಮೃತಪಟ್ಟಿವೆ. ನೀರು ಗಬ್ಬುನಾರುತ್ತಿದ್ದು, ಸುತ್ತಲಿನ ಪರಿಸರ ಹಾಳಾಗುತ್ತಿದೆ. ಎರಡು ಗ್ರಾಮದಲ್ಲಿನ ಜನರಿಗೆ ಚರ್ಮರೋಗ ಸೇರಿದಂತೆ ಇತರೆ ರೋಗಭಾದೆಗಳು ಕಾಡುತ್ತಿವೆ. ಗ್ರಾಮದಲ್ಲಿನ ಜನರ ಜೀವ ಹಾನಿ ಸಂಭವಿಸುವ ಮುನ್ನ ಕಾನೂನು ಗಾಳಿಗೆ ತೂರುತ್ತಿರುವ ಕಾರ್ಖಾನೆಗಳು ಬಂದ್ ಮಾಡಿಸುವ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸ್ಥರ ಸಮಸ್ಯೆ  ಆಲಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು, ಈ ಕುರಿತು ಸಂಬಂಧಿಸಿದ  ಇಲಾಖೆಗಳ ಅಧಿಕಾರಿಗಳನ್ನು ಸೋಮವಾರ ಗ್ರಾಮಕ್ಕೆ ಕಳುಹಿಸುತ್ತೇನೆ. ನುರಿತ ತಜ್ಞರನ್ನು ಕೂಡ ಭೇಟಿ ಮಾಡುವಂತೆ ಸೂಚಿಸುತ್ತೇನೆ. ಯಾವ ಕಾರ್ಖಾನೆಗಳು ಪರಿಸರ ಹಾನಿ ಉಂಟು ಮಾಡುತ್ತಿವೆ ಎಂದು ತಿಳಿದುಕೊಂಡು ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಜಯಶ್ರೀ ಸೇರಿದಂತೆ ಗಡವಂತಿ ಹಾಗೂ ಮಾಣಿಕ್ ನಗರದ ಗ್ರಾಮಸ್ಥರು ಇದ್ದರು.

 

-ವರದಿ : ದುರ್ಯೋಧನ ಹೂಗಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next