Advertisement

ಕೋಲಾರದಲ್ಲಿ ನಗರ ಸಾರಿಗೆ ಮತ್ತೆ ಆರಂಭ

12:21 PM Jul 13, 2019 | Team Udayavani |

ಕೋಲಾರ: ಜಿಲ್ಲಾ ಕೇಂದ್ರದ ನಿವಾಸಿಗಳ ಬಹು ವರ್ಷಗಳ ಕನಸಾಗಿರುವ ನಗರ ಸಾರಿಗೆಯನ್ನು ಸಾರಿಗೆ ಸಂಸ್ಥೆಯು ಸದ್ದುಗದ್ದಲವಿಲ್ಲದೆ ಆರಂಭಿಸಿದೆ. ಹಿಂದೆ ಹಲವು ಬಾರಿ ನಗರ ಸಾರಿಗೆಯನ್ನು ಆರಂಭಿಸಿ, ಮತ್ತಷ್ಟೇ ವೇಗದಲ್ಲಿ ಸ್ಥಗಿತಗೊಳಿಸುತ್ತಿದ್ದ ಸಾರಿಗೆ ಸಂಸ್ಥೆಯು, ಇದೀಗ ಯಾವುದೇ ಪ್ರಚಾರ ಬಯಸದೆ, ಎರಡು ಬಸ್‌ಗಳನ್ನು ಓಡಿಸುತ್ತಿದೆ.

Advertisement

ನಗರ ಸಾರಿಗೆ ಇತಿಹಾಸ: ನಗರಕ್ಕೆ ಸಾರಿಗೆ ಸೌಲಭ್ಯ ಬೇಕು ಎಂಬುದು ನಾಗರಿಕರ ಎರಡು ದಶಕಗಳ ಕನಸು. ಆದರೆ, ನನಸು ಮಾಡಲು ಜನಪ್ರತಿನಿಧಿಗಳು ಹಾಗೂ ಸಾರಿಗೆ ಸಂಸ್ಥೆ ಪ್ರಾಮಾಣಿಕವಾಗಿ ಪ್ರಯತ್ನಿಸಲೇ ಇಲ್ಲ. ದಿವಂಗತ ಬೈರೇಗೌಡರು ಜಿಲ್ಲಾ ಮಂತ್ರಿಯಾಗಿದ್ದಾಗ ಒತ್ತಾಯದ ಮೇರೆಗೆ ಸಂಚಾರ ಆರಂಭಿಸಿದ್ದರು. ಆದರೆ, ಹೆಚ್ಚು ದಿನ ಬಸ್‌ ಸಂಚರಿಸಲೇ ಇಲ್ಲ. ಆನಂತರ ಮೂರು ನಾಲ್ಕು ಬಾರಿ ಅಧಿಕಾರಿ ವಲಯದಲ್ಲಿಯೇ ಪ್ರಯತ್ನಗಳಾಗಿದ್ದವು. ಆದರೆ, ಆದಾಯದ ಕೊರತೆ ನೆಪವೊಡ್ಡಿ ಸ್ಥಗಿತಗೊಳಿಸಲಾಗಿತ್ತು.

ಗ್ರಾಮಾಂತರ ಸೇವೆ: ಐದು ವರ್ಷಗಳ ಹಿಂದೆ ವರ್ತೂರು ಪ್ರಕಾಶ್‌ ಜಿಲ್ಲಾ ಮಂತ್ರಿಯಾಗಿದ್ದಾಗ ಸಾರಿಗೆ ಸಚಿವರಾಗಿದ್ದ ಆರ್‌.ಅಶೋಕ್‌ ಕೋಲಾರಕ್ಕೆ ಆಗಮಿಸಿದ್ದ ವೇಳೆ ನಗರ ಸಾರಿಗೆ ಸಂಚಾರಕ್ಕೆ ಚಾಲನೆ ನೀಡಿದ್ದರು. ಆದರೆ, ಇದು ಹೆಚ್ಚು ದಿನ ಸಂಚರಿಸಲಿಲ್ಲ. ನರ್ಮ್ ಬಸ್‌ಗಳ ಮೂಲಕ ನಗರ ಸಾರಿಗೆ ಬಸ್‌ ನಿಲ್ದಾಣವನ್ನೇ ಆರಂಭಿಸುವುದಾಗಿ ಹೇಳಿಕೊಂಡಿದ್ದ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಕನಿಷ್ಠ ಬಸ್‌ಗಳ ಸಂಚಾರವನ್ನೂ ಆರಂಭಿಸಲಿಲ್ಲ. ಇದ್ದ ನರ್ಮ್ ಯೋಜನೆಯ ಬಸ್‌ಗಳನ್ನು ಗ್ರಾಮಾಂತರ ಸೇವೆಗೆ ಬಳಸಿಕೊಳ್ಳಲಾಗಿತ್ತು.

ಎರಡು ಮಾರ್ಗ: ಮೂರು ತಿಂಗಳ ಹಿಂದೆ ಹಸಿರು ಬಣ್ಣದ 200 ಮತ್ತು 201 ಸಂಖ್ಯೆಯ ಎರಡು ಬಸ್‌ ಓಡಾಟ ನಡೆಸುತ್ತಿದ್ದು, ಬೆಳಗ್ಗೆ 8.30 ರಿಂದ ಸಂಜೆ 6.30 ರವರೆಗೆ ಬಸ್‌ ನಿಲ್ದಾಣದಿಂದ ನಗರದ ಎರಡು ಮಾರ್ಗಗಳಲ್ಲಿ ಸಂಚರಿಸುತ್ತಿದೆ. ಎರಡೂ ಬಸ್‌ಗಳು ತೆರಳಿದ್ದ ಮಾರ್ಗಗಳಲ್ಲೇ ವಾಪಸ್‌ ಬಸ್‌ ನಿಲ್ದಾಣಕ್ಕೆ ಬರುತ್ತಿದೆ. ಈ ಎರಡು ಬಸ್‌ಗಳಿಂದ ನಗರದಿಂದ ದೂರದಲ್ಲಿರುವ ಡಿ.ಸಿ. ಕಚೇರಿಗೆ ನಾಗರಿಕರು ಸುಲಭವಾಗಿ ತೆರಳಲು ಸಾಧ್ಯವಾಗುತ್ತಿದೆ.

ಟಿಕೆಟ್ ದರ ನಿಗದಿ: 7 ಮತ್ತು 10 ರೂ. ಟಿಕೆಟ್ ದರದಲ್ಲಿ ನಾಗರಿಕರು ಈ ಬಸ್‌ನಲ್ಲಿ ಸಂಚರಿಸಬ ಹುದಾಗಿದೆ. ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣದಿಂದ ಜನರು ನೂರಾರು ರೂ. ವೆಚ್ಚ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿದ್ದಾರೆ. ನಗರದ ವಿವಿಧ ಬಡಾವಣೆಗಳ ನಾಗರಿಕರು ದುಬಾರಿ ಬೆಲೆ ತೆತ್ತು ಆಟೋಗಳಲ್ಲಿ ಸಂಚರಿಸುವ ಅನಿವಾರ್ಯತೆ ಇದೆ.

Advertisement

ಮತ್ತೇನು ಮಾಡಬೇಕು?: ಈಗ ಆರಂಭಿಸಿರುವ ನಗರ ಸಾರಿಗೆ ಎರಡು ಮಾರ್ಗಗಳಲ್ಲಿ ಹಸಿರು ಬಣ್ಣದ ಬಸ್‌ಗಳಿಗೆ ಬದಲಾಗಿ ನಗರ ಸಾರಿಗೆಗೆ ಪ್ರತ್ಯೇಕ ಬಣ್ಣದಲ್ಲಿ ಬಸ್‌ಗಳನ್ನು ಸಂಚರಿಸಲು ಅವಕಾಶ ಕಲ್ಪಿಸಬೇಕಾಗುತ್ತದೆ. ಏಕೆಂದರೆ, ಈಗಾಗಲೇ ಹಸಿರು ಬಣ್ಣದಲ್ಲಿ ನರ್ಮ್ ಮತ್ತು ಗ್ರಾಮಾಂತರ ಸಾರಿಗೆ ಇನ್ನಿತರ ಬಸ್‌ಗಳು ಸಂಚರಿಸುತ್ತಿರುವುದರಿಂದ ನಗರ ಸಾರಿಗೆ ಬಸ್‌ಗಳನ್ನು ಸುಲಭವಾಗಿ ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ.

ಬಸ್‌ ನಿಲುಗಡೆ: ನಗರ ಸಾರಿಗೆಯ ಎರಡು ಬಸ್‌ಗಳು ನಿಲುಗಡೆ ನೀಡುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಸಾರಿಗೆ ಸಂಸ್ಥೆಯಿಂದಲೇ ಮಾಹಿತಿ ಫ‌ಲಕಗಳನ್ನು ಅಳವಡಿಸಬೇಕು. ಈ ಮಾಹಿತಿ ಫ‌ಲಕಗಳಲ್ಲಿ ನಗರ ಸಾರಿಗೆ ಬಸ್‌ಗಳು ಯಾವ ಸಮಯದಲ್ಲಿ ಯಾವ ದಿಕ್ಕಿನಿಂದ ಆಗಮಿಸುತ್ತದೆ, ಯಾವ ದಿಕ್ಕಿನತ್ತ ತೆರಳುತ್ತದೆಯೆಂಬ ಮಾಹಿತಿ ವೇಳಾಪಟ್ಟಿಯನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ.

ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಗರ ಸಾರಿಗೆಯನ್ನು ಆರಂಭಿಸಿರುವುದರ ಜೊತೆಗೆ ಕನಿಷ್ಠ ನಿಲುಗಡೆ ಮತ್ತು ವೇಳಾಪಟ್ಟಿ ಪ್ರಕಟಿಸುವ ಕೆಲಸ ಮಾಡಿದರೆ, ನಗರದ ನಾಗರಿಕರು ಆಟೋ ಮತ್ತು ದುಬಾರಿ ದರದಲ್ಲಿ ಸಂಚರಿಸುವುದರ ಬದಲು ನಗರ ಸಾರಿಗೆ ಬಸ್‌ಗಳಿಗೆಗಾಗಿ ಸಂಬಂಧಪಟ್ಟ ನಿಲುಗಡೆಯಲ್ಲಿ ಕಾಯಲು ಅನುಕೂಲವಾಗುತ್ತದೆ. ನಗರ ಸಾರಿಗೆಯೂ ಜನಪ್ರಿಯಗೊಳ್ಳಲು ಸಾಧ್ಯವಾಗುತ್ತದೆ.

200, 201 ಸಂಖ್ಯೆಯ ಓಡಾಡುವ ಮಾರ್ಗ:

ಮೂರು ತಿಂಗಳ ಹಿಂದೆ ಹಸಿರು ಬಣ್ಣದ 200 ಮತ್ತು 201 ಸಂಖ್ಯೆಯ ಎರಡು ಬಸ್‌ ಓಡಾಟ ನಡೆಸುತ್ತಿದ್ದು, ಬೆಳಗ್ಗೆ 8.30 ರಿಂದ ಸಂಜೆ 6.30 ರವರೆಗೆ ಬಸ್‌ ನಿಲ್ದಾಣದಿಂದ ನಗರದ ಎರಡು ಮಾರ್ಗಗಳಲ್ಲಿ ಸಂಚರಿಸುತ್ತಿದೆ. ಬಸ್‌ ಸಂಖ್ಯೆ 200 ಬಸ್‌ ನಿಲ್ದಾಣ ಬಿಟ್ಟು ನಿಲ್ದಾಣದಿಂದ ಎಡ ಭಾಗದಲ್ಲಿ ಎಂ.ಬಿ. ರಸ್ತೆ, ಅಮ್ಮವಾರಿಪೇಟೆ ವೃತ್ತ, ಮೆಕ್ಕೆ ವೃತ್ತ, ಕೋರ್ಟ್‌ ಸರ್ಕಲ್, ಗಾಂಧಿನಗರ, ಡಿ.ಸಿ. ಕಚೇರಿಯವರೆಗೂ ತೆರಳುತ್ತದೆ. ಬಸ್‌ ಸಂಖ್ಯೆ 201 ರ ಬಸ್‌ ಬಸ್‌ ನಿಲ್ದಾಣ, ಗಡಿಯಾರಗೋಪುರ ವೃತ್ತ, ಡೂಂಲೈಟ್ ವೃತ್ತ, ಎಸ್‌ಎನ್‌ಆರ್‌ ಆಸ್ಪತ್ರೆ ವೃತ್ತ, ಬಂಗಾರಪೇಟೆ ಅಂಬೇಡ್ಕರ್‌ ಪ್ರತಿಮೆ ವೃತ್ತ, ಕಾಲೇಜು ವೃತ್ತ, ಹಳೇ ಬಸ್‌ ನಿಲ್ದಾಣ, ಮೆಕ್ಕೆ ವೃತ್ತ, ಕೋರ್ಟ್‌ ವೃತ್ತ, ಗಾಂಧಿನಗರ, ಟಮಕ, ಡಿ.ಸಿ. ಕಚೇರಿಗೆ ತೆರಳುತ್ತದೆ.
● ಕೆ.ಎಸ್‌.ಗಣೇಶ್‌
Advertisement

Udayavani is now on Telegram. Click here to join our channel and stay updated with the latest news.

Next