ಬಂಗಾರಪೇಟೆ: 24 ಗಂಟೆಯಲ್ಲಿ ಜಿಲ್ಲಾದ್ಯಂತ ಅಕಾಲಿಕ ಮಳೆ ಸೃಷ್ಟಿ ಮಾಡುತ್ತಿರುವ ಅವಾಂತರಗಳಿಂದ ರೈತರು ಬೆಳೆದ ಮಾವು, ಟೊಮೆಟೋ ಹೂ, ಮತ್ತಿತರ ವಾಣಿಜ್ಯ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹಾಕಿದ ಬಂಡವಾಳ ಕೈಗೆ ಸಿಗದೆ, ರೈತರಿಗೆ ನಷ್ಟವಾಗಿದ್ದು, ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಪಟ್ಟಣದ ತೋಟಗಾರಿಕೆ ಇಲಾಖೆ ಅಧಿಕಾರಿ ವಿಶ್ವನಾಥ್ ರಿಗೆ ಮನವಿ ನೀಡಿ ಮಾತನಾಡಿದರು. ತಾಲೂಕಿನ ಬೂದಿಕೋಟೆ ಹಾಗೂ ಕಾಮಸಮುದ್ರ ಹೋಬಳಿಯಲ್ಲಿ ಸೋಮವಾರ ರಾತ್ರಿ ಬಿದ್ದ ಅಕಾಲಿಕ ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎಂದರು.
ಬೆಳೆ ಸಮೀಕ್ಷೆಯಲ್ಲಿ ಅಧಿಕಾರಿಗಳ ವೈಫಲ್ಯವಾಗುತ್ತಿದ್ದು, ಪ್ರತಿ ಸಾರಿ ಅತಿವೃಷ್ಟಿ, ಅನಾವೃಷ್ಟಿ ಪ್ರಕೃತಿ ಕೋಪಗಳಿಂದ ರೈತರ ಬೆಳೆಗಳು ನಾಶವಾದಾಗ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕಾದ ಬೆಳೆನಷ್ಟ ಪರಿಹಾರದ ವರದಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೆಳೆ ಸಮೀಕ್ಷೆ ಪೂರ್ಣಗೊಳಿಸದೆ, ಪರಿಹಾರವನ್ನೂ ನೀಡದೆ, ಅಕ್ರಮ ನಡೆಸುತ್ತಿದ್ದಾರೆ. ರೈತರ ಬೆಳೆ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡದೆ ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಕೃಷಿ ಕ್ಷೇತ್ರದ ರಸಗೊಬ್ಬರ ಔಷಧಿ ಹಾಗೂ ಕೂಲಿ ಇದರ ಮಧ್ಯೆ ಬೆಳೆದ ಟೊಮೆಟೋ ಮತ್ತಿತರ ಬೆಳೆಗಳಿಗೆ 2- 3 ಲಕ್ಷ ಖರ್ಚು ಬರುತ್ತದೆ. ಆದರೆ ನಷ್ಟವಾದಾಗ ಸರ್ಕಾರ ಲಾಭ ನಷ್ಟದ ಲೆಕ್ಕಾಚಾರ ಪಡೆಯದೇ ಪ್ರತಿ ಹೆಕ್ಟರ್‌ಗೆ 6 ಸಾವಿರದಿಂದ 10 ಸಾವಿರ ನೀಡುವ ಮೂಲಕ ಕೈತೊಳೆದುಕೊಳ್ಳುತ್ತಿದೆ. ಈ ಪರಿಹಾರ ಔಷಧಿಗೂ ಸಹ ಸಾಕಾಗುತ್ತಿಲ್ಲ. ಕನಿಷ್ಟ ಪಕ್ಷ ಪ್ರತಿ ಎಕರೆಗೆ 3 ಲಕ್ಷ ಪರಿಹಾರ ನೀಡಿದರೆ ಮಾತ್ರ ರೈತರಿಗೆ ಹಾಕಿದ ಬಂಡವಾಳ ಕೈಗೆ ಸಿಗುತ್ತದೆಂದು ಸಲಹೆ ನೀಡಿದರು. ಕೊರೊನಾ ಸಂದರ್ಭದಲ್ಲಿ ಸರ್ಮಪಕವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ತೋಟದಲ್ಲೇ ಬೆಳೆ ನಾಶವಾದಾಗ ಸರ್ಕಾರ ಪ್ರತಿ ಹೆಕ್ಟರ್‌ಗೆ 6000 ದಿಂದ 10 ಸಾವಿರ ರೂ. ಘೋಷಣೆ ಮಾಡಿದ ಪರಿಹಾರವೇ ಇನ್ನು ರೈತರಿಗೆ ಸಿಕ್ಕಿಲ್ಲ. ರೈತರು ಇಲಾಖೆಗಳ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಅಧಿಕಾರಿ ವಿಶ್ವನಾಥ್ ಅಕಾಲಿಕ ಮಳೆಯಿಂದ ಜಿಲ್ಲಾದ್ಯಂತ ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಮರಗಲ್ ಮುನಿಯಪ್ಪ, ರೈತಸಂಘದ ಜಿಲ್ಲಾಧ್ಯಕ್ಷ ಕಿರಣ್, ತಾಲೂಕು ಅಧ್ಯಕ್ಷ ಚಲಪತಿ, ಮುನಿಕೃಷ್ಣ. ರಾಮಸಾಗರ ವೇಣು, ಸಂದೀಪ್ ರೆಡ್ಡಿ, ಮಾಲೂರು ಅಧ್ಯಕ್ಷ ಯಲ್ಲಣ್ಣ, ಮುಳ ಬಾಗಿಲು ಅಧ್ಯಕ್ಷ ಪ್ರಭಾಕರ್, ಪುತ್ತೇರಿ ರಾಜು, ಯುವ ರೈತ ಮುಖಂಡ ಈಶ್ವರ್, ಕೋಲಾರ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ವಕ್ಕಲೇರಿ ಹನುಮಯ್ಯ ಇತರರಿದ್ದರು.