ಮಂಡ್ಯ: ಪ್ರಸ್ತುತ ಬೇಸಿಗೆ ಬೆಳೆಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸಲು ರಾಜ್ಯಸರ್ಕಾರ ತುರ್ತು ಕ್ರಮ ವಹಿಸಬೇಕು ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯತ್ತಗದಹಳ್ಳಿ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಡಕ್ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹಾಲಿ ಕೃಷ್ಣರಾಜಸಾಗರ ಜಲಾಶಯದಲ್ಲಿ 118 ಅಡಿ ನೀರಿದೆ.
ಆದರೂ ನಾಲೆಗಳಿಗೆ ನೀರು ಹರಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆಗಾಗಲೇ ಬೇಸಿಗೆ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಂಡು ವೇಳಾಪಟ್ಟಿ ಪ್ರಕಟಿಸಬೇಕಿತ್ತು. ರೈತರ ಹಿತದ ಬಗ್ಗೆ ಸರ್ಕಾರ ಇದುವರೆಗೂ ಚಿಂತನೆಯನ್ನೇ ನಡೆಸಿಲ್ಲ. ಕೂಡಲೇ ನಾಲೆಗಳಿಗೆ ನೀರು ಹರಿಸುವ ಸಂಬಂಧ ಶಾಸಕರು ಹಾಗೂ ಅಧಿಕಾರಿಗಳ ಸಭೆ ಕರೆದು ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ರೈತರ ಹಿತ ಕಾಪಾಡಿ: ಬೇಸಿಗೆ ಬೆಳೆಗೆ ನೀರು ಹರಿಸುವರೆಂಬ ಆಶಾಭಾವನೆಯಲ್ಲಿ ರೈತರು ಬಿತ್ತನೆಯ ಸಿದ್ಧತೆ ನಡೆಸಿದ್ದಾರೆ. ಈ ವಿಷಯದಲ್ಲಿ ಸರ್ಕಾರದ ಮೌನ ರೈತರನ್ನು ಗೊಂದಲಕ್ಕೆ ಸಿಲುಕಿಸಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರೈತರ ಬೆಳೆಗಳಿಗೆ ನೀರು ಹರಿಸುವ ದಿಟ್ಟ ನಿರ್ಧಾರ ಕೈಗೊಂಡ ಮಾದರಿಯಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ನೀರು ಹರಿಸುವ ಕುರಿತು ನಿರ್ಲಕ್ಷ್ಯ ಮಾಡದೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಮೂಲಕ ಜಿಲ್ಲೆಯ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
13 ಕೋಟಿ ರೂ.ಗೆ ತಡೆ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಮಯದಲ್ಲಿ ಬೇಲೂರು ಪಂಚಾಯಿತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 13 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಟೆಂಡರ್ ಪ್ರಕ್ರಿಯೆಯೆಲ್ಲಾ ಮುಗಿದು ಗುತ್ತಿಗೆದಾರರ ಇಎಂಡಿ ಹಣವನ್ನೂ ಪಾವತಿಸಿದ್ದರು. ಸರ್ಕಾರ ಬದಲಾವಣೆಯಾದ ಕೂಡಲೇ ಈ ಅನುದಾನಕ್ಕೆ ತಡೆ ಬಿದ್ದಿತು. ಈ ವಿಷಯವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ಬಜೆಟ್ ನಂತರ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿರುವುದಾಗಿ ತಿಳಿಸಿದರು.
ರೈತರಿಗೆ ಅನುಕೂಲ: ಈ ಹಣ ಬಿಡುಗಡೆಯಾದಲ್ಲಿ ರಸ್ತೆ, ಸೇತುವೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ದೊರೆತು ಈ ಭಾಗದ ಗ್ರಾಮಗಳು ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ. ಪಂಚಾಯಿತಿ ವ್ಯಾಪ್ತಿಯ ನೀರಾವರಿ ಕಾಮಗಾರಿಗೆ 20 ಲಕ್ಷ ರೂ. ಬಿಡುಗಡೆಯಾಗಿದ್ದು, ಅದರಿಂದಲೂ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಯತ್ತಗದಹಳ್ಳಿ ಗ್ರಾಮದ ವಿವಿಧ ನೀರಾವರಿ ಯೋಜನೆಗೆ 2ಕೋಟಿ ಅನುದಾನ ಮಂಜೂರಾಗಿದ್ದು, ಹಂತ ಹಂತವಾಗಿ ಕೈಗೆತ್ತಿಕೊಳ್ಳುವುದಾಗಿ ರವೀಂದ್ರ ಶ್ರೀಕಂಠಯ್ಯ ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಸೂನಗಹಳ್ಳಿ ಪ್ರಕಾಶ್, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯರಾಂ, ಸಹಾಯಕ ಅಭಿಯಂತರ ವಿಜಯ ದರ್ಶನ್ ಮತ್ತಿತರರಿದ್ದರು.