ದೊಡ್ಡಬಳ್ಳಾಪುರ: ಒಂದು ವಾರದಿಂದಲು ತಾಲೂಕಿನಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರಾಗಿ, ಮುಸುಕಿನಜೋಳ ಸೇರಿದಂತೆ ಇತರೆ ಬೆಳೆಗೆ ಹಾಕುವ ಸಲುವಾಗಿ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, ತಾಲೂಕಿನ ರಸಗೊಬ್ಬರಗಳ ಅಂಗಡಿಗಳ ಮುಂದೆ ರೈತರು ಸಾಲುಗಟ್ಟಿ ನಿಲ್ಲುವಂತಾಗಿದೆ.
ನಗರ ಸೇರಿದಂತೆ ತಾಲೂಕಿನ ಎಲ್ಲಾ ರಸಗೊಬ್ಬರ ಮಾರಾಟದ ಅಂಗಡಿ ಗಳಲ್ಲೂ ಯೂರಿಯಾ ರಸಗೊಬ್ಬರ ದಾಸ್ತಾನು ಖಾಲಿಯಾಗಿದ್ದು, ನಗರದ ಟಿಎ ಪಿಎಂಸಿಎಸ್ ಮಾರಾಟ ಮಳಿಗೆಯಲ್ಲಿ ಮಾತ್ರ ಬುಧವಾರ 29 ಟನ್ ದಾಸ್ತಾನು ಇದೆ. ಇದರಿಂದಾಗಿ ಬುಧವಾರ ಬೆಳಗ್ಗಿನಿಂದಲೆ ನೂರಾರು ಜನ ರೈತರು ಯೂರಿಯಾ ಖರೀದಿಸಲು ಸಾಲುಗಟ್ಟಿ ನಿಂತಿದ್ದರು. ಒಬ್ಬ ರೈತರಿಗೆ ಒಂದು ಚೀಲ ಮಾತ್ರ ನೀಡಲಾಯಿತಾದರೂ ಸಹ ಸಾಲಿನಲ್ಲಿ ನಿಂತಿದ್ದ ನೂರಾರು ಜನ ರೈತರು ಯೂರಿಯಾ ದೊರೆಯದೆ ಬರಿಗೈಯಲ್ಲಿ ಹಿಂದಿರುಗುವಂತಾಯಿತು.
ನಗರದ ತಾಲೂಕು ಪಂಚಾಯಿತಿ ಯಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ರೂಪಾ, ತಾಲೂಕಿಗೆ ಈ ವರ್ಷದ ಮಳೆಗಾಲಕ್ಕೆ 569 ಟನ್ ಯೂರಿಯಾ ಬೇಕಾಗಬಹುದು ಎನ್ನುವ ಗುರಿ ಅಂದಾಜಿಸಲಾಗಿತ್ತು. ಆದರೆ ಇದುವರೆಗೆ 900ಟನ್ ಯೂರಿಯಾ ಸರಬರಾಜು ಆಗಿದೆ. ಆದರೂ ಸಹ ಇನ್ನೂ ರೈತರಿಂದ ಬೇಡಿಕೆ ಇದೆ. ಮಂಗಳೂರಿನಿಂದ ಯೂರಿಯಾ ತುಂಬಿದ ಗೂಡ್ಸ್ ರೈಲು ಬರುವುದು ವಿಳಂಬವಾಗಿರುವುದರಿಂದ ಮೂರು ದಿನಗಳ ಒಳಗೆ 150 ಟನ್ ಯೂರಿಯಾ ಬರಲಿದೆ. ಯೂರಿಯಾ ದಾಸ್ತಾನು ಕೊರತೆ ಇರುವ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕು ತರಲಾಗಿದೆ ಎಂದರು.
ಈ ಬಾರಿ ನಮ್ಮ ತಾಲೂಕನ್ನು ರಾಜ್ಯ ಸರ್ಕಾರ ಮೊದಲ ಪಟ್ಟಿಯಲ್ಲೇ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಶೇ.85ರಷ್ಟು ರಾಗಿ ಬೆಳೆ ವಿಫಲವಾಗಿದೆ. ತಾಲೂಕಿನಲ್ಲಿ ಈ ಬಾರಿಯ ಮುಂಗಾರಿನಲ್ಲಿ ಫಸಲ್ ಬಿಮಾ ಬೆಳೆ ವಿಮಾ ಯೋಜನೆಯಡಿ ರಾಗಿ, ಮುಸುಕಿನಜೋಳದ ಬೆಳೆಗೆ 16,755 ಜನ ರೈತರು ವಿಮೆ ಹಣ ಪಾವತಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಬೆಳೆ ಸಮೀ ಕ್ಷೆಯ ನಂತರ ನಷ್ಟದ ಅಂದಾಜು ಸಿಗಲಿದೆ. ಸಮೀಕ್ಷೆಯ ಆಧಾರದ ಮೇಲೆ ಬೆಳೆ ವಿಮೆ ಮಾಡಿಸಿರುವ ಎಲ್ಲಾ ರೈತರಿಗೂ ಫೆಬ್ರವರಿ ವೇಳೆಗೆ ಖಾತೆಗಳಿಗೆ ಹಣ ಜಮೆ ಯಾಗಲಿದೆ ಎಂದರು.