Advertisement

ಅಕ್ಷರ ಜಾತ್ರೆಗೆ ಕರದಂಟು ನಗರಿ ಸಜ್ಜು

10:25 AM Jun 28, 2019 | Team Udayavani |

ಬೆಳಗಾವಿ: ಇದೇ ಮೊದಲ ಬಾರಿಗೆ ಕರದಂಟು ನಗರಿಯಲ್ಲಿ ಜೂ. 28ರಿಂದ ನಡೆಯಲಿರುವ ಬೆಳಗಾವಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಗೋಕಾಕ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಎಲ್ಲ ಕಡೆ ಬ್ಯಾನರ್‌, ಕಟೌಟ್‌ಗಳು ರಾರಾಜಿಸುತ್ತಿವೆ.

Advertisement

ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜೂ. 28, 29ರಂದು ಡಾ| ಗುರುದೇವಿ ಹುಲೆಪ್ಪನವರಮಠ ಅವರ ಸರ್ವಾಧ್ಯಕ್ಷತೆಯಲ್ಲಿ ಗೋಕಾಕನ ಕೆಎಲ್ಇ ಸಂಸ್ಥೆಯ ಎಂ.ಬಿ. ಮುನವಳ್ಳಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ನಡೆಯಲಿದೆ. ಸಮ್ಮೇಳನಕ್ಕೆ ಮುಖ್ಯ ವೇದಿಕೆ ಸಿದ್ಧಗೊಂಡಿದ್ದು, ಸುಮಾರು 2500ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನ 6 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಇದೆ. ನಗರದ ಬಸವೇಶ್ವರ ವೃತ್ತದಿಂದ ನಡೆಯಲಿರುವ ಭವ್ಯ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಸ್ಕೌಟ್-ಗೈಡ್ಸ್‌ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಕನ್ನಡ ಹೋರಾಟಗಾರರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಅಕ್ಕಿ ಉದಯವಾಣಿಗೆ ತಿಳಿಸಿದ್ದಾರೆ.

ಜೂ. 28ರಂದು ಬೆಳಗ್ಗೆ 8 ಗಂಟೆಗೆ ರಾಷ್ಟ್ರಧ್ವಜವನ್ನು ಹಿರಿಯ ಸ್ವಾತಂತ್ರ್ಯ ಯೋಧ ಗುರುಲಿಂಗಪ್ಪ ಗುಣಕಿ, ನಾಡಧ್ವಜವನ್ನು ಎಸ್‌.ಎನ್‌. ಗುದಗನವರ, ಪರಿಷತ್‌ ಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್‌ ನೆರವೇರಿಸುವರು. ಬೆಳಗ್ಗೆ 9 ಗಂಟೆಗೆ ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯನ್ನು ಯುವ ಧುರೀಣ ಲಖನ್‌ ಜಾರಕಿಹೊಳಿ ಉದ್ಘಾಟಿಸುವರು.

ಬೆಳಗ್ಗೆ 10 ಗಂಟೆಗೆ ಅರಣ್ಯ ಮತ್ತು ಪರಿಸರ ಸಚಿವ ಸತೀಶ ಜಾರಕಿಹೊಳಿ ಸಮ್ಮೇಳನ ಉದ್ಘಾಟಿಸುವರು. ನಿಡಸೋಸಿ ಶ್ರೀ ದುರದುಂಡೀಶ್ವರಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಗೋಕಾಕ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ, ಶಾಸಕ ರಮೇಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಜ್ಯೋತಿ ಹೊಸೂರು, ಸರ್ವಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಉಪಸ್ಥಿತರಿರುವರು. ಡಾ| ಗುರುರಾಜ ಕರಜಗಿ ಉಪನ್ಯಾಸ ನೀಡುವರು.

Advertisement

ಗ್ರಂಥಗಳ ಲೋಕಾರ್ಪಣೆ, ಪುಸ್ತಕ ಮಳಿಗೆಗಳು, ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಆಗಲಿದೆ. ಮಧ್ಯಾಹ್ನ 1ರಿಂದ ವಿಶೇಷ ಸಂಗೀತ ಕಾರ್ಯಕ್ರಮ, 1:30ಕ್ಕೆ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಗೋಷ್ಠಿ ನಡೆಯಲಿದೆ. ಬಳಿಕ ವಿವಿಧ ಗೋಷ್ಠಿ, ಸರ್ವಾಧ್ಯಕ್ಷರ ಪರಿಚಯ ಮತ್ತು ಸಂವಾದಗೋಷ್ಠಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next