ಮುಳಬಾಗಿಲು: ಭೂ ಪರಿವರ್ತನೆ ಇಲ್ಲದೇ ಅಕ್ರಮವಾಗಿ ಮದ್ಯದ ಅಂಗಡಿಗಳನ್ನು ತಾಲೂಕಿನ ಆಂಧ್ರ ಪ್ರದೇಶದ ಗಡಿ ಗ್ರಾಮಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಖೀಲ ಭಾರತ ಕಿಸಾನ್ ಮಂಚ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್ ಆರೋಪಿಸಿದರು.
ಮಂಗಳವಾರ ತಾಲೂಕಿನ ಹೆಬ್ಬಣಿ ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳ ಜನರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.
ರೈತರ ಜಮೀನುಗಳಿಗೆ ಹಾನಿ: ಇತ್ತೀಚೆಗೆ ಜಿಲ್ಲೆಯ ಕೆಲವು ಪ್ರಭಾವಿ ವ್ಯಕ್ತಿಗಳು ಕೋಲಾರದ ತಮ್ಮ ಬಾರ್‌ಗಳನ್ನು ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಪಂ ವ್ಯಾಪ್ತಿಯ ಕಿರಮಣಿಮಿಟ್ಟ, ಎಂ.ಗೊಲ್ಲಹಳ್ಳಿ ಗ್ರಾಮದ ಆಂಧ್ರದ ಗಡಿ, ಹೆ.ಬೈಪನಹಳ್ಳಿ ಗ್ರಾಮದ ಆಂಧ್ರದ ಗಡಿಗಳಲ್ಲಿ ಕೃಷಿ ಜಮೀನುಗಳಲ್ಲಿ ಭೂ ಪರಿವರ್ತನೆ ಮಾಡದೇ ಬಾರ್ ಲೈಸೆನ್ಸ್‌ಗಳನ್ನು ವರ್ಗಾವಣೆ ಮಾಡಿಸಿ ಬಾರ್‌ಗಳನ್ನು ನಿರ್ಮಿಸಿ ಮದ್ಯದ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸುತ್ತಲಿನ ಹಳ್ಳಿಗಳಿಗೆ ಮತ್ತು ಅಲ್ಲಿನ ರೈತರ ಜಮೀನುಗಳಿಗೆ ಹೆಚ್ಚು ಹಾನಿಯನ್ನು ಉಂಟು ಮಾಡುತ್ತಿದ್ದಾರೆಂದು ಆರೋಪಿಸಿದರು.
ಸದರಿಬಾರ್‌ಮಾಲೀಕರುಹೆಬ್ಬಣಿ ಗ್ರಾಮ ಪಂಚಾಯಿತಿಯಲ್ಲಿ ಉಪಾಹಾರ ಮಂದಿರಕ್ಕೆಂದು ಪರವಾನಿಗೆ ಪಡೆದು ಬಾರ್‌ಗಳನ್ನು ನಿರ್ಮಿಸಿ ಕೊಂಡಿದ್ದಾರೆ. ಈಗಾಗಲೇ ಗ್ರಾ.ಪಂ. ವ್ಯಾಪ್ತಿಯ13 ಹಳ್ಳಿಗಳಲ್ಲಿ2 ಸಾವಿರ ಕುಟುಂಬಗಳಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ವಾಸವಾಗಿದ್ದು, ಅದಕ್ಕೆ ತಕ್ಕಂತೆ ಹಲವು ವರ್ಷಗಳ ಹಿಂದೆಯೇ ಮೂರು ಬಾರ್‌ಗಳನ್ನು ತೆರೆಯಲಾಗಿದ್ದರೂ ಇಷ್ಟು ಜನರ ಆರೋಗ್ಯ ಕಾಪಾಡಲು ಒಂದೇ ಒಂದು ಪ್ರಾಥಮಿಕ ಆರೋಗ್ಯಕೇಂದ್ರ ಇದೆ. ಸದರಿ ವ್ಯಾಪ್ತಿಯಲ್ಲಿಯೇ 400 ಕುಟುಂಬಕ್ಕೆ ಒಂದು ಬಾರ್‌ನಂತೆ ಈಗಿರುವ ಮೂರು ಬಾರ್‌ಗಳು ಸಾಲದೆಂಬಂತೆ ಮತ್ತೆ ಮೂರು ಬಾರ್‌ಗಳನ್ನು ತೆರೆದು ಜನರ ಆರೋಗ್ಯ ಹಾಳು ಮಾಡುತ್ತಾ ಹಣ ಮಾಡಲು ಹೊರ ಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರಲ್ಲದೇ ತಹಶೀಲ್ದಾರ್ ರಾಜಶೇಖರ್ ಮತ್ತು ಅಬಕಾರಿ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಕಿಸಾನ್ ಮಂಚ್ ಜಿಲ್ಲಾಧ್ಯಕ್ಷ ಮಲ್ಲೆಕುಪ್ಪ ಅಂಬರೀಶ್, ಸೌಟೂರು ವೆಂಕಟರಾಮಪ್ಪ, ವಕೀಲ ಸದಾ ಶಿವ, ಕಸುವುಗಾನಹಳ್ಳಿ ವೆಂಕಟರಾಮ್, ಜಯ ರಾಮ್, ಅಮರ ಸೇರಿದಂತೆ ಹಲವಾರು ಜನರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಾರ್‌ಗಳಿಗೆಬೀಗ : ಮುಖಂಡರ ಪ್ರತಿಭಟನೆಗೆ ಬೆಚ್ಚಿ ಬಿದ್ದ ಅಧಿಕಾರಿಗಳು, ಸದರಿ ಜಮೀನು ಕಂದಾಯ ಇಲಾಖೆ ಪಿ.ನಂಬರ್ ಆಗಿದ್ದು, ಭೂ ಪರಿವರ್ತನೆ ಮಾಡಿಸದೇ ಹೇಗೆ ಬಾರ್ ನಿರ್ಮಿಸಿದ್ದೀರಿ ಕೂಡಲೇ ಮುಚ್ಚುವಂತೆ ಅಬಕಾರಿ ನಿರೀಕ್ಷಕ ಚಿರಂಜೀವಿಗೆ ತಹಶೀಲ್ದಾರ್ ರಾಜಶೇಖರ್ ಸೂಚಿಸಿದರಲ್ಲದೇ ಬಾರ್‌ಗಳಿಗೆ ಬೀಗ ಜಡಿದರು.