ಯಳಂದೂರು: ರಸಗೊಬ್ಬರ ಅಂಗಡಿಗಳು ಲಾಭಕ್ಕಾಗಿ ಯೂರಿಯಾ ದಾಸ್ತಾನು ಇದ್ದರೂ ಇಲ್ಲವೆಂಬ ನೆಪವೊಡ್ಡಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿವೆ. ಈ ಅಂಗಡಿಗಳ ವಿರುದ್ಧ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಆಗ್ರಹಿಸಿದರು.
ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಸ್ಥಾಯಿ ಸಮಿತಿಗಳ ಸಭೆಯಲ್ಲಿ ಮಾತನಾಡಿದ ಅವರು, ಗೊಬ್ಬರದ ಅಂಗಡಿಗಳು ಯೂರಿಯಾ ದಾಸ್ತಾನು, ಬೆಲೆಗಳ ಪಟ್ಟಿಯನ್ನು ಪ್ರದರ್ಶಿಸಬೇಕು ಎಂಬ ನಿಯಮವನ್ನು ಪಾಲಿಸುತ್ತಿಲ್ಲ. ಎಲ್ಲೆಡೆ ಯೂರಿಯಾಕ್ಕೆ ಕೃತಕ ಅಭಾವ ಸೃಷ್ಟಿಯಾಗಿದೆ ಎಂದು ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಎಸ್. ಕೃಷ್ಣ, ಈ ಬಗ್ಗೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ. ಅಲ್ಲದೇ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ಮಾರಾಟ ಮಾಡಲು ಕ್ರಮ ವಹಿಸಲಾಗಿದೆ ಎಂದರು. ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿ ವಡಗೆರೆ ಗ್ರಾಮದ ಬಳಿ 9 ಎಕರೆ ಫಾರಂ ನಿರುಪಯುಕ್ತವಾಗಿದೆ. ಇದನ್ನು ಮಾದರಿ ಫಾರಂ ಹೌಸ್ ಮಾಡಲು ಕ್ರಮ ವಹಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಈಬಗ್ಗೆ ಕ್ರಮ ವಹಿಸುವುದಾಗಿ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಭರವಸೆ ನೀಡಿದರು. ಸಹಕಾರ ಇಲಾಖೆ ವತಿಯಿಂದ ಮೀನುಗಾರಿಕೆ ಮತ್ತು ಹೈನುಗಾರಿಕೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದು ಸಹಕಾರ ಇಲಾಖೆ ಫಣಿರಾಜ್‌ಪಂಡಿತ್ ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ, ಶಿಕ್ಷಣ, ಪಂಚಾಯತ್‌ರಾಜ್ ಮತ್ತಿತರ ಇಲಾಖೆಗಳ ಪ್ರಗತಿ ಬಗ್ಗೆ ಚರ್ಚಿಸಲಾಯಿತು. ತಾಪಂ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಪದ್ಮಾವತಿ, ಪಲ್ಲವಿ, ಮಣಿ, ಪುಟ್ಟು ಇಒ ಬಿ.ಎಸ್. ರಾಜು ಇತರರಿದ್ದರು.