Advertisement
ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳ ವ್ಯಾಪ್ತಿಯಲ್ಲಿ ಸಾಲು ಸಾಲು ಹುಲಿಗಳು ಸಾವನ್ನಪ್ಪಿದ್ದು, ಅದರಲ್ಲೂ ಒಂದು ಹುಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ 300ಕ್ಕೂ ಹೆಚ್ಚು ಉರುಳು ಪತ್ತೆ ಹಚ್ಚಿದ್ದರು. ಇದರ ಬೆನ್ನಲ್ಲೇ ಮಲೆ ಮಹದೇಶ್ವರ ವನ್ಯಜೀವಿ ಪ್ರದೇಶದ ಹೂಗ್ಯಂ ವಲಯದಲ್ಲಿ ಉಪ್ಪು (ಯೂರಿಯಾ) ಬಳಸಿ ವನ್ಯಪ್ರಾಣಿಗಳನ್ನು ಬೇಟೆಯಾಡುವ ಹೊಸ ವಿಧಾನ ಪತ್ತೆಯಾಗಿದೆ.
Related Articles
Advertisement
ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರನ್ನು ಅರಸಿ ಕಾಡಂಚಿನ ಹೊಂಡಗಳು ಅಥವಾ ಅರಣ್ಯದಂಚಿನ ಗ್ರಾಮಗಳಿಗೆ ನುಗ್ಗುವ ವನ್ಯಪ್ರಾಣಿಗಳನ್ನು ಗುರಿಯಾಗಿಸಿಕೊಂಡು ಈ ವಿಧಾನ ಅನುಸರಿಸಲಾಗುತ್ತಿದೆ. ಜತೆಗೆ ವನ್ಯಪ್ರಾಣಿಗಳ ಬೇಟೆಗಾಗಿಯೇ ಅರಣ್ಯದಂಚಿನ ಗ್ರಾಮಗಳಲ್ಲಿ ಪಾಲಿಥೀನ್ ಹಾಳೆಗಳಲ್ಲಿ ತೊಟ್ಟಿ ಮಾಡಿ ನೀರು ತುಂಬಿಸಿ ಉಪ್ಪು ಸುರಿದು ಪ್ರಾಣಿಗಳನ್ನು ಆಕರ್ಷಿಸಿ, ಬೇಟೆ ಆಡಲಾಗುತ್ತಿದೆ ಎಂದು ವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಯೂರಿಯಾ ಮಿಶ್ರಿತ ನೀರು ಕುಡಿದ ವನ್ಯಪ್ರಾಣಿಗಳು 50 ಅಡಿ ದೂರ ಕೂಡ ಹೋಗಲಾರದೆ ಕುಸಿದು ಬೀಳುತ್ತದ್ದಂತೆ ಹೊತ್ತಯ್ಯಲಾಗುತ್ತಿದೆ. ಉಳಿದೆಲ್ಲ ಬೇಟೆ ವಿಧಾನಗಳಂತೆ ಹೆಚ್ಚು ಸುದ್ದಿಯಾಗದ ಈ ವಿಧಾನದ ಬೇಟೆ ಮಲೆ ಮಹದೇಶ್ವರ ವನ್ಯಜೀವಿ ಪ್ರದೇಶ ಹಾಗೂ ಕಾವೇರಿ ವನ್ಯಜೀವಿ ವಲಯಗಳಲ್ಲಿ ವ್ಯಾಪಕವಾಗಿದೆ. ಕೃಷಿಯಲ್ಲಿ ಇಳುವರಿ ಹೆಚ್ಚಳಕ್ಕೆ ಸರ್ಕಾರ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ ಯೂರಿಯಾ ಈ ರೀತಿ ವನ್ಯಜೀವಿಗಳ ಪಾಲಿಗೆ ಕುತ್ತು ತರುತ್ತಿದ್ದು, ಈ ವಿಧಾನದ ಬೇಟೆ ತಡೆಗೆ ಅರಣ್ಯ ಇಲಾಖೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಲಿ ಎಂದು ವನ್ಯಜೀವಿ ಪ್ರಿಯರು ಆಗ್ರಹಿಸುತ್ತಾರೆ.
ಅಪಾರ ಪ್ರಮಾಣದಲ್ಲಿ ಯೂರಿಯಾ ಪ್ರಾಣಿಗಳ ದೇಹ ಸೇರಿದರೆ ಪ್ರಾಣಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಆದರೆ ಯೂರಿಯಾ, ಅಮೋನಿಯಂನಿಂದ ಪ್ರೊಟೀನ್ ಆಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಹಸುಗಳಿಗೆ 0.2ನಿಂದ 0.5ವರೆಗೆ ಒಣಹುಲ್ಲಿಗೆ ಸಿಂಪಡಣೆ ಮಾಡಿಕೊಡಲಾಗುತ್ತದೆ. ಇದರಿಂದ ಹೆಚ್ಚು ಹಾಲು ಉತ್ಪತ್ತಿಯಾಗಲಿದೆ.-ಡಾ.ಪ್ರಸಾದ್ ಮೂರ್ತಿ, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ. * ಗಿರೀಶ್ ಹುಣಸೂರು