ಭರೂಚ್: ನಗರ ನಕ್ಸಲರು ಹೊಸ ರೂಪದೊಂದಿಗೆ ಗುಜರಾತ್ ಪ್ರವೇಶಿಸಲು ಯತ್ನಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಅಕ್ಟೋಬರ್ 10) ಆರೋಪಿಸಿದ್ದು, ಆದರೆ ಯುವಕರ ಜೀವನವನ್ನು ನಾಶ ಮಾಡಲು ರಾಜ್ಯದ ಜನರು ಅವಕಾಶ ನೀಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ:ವನಿತಾ ಏಷ್ಯಾ ಕಪ್ : ಥಾಯ್ಲೆಂಡ್ 37 ಕ್ಕೆ ಆಲೌಟ್ ; ಭಾರತಕ್ಕೆ ಅಮೋಘ ಜಯ
ಗುಜರಾತ್ ನ ಭರೂಚ್ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ನಗರ ನಕ್ಸಲರು ಹೊಸ ರೂಪದೊಂದಿಗೆ ರಾಜ್ಯದೊಳಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಅವರು ತಮ್ಮ ಉಡುಗೆ, ತೊಡುಗೆಯನ್ನೂ ಬದಲಾಯಿಸಿಕೊಂಡಿದ್ದಾರೆ. ನಗರ ನಕ್ಸಲರು ಅಮಾಯಕ ಯುವಕರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ತಳವೂರಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪರೋಕ್ಷವಾಗಿ ಆಪ್ ವಿರುದ್ಧ ವಾಗ್ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ನಾವು ನಮ್ಮ ಯುವ ಪೀಳಿಗೆಯ ಭವಿಷ್ಯ ಹಾಳಾಗಲು ಅವಕಾಶ ನೀಡಬಾರದು. ದೇಶವನ್ನು ನಾಶ ಮಾಡಲು ಯತ್ನಿಸುತ್ತಿರುವ ನಗರ ನಕ್ಸಲೀಯರ ಬಗ್ಗೆ ನಾವು ನಮ್ಮ ಮಕ್ಕಳಿಗೆ ಎಚ್ಚರಿಕೆ ನೀಡಬೇಕಾಗಿದೆ. ಅವರು ವಿದೇಶಿ ಶಕ್ತಿಗಳ ಏಜೆಂಟ್ ಗಳಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.