ನೆಲಮಂಗಲ: ತ್ರಿಭಾಷಾ ಸೂತ್ರದ ಅನ್ವಯ ಬ್ಯಾಂಕ್‌ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಬೇಕು ಎಂದು ಕನ್ನಡ ಸಾಂಸ್ಕೃತಿಕ ರಂಗದ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿಯ ಆವರಣದಲ್ಲಿ ಕನ್ನಡ ಸಾಂಸ್ಕೃತಿಕ ರಂಗದ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡುವಂತೆ ಆಗ್ರಹಿಸಿದರು.
ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ, ಬ್ಯಾಂಕ್‌ಗೆ ಬರುವ ವೃದ್ಧರು, ಕನ್ನಡ ಭಾಷೆ ಮಾತ್ರ ತಿಳಿದವರು ಬ್ಯಾಂಕ್‌ಗಳಲ್ಲಿಹಿಂದಿ, ಆಂಗ್ಲಭಾಷೆ ಬಾರದೇ ಪರದಾಡುವಂತಾಗಿದೆ. ನಮ್ಮ ರಾಜ್ಯದ ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡುವ ಕೆಲಸಗಾರರು, ಅಧಿಕಾರಿಗಳಿಲ್ಲ ಇದರಿಂದ ಅನ್ಯರಾಜ್ಯದ ಬ್ಯಾಂಕ್‌ಗಳಂತೆ ಕಂಡುಬರುತ್ತಿದ್ದು, ಚಲನ್ ಸೇರಿದಂತೆ ಮಾಹಿತಿ ಕರಪತ್ರಗಳಲ್ಲಿಯೂ ಕನ್ನಡವನ್ನು ನಿರ್ಲಕ್ಷ್ಯ ಮಾಡಿರುವುದುಖಂಡನೀಯ. ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಜತೆಗೆ ತ್ರಿಭಾಷಾ ಸೂತ್ರದ ಅನ್ವಯ ಕನ್ನಡವನ್ನು ಕಡ್ಡಾಯ ಮಾಡಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ದೇಶದ ವಿವಿಧ ರಾಜ್ಯದ ವ್ಯಕ್ತಿಗಳು ಸಹಬ್ಯಾಂಕ್ ಪರೀಕ್ಷೆ ಎದುರಿಸುವುದರಿಂದ ಭಾಷೆ ಸಮಸ್ಯೆ ಎದುರಾಗಿರುತ್ತದೆ. ಇದರಿಂದ ಕನ್ನಡಪರ ಸಂಘಟನೆಗಳು ಪ್ರತಿಭಟನೆಮಾಡುವುದಕ್ಕಿಂತ ಬ್ಯಾಂಕ್ ತರಬೇತಿಯ ಸಮಯದಲ್ಲಿ ಕನ್ನಡ ಕಲಿಸುವಂತೆ ಮನವಿ ನೀಡಿ ಅಥವಾ ಕನ್ನಡ ಕಲಿಸುವ ಪ್ರಯತ್ನ ಮಾಡಿ, ಪ್ರತಿಭಟನೆ ಮಾಡಿದರೇ ಪ್ರಯೋಜನವಿಲ್ಲ ಎಂದರು.
ಶಿರಸ್ತೇದಾರ್ ಶ್ರೀನಿವಾಸಮೂರ್ತಿ, ಕುವೆಂಪು ಪತ್ತಿನ ಸಹಕಾರ ಸಂಘದ ಅಧ್ಯಕ್ಷಎಚ್.ಜಿ ರಾಜು, ಎಪಿಎಂಸಿ ನಿರ್ದೇಶಕ ಬೂದಿಹಾಳ್ ಗೋವಿಂದರಾಜು, ನಮ್ಮ ಜನಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ನರಸಿಂಹಯ್ಯ, ಕನ್ನಡಗರ ಧ್ವನಿ ರಾಜ್ಯಾಧ್ಯಕ್ಷ ಮಲ್ಲೇಶ್, ಕಸಾರಂ ಪ್ರಧಾನ ಕಾರ್ಯದರ್ಶಿ ಎನ್.ಶಿವಕುಮಾರ್, ಕಾರ್ಯದರ್ಶಿ ಗಿರಿಧರ್, ಮುಖ್ಯಸಲಹೆಗಾರ ಗಿರಿಧರ್, ಎನ್.ಎಸ್‌ಮೂರ್ತಿ, ಆನಂದ್‌ಮೌರ್ಯ, ಗಂಗಾಧರ್, ನಾಗೇಶ್, ಲಕ್ಷ್ಮೀನಾರಾಯಣಶೆಟ್ಟಿ, ಶಿವಶಂಕರ್, ರವೀಂದ್ರಕೋಟೆ ಇತರರಿದ್ದರು.