ಯಲ್ಲಾಪುರ: ನಾಥ ಪಂಥ ಜೋಗಿ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ನಾಥಪಂಥ ಜೋಗಿ ಸಮುಜ ಸೇವಾ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಅವರನ್ನು ಆಗ್ರಹಿಸಲಾಯಿತು.
ಈ ಕುರಿತು ಸಂಘದ ಪದಾಧಿಕಾರಿಗಳು ಯಲ್ಲಾಪುರ ಕಾರ್ಯಾಲಯದಲ್ಲಿ ಸಚಿವರನ್ನು ಸಮಾಜದ ವತಿಯಿಂದ ಗೌರವಿಸಿ, ವಿವಿಧ ಬೇಡಿಕೆಗಳ ಮನವಿ ನೀಡಿದರು. ಸಲ್ಲಿಸಿದ ಮನವಿಯಲ್ಲಿ, ಜೋಗಿ ಸಮುದಾಯ ಜಿಲ್ಲೆಯಲ್ಲಿಅನೇಕ ವರ್ಷಗಳಿಂದ ವಾಸವಾಗಿದ್ದು ಇರುತ್ತದೆ. ಅಲೆಮಾರಿ ಜನಾಂಗದವರಾದ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದೆ ಇದ್ದೇವೆ. ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಜನಾಂಗವನ್ನು ಹಿಂದುಳಿದ ಆಯೋಗವು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರಕಾರಕ್ಕೆ ಮನವಿ ಸಲ್ಲಿಸಿದರೂ ಈ ವರೆಗೂ ಅದು ಸಾಧ್ಯವಾಗಿಲ್ಲ. ಕಾರಣ ನಮ್ಮ ಜನಾಂಗವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಬೇಕು. ಜೋಗಿ ಸಮಾಜದ ಬಹುತೇಕರು ನಿರಾಶ್ರಿತರಾಗಿದ್ದು, ಈ ಬಗ್ಗೆ ಗಮನಹರಿಸಿ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು.
ಶಿರಸಿಯ ಅಚನಳ್ಳಿ ಗ್ರಾಮದಲ್ಲಿ ಜೋಗಿ ಸಮಾಜದ ಕಾಲನಿಗೆಂದು ಮಂಜೂರಾದ ಭೂಮಿಯಲ್ಲಿ ಜೋಗಿ ಸಮುದಾಯದ ಜನಪದ ಕಲಾ ಭವನ ನಿರ್ಮಿಸಿಕೊಡಬೇಕು. ಎಲ್ಲಾ ತಾಲೂಕುಗಳಲ್ಲೂ ಸಮಾಜ ಬಾಂಧವರಿಗಾಗಿಸಮುದಾಯ ಭವನ ನಿರ್ಮಿಸಿಕೊಡಬೇಕು. ಅಲೆಮಾರಿ ಜನಾಂಗದ ಹೆಣ್ಣು ಮಕ್ಕಳಿಗಾಗಿ ಸರಕಾರಿ ನೌಕರಿಯಲ್ಲಿ ಶೇ.1 ಮೀಸಲಾತಿ ನೀಡಬೇಕು.
ಹೊನ್ನಾವರ ತಾಲೂಕಿನ ಹೊಸಕುಳಿ ಗ್ರಾಮದ ಸರ್ವೆ ನಂ.214/ಎ/ಎ/ಎ/ಎ ಕಂದಾಯ ಹಕ್ಕಿನ ಜಾಗೆಯನ್ನು ನಮ್ಮ ಸಮಾಜಕ್ಕೆ ಮಂಜೂರಿ ಮಾಡಿಕೊಡಬೇಕು. ಮುರ್ಡೇಶ್ವರ ಸರ್ವೆ ನಂ 731 ಮತ್ತು ಸರ್ವೆ ನಂ 782 ಗಳಲ್ಲಿ ನೂರಾರು ಎಕರೆ ಸರ್ಕಾರಿ ಜಾಗ ಇದ್ದು, ಇದರಲ್ಲಿ 2 ಎಕರೆ ಸ್ಥಳವನ್ನು ನಮ್ಮ ಸಮಿತಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಸಂಘದ ಅಧ್ಯಕ್ಷ ಶಿವರಾಮ ಬಳೆಗಾರ ಮುರ್ಡೇಶ್ವರ, ಜಿಲ್ಲಾ ಕೋಶಾಧ್ಯಕ್ಷ ಗಣಪತಿ ಜೋಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಜೋಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ ಜೋಗಿ, ಜಿಲ್ಲಾಕಾರ್ಯದರ್ಶಿ ಭರತೇಶ್ ಜೋಗಿ ಪ್ರಮುಖರಾದ ಪ್ರಕಾಶ ಜೋಗಿ ಮುಂತಾದವರು ಇದ್ದರು.