ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ 250 ಕೋಟಿ ರೂ. ಅನುದಾನ ನೀಡುವಂತೆ ನಗರ ಜಿಲ್ಲಾ ಪಂಚಾಯ್ತಿ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು ನಗರ ಜಿಪಂಅಧ್ಯಕ್ಷರು ಮತ್ತು ಸದಸ್ಯರ ನಿಯೋಗ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿತು. “ಬಿಬಿಎಂಪಿಗೆ ಹೊಂದಿಕೊಂಡಿರುವ ನಗರ ಜಿಲ್ಲೆ ಪ್ರದೇಶಗಳಲ್ಲಿ ಅಭಿವೃದ್ದಿಗೆ ಕಾಯ್ದಿರಿಸಿರುವ ಅನುದಾನ ಕಡಿಮೆ.
ಹಾಗಾಗಿ ರಾಜ್ಯ ಸರ್ಕಾರದಿಂದ 250 ಕೋಟಿ ರೂ.ಅನುದಾನ ನೀಡಬೇಕು,” ಎಂದು ಕೋರಿಕೆ ಸಲ್ಲಿಸಿತು. ಇದೇ ರೀತಿ ಜಿಪಂ ಪ್ರಭಾರ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಬದಲಿಗೆ ಕಾಯಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ನಿಯೋಜಿಸುವಂತೆ ನಿಯೋಗ ಕೋರಿತು.
ಕಟ್ಟಡ ಕಾಲುವೆ ಮೇಲಿದ್ದರೆ ಕಷ್ಟ!: ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಾರ್ವಜನಿಕರ ಅಹವಾಲು ಆಲಿಸಿದರು. ಆ ಸಂದರ್ಭದಲ್ಲಿ ರಾಜರಾಜೇಶ್ವರಿನಗರ ಬಳಿಯ ಐಡಿಯಲ್ ಹೋಮ್ಸ್‌ನ ನಿವಾಸಿಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, “ಕಾಲುವೆ ಮೇಲೆ ಕಟ್ಟಡವಿದ್ದರೆ ಕಷ್ಟ’ ಎಂದರು.
ಬಿಡಿಎ ಅಂಗೀಕರಿಸಿರುವ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆದರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಅಧಿಕಾರಿಗಳು ಪದೇ ಪದೇ ದಾಖಲೆಗಳನ್ನು ಕೇಳುತ್ತಿರುವುದರಿಂದ ಆತಂಕವಾಗಿದೆ. ತಮ್ಮ ಕಟ್ಟಡಗಳನ್ನು ಉಳಿಸಿಕೊಡಬೇಕು ಎಂದು ಕೆಲ ನಿವಾಸಿಗಳು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕಾಲುವೆ ಮೇಲೆ ಕಟ್ಟಡವಿದ್ದರೆ ಕಷ್ಟ. ಕಾಲುವೆ ಜಾಗದಲ್ಲಿ ಇರದಿದ್ದರೆ ಪರಿಹಾರ ಕಂಡುಕೊಳ್ಳಬಹುದು’ ಎಂದರು. ಆಗ ಮಹಿಳೆಯೊಬ್ಬರು ಕಾಲುವೆ ಮೇಲಿಲ್ಲ ಎಂದಾಗ, ಹಾಗಾದರೆ ಪರಿಶೀಲಿಸುವಂತೆ ಸೂಚಿಸಲಾಗುವುದು ಎಂದರು.