ಧಾರವಾಡ: ರೈತರಿಗೆ ಬೀಜ-ಗೊಬ್ಬರ, ಕಡಲೆ ಖರೀದಿಸಿದ ಹಣ, ಮೆಕ್ಕೆಜೋಳಕ್ಕೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಪರಿಹಾರ, ಗ್ರಾಪಂ ಸದಸ್ಯರ ಮುಂದುವರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನವಲಗುಂದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸರ್ಕಾರ ಬೆಂಬಲ ಬೆಲೆಯಲ್ಲಿ ರೈತರಿಂದ ಕಡಲೆ ಖರೀದಿಸಿ 3 ರಿಂದ 4 ತಿಂಗಳು ಕಳೆದರೂ ರೈತರಿಗೆ ಹಣ ಸಂದಾಯವಾಗಿಲ್ಲ. ರೈತರು ಮುಂಗಾರು ಬೆಳೆ ಬೆಳೆಯಲು ಆರ್ಥಿಕ ತೊಂದರೆಯಲ್ಲಿದ್ದು, ಅವರಿಗೆ 10 ದಿನಗಳ ಒಳಗೆ ಹಣ ಸಂದಾಯ ಮಾಡಬೇಕು. ಮೆಕ್ಕೆಜೋಳ ಬೆಳೆದ ರೈತರಿಗೆ ಪ್ರತಿ ಎಕರೆಗೆ 5ಸಾವಿರ ಪರಿಹಾರ ಘೋಷಣೆ ಮಾಡಿದ್ದು, ಇಲ್ಲಿಯವರೆಗೆ ರೈತರಿಗೆ ಪರಿಹಾರ ತಲುಪಿಲ್ಲ. ತಕ್ಷಣ ರೈತರ ಖಾತೆಗಳಿಗೆ ಹಣ ಸಂದಾಯ ಮಾಡಬೇಕು. ಬೀಡಿನ ಹತ್ತಿ ಬೆಳೆಯನ್ನು ರೈತರಿಂದ ಖರೀದಿಸಲು ಸಿಸಿಐ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಆಗ್ರಹಿಸಲಾಯಿತು.
2016ರಲ್ಲಿ ರೈತರು ಮೆಣಸಿನಕಾಯಿ ಬೆಳೆಗೆ ಬೆಳೆವಿಮೆ ತುಂಬಿದ ನಂತರ ಅಂದಾಜು 36 ಕೋಟಿ ಬೆಳೆವಿಮೆ ಕ್ಲೇಮ್ ಆಗಿ ಸಂಬಂಧಿಸಿದ ಕಂಪನಿಗೆ ಜಮಾ ಆಗಿದೆ. ಅದನ್ನು ರೈತರ ಖಾತೆಗಳಿಗೆ ಆರ್‌ಟಿಜಿಎಸ್ ಮಾಡಲು ಸಂಬಂಧಿಸಿದವರಿಗೆ ಆದೇಶಿಸಬೇಕು. ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರಿಗೆ ಸರಳೀಕೃತವಾಗಿ ಸಾಲ ನೀಡುವಂತೆ ನಿರ್ದೇಶನ ನೀಡಬೇಕು. ಅಸಂಘಟಿತ ಕಾರ್ಮಿಕ ವಲಯಕ್ಕೆ ಸರ್ಕಾರ ಘೋಷಿಸಿದಂತೆ ಪರಿಹಾರ ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳದಿದ್ದರೆ ಜೆಡಿಎಸ್ ವತಿಯಿಂದ ಹುಬ್ಬಳ್ಳಿಯಿಂದ ಧಾರವಾಡದ ವರೆಗೆ ಪಾದಯಾತ್ರೆಯೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಮಹಾನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ ಕೊರವಿ, ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸೀಮರದ, ಶಿವಶಂಕರ ಕಲ್ಲೂರ, ಅಣ್ಣಿಗೇರಿ ನಗರ ಅಧ್ಯಕ್ಷ ಭಗವಂತಪ್ಪ ಪುಟ್ಟಣ್ಣವರ, ಹುಬ್ಬಳ್ಳಿ ತಾಲೂಕಾಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಅರುಣ ಹೆಬಸೂರ, ಹಸನ ನಾಯಕವಾಡಿ, ಸಿದ್ದು ತೇಜಿ, ಹಸನ ಗಡ್ಡದ ಇನ್ನಿತರರಿದ್ದರು.
ರಾಜ್ಯ ಸರ್ಕಾರ ಗ್ರಾಪಂಗಳಿಗೆ ನಾಮ ನಿರ್ದೇಶನ ಮಾಡಲು ಮುಂದಾಗಿದ್ದು, ಪ್ರಜಾಪ್ರಭುತ್ವ ವ್ಯಸ್ಥೆಯಲ್ಲಿ ಚುನಾವಣೆ ಮೂಲಕವೇ ಗ್ರಾಪಂಗಳು ನಡೆಯಬೇಕು. ಚುನಾವಣೆ ನಡೆಯುವವರೆಗೆ ಹಾಲಿ ಇದ್ದ ಸದಸ್ಯರನ್ನೇ ಸರ್ಕಾರ ಮುಂದುವರಿಸಬೇಕು.-ಎನ್.ಎಚ್. ಕೋನರಡ್ಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್